ಮುಖ್ಯಮಂತ್ರಿ ಹುದ್ದೆ; ಕೆಪಿಸಿಸಿ ಅಧ್ಯಕ್ಷ ಡಿಕೆಶಿ 5 ಬೇಡಿಕೆಗಳು
ಬೆಂಗಳೂರು, ಮೇ 16; "ನನಗೆ ಯಾರ ಬೆಂಬಲವೂ ಬೇಡ. ನನ್ನ ಜೊತೆ ಯಾವ ಶಾಸಕರೂ ಇಲ್ಲ. ಯಾರು, ಯಾರನ್ನು ಬೇಕಾದರೂ ಕರೆದುಕೊಂಡು ಹೋಗಲಿ. ನನ್ನ ಅಧ್ಯಕ್ಷತೆಯಲ್ಲಿ ಪಕ್ಷದ 135 ಶಾಸಕರು ಆಯ್ಕೆಯಾಗಿದ್ದಾರೆ" ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೋಮವಾರ ರಾತ್ರಿ ದೆಹಲಿ ಪ್ರವಾಸ ರದ್ದುಗೊಳಿಸುವ ಸಂದರ್ಭದಲ್ಲಿ ಹೇಳಿದ ಮಾತಿದು.
ಮಂಗಳವಾರ ಬೆಳಗ್ಗೆ 9.50ಕ್ಕೆ ಡಿ. ಕೆ. ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ. ಶಿಮ್ಲಾದಿಂದ ಸೋನಿಯಾ ಗಾಂಧಿ ಇಂದು ವಾಪಸ್ ಆಗಲಿದ್ದು, ಅವರ ನಿವಾಸದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಮಹತ್ವದ ಸಭೆ ನಡೆಯಲಿದೆ. ಸಿದ್ದರಾಮಯ್ಯ ಸೋಮವಾರ ಮಧ್ಯಾಹ್ನವೇ ದೆಹಲಿಗೆ ತೆರಳಿದ್ದು, ಅವರ ಜೊತೆ ಹಲವು ಶಾಸಕರು ಇದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಸರ್ಕಾರ ರಚನೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ಸೋಮವಾರ ಇಡೀ ದಿನ ಉತ್ತರ ಸಿಕ್ಕಿಲ್ಲ. ದೆಹಲಿ ಮತ್ತು ಬೆಂಗಳೂರಿನಲ್ಲಿ ನಡೆದ ಹಲವು ಬೆಳವಣಿಗೆ ಅಂತಿಮ ತೀರ್ಮಾನಕ್ಕೆ ಬರಲು ವಿಫಲವಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕು ಎಂಬ ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿದೆ. ದೆಹಲಿಯಲ್ಲಿ ಸರಣಿ ಸಭೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಯಾರು?.

ಡಿ. ಕೆ. ಶಿವಕುಮಾರ್ ಬೇಡಿಕೆಗಳು; ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ. ಕೆ. ಶಿವಕುಮಾರ್ ಕೆಪಿಸಿಸಿಯ ಅಧ್ಯಕ್ಷರು. ಅವರ ಸಾರಥ್ಯದಲ್ಲಿಯೇ ಚುನಾವಣೆ ಎದುರಿಸಿ ಪಕ್ಷ 135 ಸೀಟುಗಳಲ್ಲಿ ಜಯಗಳಿಸಿದೆ. ಆದ್ದರಿಂದ ಅವರು ಸಿಎಂ ಪಟ್ಟಕ್ಕಾಗಿ ಬಿಗಿಪಟ್ಟು ಹಿಡಿದಿದ್ದಾರೆ. ಹೈಕಮಾಂಡ್ ಮುಂದೆ ಅವರ ಬೇಡಿಕೆಗಳು ಹೀಗಿವೆ...
1. ಹೈಕಮಾಂಡ್ ಮಟ್ಟದಲ್ಲಿಯೇ ನೂತನ ಮುಖ್ಯಮಂತ್ರಿಯ ಆಯ್ಕೆಯಾಗಬೇಕು. ಕೆಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡುವ ಸಂದರ್ಭದಲ್ಲಿ ಹೈಕಮಾಂಡ್ ನಾಯಕರು ನೀಡಿದ ಭರವಸೆಗಳಿಗೆ ಬದ್ಧರಾಗಿ ಇರಬೇಕು.
2. ಮುಖ್ಯಮಂತ್ರಿ ಹುದ್ದೆಯನ್ನು ಎರಡು ಅವಧಿಗೆ ವಿಭಾಗ ಮಾಡುವುದಾದರೆ ಮೊದಲ ಅವಧಿ ನನಗೆ ನೀಡಬೇಕು. ಸಿದ್ದರಾಮಯ್ಯ ಈಗಾಗಲೇ ಮುಖ್ಯಮಂತ್ರಿಯಾಗಿದ್ದಾರೆ. ಆದ್ದರಿಂದ ಮೊದಲ ಅವಧಿಯಲ್ಲಿ ನನ್ನ ಹೆಸರು ಪರಿಗಣಿಸಬೇಕು.
3. ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಚುನಾವಣೆ ಎದುರಿಸಿ, ಗೆದ್ದಿದೆ. ಆದ್ದರಿಂದ ಮುಖ್ಯಮಂತ್ರಿ ಹುದ್ದೆ ನೀಡಬೇಕು. ಎಸ್. ಎಂ. ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲಾಗಿತ್ತು.
4. ನಾನು ಮುಖ್ಯಮಂತ್ರಿಯಾಗುತ್ತೇನೆ ಎಂಬ ಕಾರಣಕ್ಕೆ ಜೆಡಿಎಸ್‌ನ ಒಕ್ಕಲಿಗ ಮತಗಳು ಕಾಂಗ್ರೆಸ್‌ಗೆ ಬಂದಿವೆ. ಒಂದು ವೇಳೆ ಮುಖ್ಯಮಂತ್ರಿ ಮಾಡದಿದ್ದರೆ 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ರಾಜ್ಯದಲ್ಲಿ ಹಿನ್ನಡೆಯಾಗಲಿದೆ.
5. ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಾನು. ಪಕ್ಷ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇನೆ. ಭಾರತ್ ಜೋಡೋ ಯಾತ್ರೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿಸಿದ್ದೇನೆ. ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಿದ್ದೇನೆ. ಮಾಡಿದ ಕಾರ್ಯಕ್ಕೆ ಈಗ ಪ್ರತಿಫಲ ಕೇಳುತ್ತಿದ್ದೇನೆ ಎಂದು ಡಿ. ಕೆ. ಶಿವಕುಮಾರ್ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಇದೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿತ್ತು. ಸಭೆಗೆ ವೀಕ್ಷಕರಾಗಿ ಬಂದಿದ್ದ ಸುಶೀಲ್ ಕುಮಾರ್ ಶಿಂಧೆ, ಜಿತೇಂದರ್ ಸಿಂಗ್, ದೀಪಕ್ ಬಾಬರಿಯಾ ದೆಹಲಿಗೆ ತೆರಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಸಭೆಯ ತೀರ್ಮಾನ ತಿಳಿಸಿದ್ದಾರೆ. ಸಭೆಯಲ್ಲಿ ಪ್ರತಿ ಶಾಸಕರ ಅಭಿಪ್ರಾಯ ಸಂಗ್ರಹಣೆ ಮಾಡಿದ್ದು, ವಿವರವಾದ ವರದಿ ತಯಾರು ಮಾಡಿದ್ದಾರೆ.
ಕಾಂಗ್ರೆಸ್ ವರಿಷ್ಠರು ಮುಖ್ಯಮಂತ್ರಿಯನ್ನು ಅಂತಿಮಗೊಳಿಸಲು ಮೂರು ಸೂತ್ರ ರಚನೆ ಮಾಡಿದ್ದಾರೆ ಎಂಬ ಮಾಹಿತಿ ಇದೆ. ರಾಜ್ಯದ ರಾಜಕೀಯವನ್ನು ಚೆನ್ನಾಗಿ ಬಲ್ಲ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಮನವೊಲಿಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ.












Click it and Unblock the Notifications