ಕೆಎಸ್ಸಾರ್ಟಿಸಿಗೆ ಪಾಠ ಕಲಿಸಿದ ಮೈಸೂರಿನ ಕಂಡಕ್ಟರ್!

ಕಂಡಕ್ಟರ್ ಚಂದ್ರಶೇಖರಯ್ಯ ಕಥೆ-ವ್ಯಥೆ ಹೀಗಿದೆ:
ಮೂಲತಃ ಮೈಸೂರಿನವರಾದ ಸಂತ್ರಸ್ತ ಚಂದ್ರಶೇಖರಯ್ಯ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 11 ವರ್ಷ ಕಾಲ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಆದರೆ 2000ರ ಏಪ್ರಿಲ್‌ನಲ್ಲಿ ಅವರ ಕಾಲಿಗೆ ಗ್ಯಾಂಗ್ರೀನ್ ಆಗಿತ್ತು. ವಿಧಿಯಿಲ್ಲದೆಕಾಲು ಕತ್ತರಿಸಲಾಯಿತು. ಅಷ್ಟಕ್ಕೇ ಸರಕಾರಿ ಸಂಸ್ಥೆಯಾದ ಕೆಎಸ್ಸಾರ್ಟಿಸಿ ಅವರಿಗೆ 'ವಿಕಲಚೇತನ' ಹಣೆಪಟ್ಟಿ ಹಚ್ಚಿ ಬಲವಂತವಾಗಿ ನಿರುದ್ಯೋಗಿಯನ್ನಾಗಿ ಮಾಡಿತ್ತು.
ಇದೀಗ 54 ವರ್ಷದ ಚಂದ್ರಶೇಖರಯ್ಯ ಅವರು ಸತತ 8 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ, ವಿಜಯ ನಗೆ ಚೆಲ್ಲಿದ್ದಾರೆ. ಹೋರಾಟ ಫಲ ನೀಡಿದ್ದರಿಂದ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ. ( ತುಂಬು ಜೀವಂತಿಕೆಯ ಈ ತಾಜಾ ಚಿತ್ರವನ್ನೊಮ್ಮೆ ನೋಡಿ )
'ಚಂದ್ರಶೇಖರಯ್ಯ ಆವರನ್ನು ವಜಾಗೊಳಿಸಿದ ದಿನದಿಂದ (ಮಾರ್ಚ್ 2001 ರಿಂದ) ಇಲ್ಲಿಯವರೆಗೆ ಶೇ. 75ರಷ್ಟು ಬಾಕಿ ವೇತನ ನೀಡಬೇಕು. ಜತೆಗೆ ಅವರಿಗೆ ಮೊದಲಿನ ವೇತನ ಶ್ರೇಣಿ ಇರುವ ಬೇರೆ ಹುದ್ದೆಯನ್ನು ನೀಡಿ ಅವರ ನೌಕರಿಯನ್ನು ಮುಂದುವರಿಸಬೇಕು' ಎಂದು ಹೈಕೋರ್ಟ್ KSRTCಗೆ ಆದೇಶಿಸಿದೆ. ( ಕೆಬಿಸಿ: ಆಸಿಡ್ ದಾಳಿಯ ಸೋನಾಲಿಗೆ 25ಲಕ್ಷ ಬಹುಮಾನ )
ಚಂದ್ರಶೇಖರಯ್ಯ, ನಾಲ್ಕು ವರ್ಷಗಳ ನಂತರ 2005ರಲ್ಲಿ ಕೈಗಾರಿಕಾ ವ್ಯಾಜ್ಯ ಹೂಡಿದರು. ಅದನ್ನು ಮೈಸೂರಿನ ಕೈಗಾರಿಕಾ ನ್ಯಾಯಮಂಡಳಿಗೆ ವರ್ಗಾಯಿಸಲಾಗಿತ್ತು. ಕೈಗಾರಿಕಾ ನ್ಯಾಯಮಂಡಳಿ 2008ರ ಜೂನ್ 30ರಂದು, ಕೆಎಸ್ಸಾರ್ಟಿಸಿಯ ಕಡ್ಡಾಯ ನಿವೃತ್ತಿ ಆದೇಶ ರದ್ದುಗೊಳಿಸಿತಲ್ಲದೆ, ನಿಗಮಕ್ಕೆ ಮಾನವೀಯತೆ ಆಧಾರದ ಮೇಲೆ ಕೆಲಸ ನೀಡುವಂತೆ ಸೂಚನೆ ನೀಡಿತು. ಜತೆಗೆ ಚಂದ್ರಶೇಖರಯ್ಯ ಅವರ ಕಾಲಿಗೆ ಗ್ಯಾಂಗ್ರೀನ್ ಆಗಲು ಅವರು ಮಾಡುತ್ತಿದ್ದ ಕೆಲಸ ಕಾರಣವೇ ಎಂಬುದನ್ನು ವೈದ್ಯಕೀಯ ಪರೀಕ್ಷೆ ನಡೆಸಿ ಪತ್ತೆ ಹೆಚ್ಚುವಂತೆ ಸೂಚನೆ ನೀಡಿತ್ತು.
ಇಷ್ಟಕ್ಕೇ ಬಿಡದ ಚಂದ್ರಶೇಖರಯ್ಯ ಅವರು ಕೈಗಾರಿಕಾ ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ಹೈಕೋರ್ಟಿನಲ್ಲಿ ದಾವೆ ಹೂಡಿದರು. ಏಕಸದಸ್ಯ ಪೀಠ ಅವರ ಅರ್ಜಿಯನ್ನು ಇತ್ಯರ್ಥಗೊಳಿಸಿ, ಅವರನ್ನು ಕಸ ಗುಡಿಸುವ (ಸ್ವೀಪರ್) ಕೆಲಸಕ್ಕೆ ನಿಯೋಜಿಸುವಂತೆ ಸೂಚನೆ ನೀಡಿತ್ತಲ್ಲದೆ, ಅದಕ್ಕೆ ತಕ್ಕಂತೆ ವೇತನ ನಿಗದಿ ಮಾಡುವಂತೆಯೂ ಆದೇಶ ನೀಡಿತ್ತು. ಅದರಂತೆ ಇಲಾಖೆ ಅವರನ್ನು ಸ್ವೀಪರ್ ಆಗಿ ಮರಳಿ ಸೇವೆಗೆ ತೆಗೆದುಕೊಂಡಿತು.
ಇಷ್ಟಕ್ಕೆ ತೃಪ್ತರಾಗದ ಚಂದ್ರಶೇಖರಯ್ಯ ಅವರು ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ, ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದರು. ಆ ಅರ್ಜಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ಎಚ್ ವಘೇಲಾ ಹಾಗೂ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರಿದ್ದ ನ್ಯಾಯಪೀಠದ ಮುಂದೆ ಕಳೆದ ವಾರ ವಿಚಾರಣೆಗೆ ಬಂತು.
1995ರ ವಿಕಲಚೇತನರ (ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಸಹಭಾಗಿತ್ವ) ಕಾಯಿದೆ ಸೆಕ್ಷನ್ 47ರ - Section 47 of the Persons with Disabilities (Equal Opportunities, Protection of Rights and Full Participation) Act, 1995 - ಪ್ರಕಾರ, ವಿಕಲಚೇತನ ಎಂಬ ಕಾರಣ ನೀಡಿ ತನ್ನನ್ನು ಸೇವೆಯಿಂದ ವಜಾಗೊಳಿಸುವಂತಿಲ್ಲ ಎಂಬುದು ಅರ್ಜಿದಾರರ ವಾದವಾಗಿತ್ತು. ( ಅಚ್ಚರಿ: ಹೃದಯವೇ ಇಲ್ಲದೆ ಆತ 2 ವರ್ಷ ಬದುಕಿದ! )












Click it and Unblock the Notifications