ಭಕ್ತರಂತೆ ಬಂದ್ರು, ಅರ್ಚಕರನ್ನು ಕಟ್ಟಿಹಾಕಿ ವಿಗ್ರಹ ದೋಚಿದ್ರು!
ಚಿಕ್ಕಬಳ್ಳಾಪುರ, ಮಾ.12 : ಭಕ್ತರಂತೆ ಬಂದಿದ್ದ ಮೂವರು ಪಾಪಾಗ್ನಿ ಮಠದ ಕಾಶಿ ವಿಶ್ವನಾಥ ದೇವಾಲಯದಲ್ಲಿದ್ದ ವಿಗ್ರಹಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಸುಮಾರು 300 ಕೆಜಿ ಪಂಚಲೋಹದ ವಿಗ್ರಹಗಳನ್ನು ಕದ್ದು ಪರಾರಿಯಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿನ ಕಾಶಿ ವಿಶ್ವನಾಥ ದೇವಾಲಯಕ್ಕೆ ಬುಧವಾರ ರಾತ್ರಿ ಕಾರಿನಲ್ಲಿ ಬಂದ ಮೂವರು ಅರ್ಚಕ ಗಂಗಾಧರಾಚಾರಿ ಮತ್ತು ಸಹಾಯಕ ಅರ್ಚಕ ರಾಜೇಶ್ ಅವರನ್ನು ಭೇಟಿ ಮಾಡಿ ತಾವು ಇಲ್ಲಿನ ಭಕ್ತರು ಗುರುವಾರ ಕುಟುಂಬದೊಂದಿಗೆ ವಿಶೇಷ ಪೂಜೆ ಮಾಡಿಸುತ್ತಿದ್ದೇವೆ ಎಂದು ದೇವಾಲಯದಲ್ಲಿ ವಾಸ್ತವ್ಯ ಹೂಡಿದ್ದರು.

ರಾತ್ರಿ 12.30ರ ಸುಮಾರಿಗೆ ಅರ್ಚಕರನ್ನು ಎಬ್ಬಿಸಿದ ಅವರು ಅವರನ್ನು ಕಟ್ಟಿ ಹಾಕಿ ದೇವಾಲಯದಲ್ಲಿದ್ದ 11 ಪಂಚಲೋಹದ ವಿಗ್ರಹಗಳನ್ನು ಕದ್ದು ಪರಾರಿಯಾಗಿದ್ದಾರೆ. ಅರ್ಚಕರ ಕೂಗಾಟ ಕೇಳಿ ಸ್ಥಳೀಯರು ಬಂದು ನೋಡುವಾಗ ಕಳ್ಳರು ಕಾರಿನಲ್ಲಿ ಪರಾರಿಯಾಗಿದ್ದಾರೆ. [ಕುಕ್ಕೆ ಸುಬ್ರಮಣ್ಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ?]
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಮತ್ತು ಎಸ್ಟಿ ದಿವ್ಯ ಗೋಪಿನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 11 ವಿಗ್ರಹಗಳು ಸುಮಾರು 300 ಕೆಜಿ ತೂಕವಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. [ತುಮಕೂರು : ಗೊರವನಹಳ್ಳಿ ದೇವಾಲಯ ಜಿಲ್ಲಾಡಳಿತದ ವಶಕ್ಕೆ]
ಅರ್ಚಕ ಗಂಗಾಧರಾಚಾರಿ ಅವರು ನೀಡಿರುವ ದೂರಿನ ಅನ್ವಯ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಆರೋಪಿಗಳ ಭಾವಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಆರೋಪಿಗಳ ಪತ್ತೆಗೆ ಕಾರ್ಯಚರಣೆ ಆರಂಭಿಸಿದ್ದಾರೆ.












Click it and Unblock the Notifications