ಪಲಿಮಾರು, ರಾಘವೇಶ್ವರ ಶ್ರೀಗಳ ಚಾತುರ್ಮಾಸ ವೃತ ಆರಂಭ
ಉಡುಪಿ ಪಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀಗಳ ಮತ್ತು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಚಾತುರ್ಮಾಸ ವೃತ ಆಷಾಢ ಹುಣ್ಣಿಮೆಯ (ಗುರು ಪೂರ್ಣಿಮಾ) ದಿನವಾದ ಭಾನುವಾರ (ಜು 9) ಆರಂಭವಾಗಿದೆ.
ಬೆಂಗಳೂರು, ಜುಲೈ 9: 2018ರಲ್ಲಿ ಉಡುಪಿ ಪರ್ಯಾಯ ಸರ್ವಜ್ಞ ಪೀಠವನ್ನೇರಲಿರುವ ಪಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀಗಳ ಮತ್ತು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಚಾತುರ್ಮಾಸ ವೃತ ಆಷಾಢ ಹುಣ್ಣಿಮೆಯ (ಗುರು ಪೂರ್ಣಿಮಾ) ದಿನವಾದ ಭಾನುವಾರ (ಜು 9) ಆರಂಭವಾಗಿದೆ.
ಪಲಿಮಾರು ಮಠದ ಶ್ರೀಗಳ ಪುರಪ್ರವೇಶ ಭಾನುವಾರ ಸಂಜೆ ವಿಜೃಂಭಣೆಯಿಂದ ನಗರದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆದರೆ, ರಾಘವೇಶ್ವರ ಶ್ರೀಗಳ 'ಅಭಯ ಚಾತುರ್ಮಾಸ' ಕಾರ್ಯಕ್ರಮ ಗಿರಿನಗರದ ಶಾಖಾಮಠದಲ್ಲಿ ನಡೆದಿದೆ. ಪಲಿಮಾರು ಶ್ರೀಗಳು ಮಲ್ಲೇಶರಂನಲ್ಲಿರುವ ಶಾಖಾ ಮಠದಲ್ಲಿ ಚಾತುರ್ಮಾಸ ವೃತದಲ್ಲಿರುತ್ತಾರೆ.

ಮುಂದಿನ ವರ್ಷ ಎರಡನೇ ಬಾರಿ ಉಡುಪಿ ಕೃಷ್ಣಮಠದ ಪರ್ಯಾಯ ಪೀಠವನ್ನೇರಲಿರುವ ಪಲಿಮಾರು ವಿದ್ಯಾಧೀಶತೀರ್ಥ ಶ್ರೀಗಳ 38ನೇ ಚಾತುರ್ಮಾಸ ವೃತ ಇದಾಗಿದ್ದು, ವೃಥಾಚರಣೆಯ ಮುನ್ನ ಉತ್ತರಭಾರತ ಮತ್ತು ದಕ್ಷಿಣಭಾರತದ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿ ನಗರಕ್ಕೆ ಆಗಮಿಸಿದ್ದಾರೆ.
ಅಭಯಾಕ್ಷರ ಆಂದೋಲನ ಗೋವನ್ನು ಕತ್ತರಿಸುವ ಕತ್ತಿಗೆ ಲೇಖನಿಯಿಂದ ಉತ್ತರ ನೀಡುವ, ರಕ್ತಕ್ಕೆ ಶಾಯಿಯಿಂದ ಉತ್ತರ ನೀಡುವ ಮಹದಭಿಯಾನ, ಇದಕ್ಕೆ ಅಭಯ ಚಾತುರ್ಮಾಸ್ಯ ಮೀಸಲು ಎಂದು ರಾಘವೇಶ್ವರ ಶ್ರೀಗಳು ಅಭಯ ಚಾತುರ್ಮಾಸ ಆರಂಭದ ದಿನ ಆಶೀರ್ವಚನ ನೀಡುತ್ತಾ ಘೋಷಿಸಿದ್ದಾರೆ.
ಪಲಿಮಾರು ಶ್ರೀಗಳ ಪುರಪ್ರವೇಶ ಕಾರ್ಯಕ್ರಮ ಮತ್ತು ಸ್ವಾಗತ ಸಮಾರಂಭದ ವೇಳೆ ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ, ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವಥ್ ನಾರಾಯಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ರಾಘವೇಶ್ವರ ಶ್ರೀಗಳ ಚಾತುರ್ಮಾಸ ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ಉದ್ಯಮಿ ಪವನ್ ಶೇಟ್, ಪಶುವೈದ್ಯ ಡಾ.ಬಸವರಾಜ ಬಿರಾದಾರ್, ಹವ್ಯಕ ಸಭಾ ಅಧ್ಯಕ್ಷ ಡಾ.ಗಿರಿಧರ್ ಕಜೆ, ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು ಸೇರಿದಂತೆ ಹಲವರು ಭಾಗವಹಿಸಿದ್ದರು.

ಋಷಿ ಪರಂಪರೆಯಲ್ಲಿ ಚಾತುರ್ಮಾಸ ಕಾಲವು ಪುಣ್ಯ ಸಂಪಾದನೆಯಲ್ಲಿ ಮಹತ್ವಪೂರ್ಣವಾಗಿದ್ದು, ವೃತಾದಿಗಳ ಅನುಷ್ಠಾನಕ್ಕೆ ಪುಣ್ಯಕಾಲ. ಶ್ರೀಕೃಷ್ಣ, ಮುಖ್ಯಪ್ರಾಣ ಮತ್ತು ಗುರುಗಳ ಅನುಗ್ರಹ ಭಕ್ತ ಸಮುದಾಯಕ್ಕೆ ಇರಲಿ ಎಂದು ಪಲಿಮಾರು ಶ್ರೀಗಳು ಆಶೀರ್ವಚನ ನೀಡುತ್ತಾ ಹೇಳಿದ್ದಾರೆ.












Click it and Unblock the Notifications