ಟಿಪ್ಪು ಆರಾಧಕರು ಇಲ್ಲಿ ಉಳಿಯಬಾರದು: ದೇಶದಾದ್ಯಂತ ವಿವಾದ ಹುಟ್ಟುಹಾಕಿದ ಕಟೀಲ್ ಹೇಳಿಕೆ- ಏನಿದು ಅವರ ಮಾತಿನ ಅರ್ಥ?
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಮ ಮತ್ತು ಟಿಪ್ಪುವನ್ನು ಎಳೆದು ತಂದಿದ್ದಾರೆ. ಈ ವಿಡಿಯೊ ವೈರಲ್ ಆಗಿದ್ದು ದೇಶದಾದ್ಯಂತ ಸದ್ದು ಮಾಡುತ್ತಿದೆ. ಕಟೀಲ್ ಅವರ ಮಾತಿನ ಅರ್ಥವೇನು? ಇದು ಓದಿ
ಬೆಂಗಳೂರು, ಫೆಬ್ರವರಿ 15: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕರ್ನಾಟಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ವಿವಾದಕ್ಕೆ ಈಡಾಗುತ್ತಲೇ ಇದ್ದಾರೆ. ಅವರು ಮಾಡುತ್ತಿರುವ ಆವೇಶಭರಿತ ಭಾಷಣಗಳು ವ್ಯಾಪಕ ಟೀಕೆಗೆ ಒಳಗಾಗುತ್ತಿವೆ. ಮಂಗಳವಾರ ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ರಾಮ ಮತ್ತು ಟಿಪ್ಪುವನ್ನು ಎಳೆದು ತಂದಿದ್ದಾರೆ. ಈ ವಿಡಿಯೊ ವೈರಲ್ ಆಗಿದ್ದು ದೇಶದಾದ್ಯಂತ ಸದ್ದು ಮಾಡುತ್ತಿದೆ.

ರಾಮ- ಟಿಪ್ಪು ಭಕ್ತರ ನಡುವೆ ಸ್ಪರ್ಧೆ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಎರಡು ತಿಂಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ನಳೀನ್ ಕುಮಾರ್ ಕಟೀಲ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. 'ಈ ಚುನಾವಣೆಯಲ್ಲಿ ಟಿಪ್ಪು ಸುಲ್ತಾನ್ ವಂಶಸ್ಥರು ಮತ್ತು ರಾಮ-ಹನುಮಂತನ ಭಕ್ತರ ನಡುವೆ ಸ್ಪರ್ಧೆ' ಎಂದು ಹೇಳಿದ್ದಾರೆ. ಈ ಮೂಲಕ ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದ್ದಾರೆ. 'ಟಿಪ್ಪು ಬೆಂಬಲಿಗರನ್ನು ಮನೆಗೆ ವಾಪಸ್ ಕಳುಹಿಸಬೇಕಿದೆ. ಅದೇ ರೀತಿಯಲ್ಲಿ ಚುನಾವಣೆಯ ತೀರ್ಪು ಬರಲಿ' ಎಂದಿದ್ದಾರೆ.

ರಾಜ್ಯದ ಜನರೇ ನಿರ್ಧರಿಸಲಿ
ಕರ್ನಾಟಕಕ್ಕೆ ಟಿಪ್ಪು ಬೆಂಬಲಿಗರು ಬೇಕೋ ಅಥವಾ ರಾಮ ಮತ್ತು ಹನುಮಂತನ ಭಕ್ತರು ಬೇಕೋ ಎಂಬುದನ್ನು ಜನರೇ ನಿರ್ಧರಿಸಬೇಕು ಎಂದು ಕಟೀಲ್ ಹೇಳಿದ್ದಾರೆ. 'ನಾನು ಯಲಬುರ್ಗಾದ ಜನರನ್ನು ಕೇಳುತ್ತೇನೆ, ನೀವು ಹನುಮಂತನನ್ನು ಪೂಜಿಸುತ್ತೀರಾ ಅಥವಾ ಟಿಪ್ಪು ಭಜನೆ ಮಾಡುತ್ತೀರಾ? ಹಾಗಾದರೆ ನೀವು ಟಿಪ್ಪು ಭಜನೆ ಮಾಡುವವರನ್ನು ಓಡಿಸುತ್ತೀರಾ' ಎಂದು ಪ್ರಶ್ನಿಸಿದ್ದಾರೆ. ಈ ರಾಜ್ಯಕ್ಕೆ ರಾಮ ಭಕ್ತರು ಮತ್ತು ಹನುಮ ಭಕ್ತರು ಬೇಕಾದರೆ ಇಂದೇ ಸಂಕಲ್ಪ ಮಾಡಿ' ಎಂದೂ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಟಿಪ್ಪು ಆರಾಧಕರು ಇಲ್ಲಿ ಉಳಿಯುವುದು ಬೇಡ
ಟಿಪ್ಪುವನ್ನು ಆರಾಧಿಸುವ ಜನರು ಇಲ್ಲಿ ಉಳಿಯುವುದು ಬೇಡ ಎಂದು ಕಟೀಲು ಹೇಳಿಕೆ ನೀಡಿದ್ದಾರೆ. 'ಭಗವಾನ್ ರಾಮ ಮತ್ತು ಹನುಮಂತನನ್ನು ಅನುಸರಿಸುವ ಜನರಿಗೆ ಈ ಭೂಮಿ ಮೀಸಲಾಗಿದೆ. ಹನುಮಂತನ ನಾಡಿನಲ್ಲಿ ನಾನು ಸವಾಲು ಹಾಕುತ್ತೇನೆ, ಟಿಪ್ಪುವನ್ನು ಪ್ರೀತಿಸುವವರು ಇಲ್ಲಿ ಉಳಿಯಬಾರದು, ರಾಮ ಭಜನೆ ಮಾಡುವವರು, ಹನುಮಂತೋತ್ಸವ ಮಾಡುವವರು ಇಲ್ಲೇ ಉಳಿಯಬೇಕು' ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಹಿಂದೆಯೂ ವಿವಾದಿತ ಹೇಳಿಕೆ ನೀಡಿದ್ದ ಕಟೀಲ್
ಕಟೀಲ್ ಅವರು ಈ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು 'ಟಿಪ್ಪು ವರ್ಸಸ್ ಸಾವರ್ಕರ್ ಸ್ಪರ್ಧೆ' ಎಂದು ಕರೆದಿದ್ದರು. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುವುದಿಲ್ಲ. ಬದಲಿಗೆ ಸಾವರ್ಕರ್ ಮತ್ತು ಟಿಪ್ಪು ಸಿದ್ಧಾಂತಗಳ ನಡುವೆ ನಡೆಯಲಿದೆ ಎಂದು ಶಿವಮೊಗ್ಗದಲ್ಲಿ ಸಾರ್ವಜನಿಕ ಭಾಷಣದಲ್ಲಿ ತಿಳಿಸಿದ್ದರು. ಇದು ವಿರೋಧ ಪಕ್ಷಗಳ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು.

ಕಟೀಲ್ ಹೇಳಿಕೆ ಹಿಂದೆ ಏನಿದೆ?
ನಳೀನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಅನ್ನು ಗುರಿಯಾಗಿಸಿ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಬೆಂಬಲಿಗರು ಟಿಪ್ಪುವನ್ನು ಆರಾಧಿಸುತ್ತಾರೆ. ಬಿಜೆಪಿ ಬೆಂಬಲಿಗರು ರಾಮನನ್ನು ಅನುಸರಿಸುತ್ತಾರೆ ಎಂಬುದನ್ನು ಕಟೀಲ್ ಹೇಳಿದ್ದಾರೆ. ಕಾಂಗ್ರೆಸ್‌ನ ಬೆಂಬಲಿಗರು ಹಾಗೂ ಮುಸ್ಲಿಮರನ್ನು ಗುರಿಯಾಗಿಸುವ ಮೂಲಕ ಹಿಂದೂ ವೋಟ್ ಬ್ಯಾಂಕ್ ರಾಜಕೀಯದಲ್ಲಿ ಕಟೀಲ್ ತೊಡಗಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಪ್ರಧಾನಿ ಮೋದಿ ಅವರು ಮುಸ್ಲಿಮರ ಮನ ಒಲಿಸುವ ಕಾರ್ಯ ಮಾಡಿ ಎಂದು ಬಿಜೆಪಿಯ ರಾಜ್ಯ ನಾಯಕರಿಗೆ ತಿಳಿಸಿದ್ದಾರೆ ಎಂಬುದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಆದರೆ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರು ಮತ್ತೆ ಕೋಮುದ್ರುವಿಕರಣದ ರಾಜಕಾರಣದಲ್ಲಿ ತೊಡಗಿರುವುದು ಬಿಜೆಪಿಯಲ್ಲಿನ ವಿರೋಧಾಬಾಸಗಳಿಗೆ ಕಾರಣವಾಗಿದೆ. ಈ ವಿವಾದಿತ ಹೇಳಿಕೆಗಳು ರಾಜ್ಯ ಚುನಾವಣೆಯಲ್ಲಿ ಯಾರಿಗೆ ಲಾಭ ತಂದುಕೊಡಲಿವೆ? ಯಾರಿಗೆ ನಷ್ಟ ಉಂಟು ಮಾಡಲಿವೆ ಎಂಬುದನ್ನು ಚುನಾವಣಾ ಫಲಿತಾಂಶಗಳೇ ಹೇಳಿಬೇಕಿದೆ.












Click it and Unblock the Notifications