ರಾಘವೇಶ್ವರ ಶ್ರೀಗಳ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ ಏನಿದೆ?
ಬೆಂಗಳೂರು, ಸೆಪ್ಟೆಂಬರ್ 29 : ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ, ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ಭಕ್ತರ ಮನೆ ಮತ್ತು ಅರ್ಚಕರ ಮನೆಯಲ್ಲಿಯೂ ಶ್ರೀಗಳು ಅತ್ಯಾಚಾರ ನಡೆಸಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಸಿಐಡಿ ಡಿವೈಎಸ್ಪಿ ಅಶೋಕ್ ಕುಮಾರ್ ಅವರು ಶನಿವಾರ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 680 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. 151 ಸಾಕ್ಷಿಗಳ ಹೇಳಿಕೆ ಮತ್ತು ದೂರವಾಣಿ ಕರೆಗಳ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ. [ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ]
ಐಪಿಸಿ ಸೆಕ್ಷನ್ 376(2), 508ರ ಅಡಿ 680 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಗಿರಿನಗರ ಮಠ ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ರಾಮಕಥಾ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅತ್ಯಾಚಾರ ನಡೆಸಲಾಗಿದೆ ಎಂದು ಸಿಐಡಿ ಚಾರ್ಜ್‌ಶೀಟ್‌ನಲ್ಲಿ ಹೇಳಿದೆ.[ಮಹಿಳಾ ಆಯೋಗಕ್ಕೆ ಮಠದ 12 ಪ್ರಶ್ನೆಗಳು]
ಅಂದಹಾಗೆ ಈ ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ಸಿಐಡಿ ನೀಡಿರುವ ನೋಟಿಸ್ ಪ್ರಶ್ನಿಸಿ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ. ಸೆ.30ರಂದು ವೀರ್ಯ ಪರೀಕ್ಷೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ಜಾರಿಗೊಳಿಸಿದೆ. ಮಂಗಳವಾರ ಕೋರ್ಟ್‌ನಲ್ಲಿ ಈ ಅರ್ಜಿ ವಿಚಾರಣೆ ನಡೆಯಲಿದೆ. ಚಾರ್ಜ್‌ಶೀಟ್‌ನಲ್ಲೇನಿದೆ ವಿವರ ಚಿತ್ರಗಳಲ್ಲಿ....

ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ
ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಶ್ವರ ಶ್ರೀಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ
680 ಪುಟಗಳ ಚಾರ್ಜ್‌ಶೀಟ್, 151 ಸಾಕ್ಷಿಗಳ ಹೇಳಿಕೆ ಮತ್ತು ದೂರವಾಣಿ ಕರೆಗಳ ಮಾಹಿತಿಯನ್ನು ಶನಿವಾರ ಸಲ್ಲಿಸಲಾಗಿದೆ.

ಮೊದಲಿನಿಂದಲೂ ಮಠದ ಭಕ್ತರು
'ಪ್ರೇಮಲತಾ ಮತ್ತು ಅವರ ಪೂರ್ವಿಕರು ಮೊದಲಿನಿಂದಲೂ ಮಠದ ಭಕ್ತರಾಗಿದ್ದರು. ರಾಮಕಥಾ ಕಾರ್ಯಕ್ರಮದಲ್ಲಿ ಪ್ರೇಮಲತಾ ಅವರು ಪ್ರಧಾನ ಗಾಯಕಿಯಾಗಿದ್ದರು. ಅವರನ್ನು ನೋಡಿ ಮೋಹಗೊಂಡ ಸ್ವಾಮೀಜಿ ದೈಹಿಕವಾಗಿ ಅನುಭವಿಸಲು ನಿರ್ಧರಿಸಿದ್ದರು.'

'ದೈವದ ಆಸಂತೋಷಕ್ಕೆ ಗುರಿಯಾಗುವೆ'
ಸ್ವಾಮೀಜಿಗಳ ವರ್ತನೆ ಬಗ್ಗೆ ಪ್ರೇಮಲತಾ ಅವರು ಪ್ರಶ್ನಿಸಿದಾಗ 'ನಮ್ಮದು ರಾಜಧರ್ಮ. ಲೈಂಗಿಕ ಕ್ರಿಯೆ ನಡೆಸುವುದು ತಪ್ಪಲ್ಲ. ದೈಹಿಕ ಸಂಪರ್ಕ ನಡೆಸಬೇಕೆನ್ನುವುದು ಶ್ರೀರಾಮನ ಬಯಕೆ ಕೂಡ. ಇದಕ್ಕೆ ಒಪ್ಪದಿದ್ದರೆ ದೈವದ ಅಸಂತೋಷಕ್ಕೆ ಕಾರಣವಾಗುತ್ತೀಯಾ, ಕುಟುಂಬ ಸರ್ವನಾಶವಾಗುತ್ತದೆ' ಶ್ರೀಗಳು ಹೇಳಿದ್ದರು.

ಪೀಠದ ಮೇಲೆ ಅಪಾರ ನಂಬಿಕೆ
'ದೈವದ ಹೆಸರು ಬಂದಾಗ ಪ್ರೇಮಲತಾ ಅವರು ಸ್ವಾಮೀಜಿಯ ಮಾತಿನಂತೆ ನಡೆದುಕೊಂಡಿದ್ದರು. ರಾಮಕಥಾ ಆಯೋಜಿಸುವ ಸಂಘಟಕರು ಸ್ವಾಮೀಜಿ ಮತ್ತು ಕಲಾವಿದರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡುತ್ತಿದ್ದರು. ಆದರೆ, ಶ್ರೀಗಳು ಏಕಾಂತ ಸೇವೆ ಅಥವ ಸಭೆಯ ನೆಪದಲ್ಲಿ ಪ್ರೇಮಲತಾ ಅವರನ್ನು ಕರೆಸಿಕೊಳ್ಳುತ್ತಿದ್ದರು'. [ಪ್ರೇಮಲತಾ ಅವರ ಸಂದರ್ಶನ]

ಶ್ರೀರಾಮನ ಮೇಲಿದ್ದ ಭಯ
'ಶ್ರೀರಾಮನ ಮೇಲಿದ್ದ ಭಯ, ಮಕ್ಕಳ ಭವಿಷ್ಯದ ಆತಂಕ ಮುಂತಾದ ಕಾರಣಗಳಿಂದಾಗಿ ಪ್ರೇಮಲತಾ ಅವರು ಈ ವಿಚಾರವನ್ನು ಮಚ್ಚಿಟ್ಟಿದ್ದರು. ಸ್ವಾಮೀಜಿಗಳು ಭಕ್ತರ ಮನೆ ಮತ್ತು ಅರ್ಚಕರ ಮನೆಗಳಿಗೆ ಪ್ರೇಮಲತಾ ಅವರನ್ನು ಕರೆಸಿಕೊಂಡು ಅತ್ಯಾಚಾರ ನಡೆಸಿದ್ದರು. ಈ ಕುರಿತು 45 ಭಕ್ತರು ಹೇಳಿಕೆಗಳನ್ನು ನೀಡಿದ್ದಾರೆ'.

ಎಲ್ಲೆಲ್ಲಿ ಅತ್ಯಾಚಾರ ನಡೆದಿದೆ?
2011ರ ಅ.12ರಂದು ಪ್ರೇಮಲತಾ ಅವರ ಮೇಲೆ ಜೋಧ್‌ಪುರದ ವಿವೇಕಾನಂದ ಕೇಂದ್ರದ ನಿತ್ಯ ಭವನದಲ್ಲಿ ಶ್ರೀಗಳು ಮೊದಲ ಬಾರಿಗೆ ಅತ್ಯಾಚಾರ ನಡೆಸಿದ್ದರು. 2014ರ ಜುಲೈ 27ರಂದು ಬೆಂಗಳೂರಿನ ಗಿರಿನಗರ ಮಠದಲ್ಲಿ ಕೊನೆಯ ಬಾರಿಗೆ ಅತ್ಯಾಚಾರ ನಡೆದಿದೆ. ಹೊರನಾಡು, ಹೃಷಿಕೇಶ, ದೆಹಲಿ, ಸಿಗಂದೂರಿನ ಅರ್ಚಕರ ಮನೆಯಲ್ಲಿ ಅತ್ಯಾಚಾರ ನಡೆದಿದೆ. ಮಂಗಳೂರು, ಮೈಸೂರು, ಉಡುಪಿ, ಬಾಗಲಕೋಟೆಯಲ್ಲೂ ಅತ್ಯಾಚಾರ ನಡೆದಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಸಿಐಡಿ ತಿಳಿಸಿದೆ.












Click it and Unblock the Notifications