ಚಾಮುಂಡಿ ಬೆಟ್ಟ, ಕೊಡಚಾದ್ರಿ ಸೇರಿ 15 ಕಡೆ ರೋಪ್‌ವೇಗೆ ರಾಜ್ಯ ಸರ್ಕಾರದ ಪ್ರಸ್ತಾವನೆ; ಸಚಿವ ನಿತಿನ್ ಗಡ್ಕರಿ
ಕೊಡಚಾದ್ರಿ ಪರ್ವತದಲ್ಲಿ ರೋಪ್‌ವೇ ಯೋಜನೆ ಆರಂಭಿಸಲು ಕಾರ್ಯಸಾಧ್ಯತಾ ಅಧ್ಯಯನ ಮಾಡಲಾಗಿದೆ. ಉಳಿದ 14 ಬೆಟ್ಟಗಳಲ್ಲಿ ಈ ಯೋಜನೆಯ ಆರಂಭಕ್ಕೆ ಪೂರ್ವ ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗಿದೆ.
ಬೆಂಗಳೂರು, ಫೆಬ್ರವರಿ. 09: ಚಾಮುಂಡಿ ಬೆಟ್ಟ, ಕೊಡಚಾದ್ರಿ ಸೇರಿ 15 ಕಡೆ ರೋಪ್‌ವೇಗೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಈ ಬಗ್ಗೆ ಸದಸ್ಯ ನಾರಾಯಣ ಕೊರಗಪ್ಪ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವ ನಿತಿನ್ ಗಡ್ಕರಿ, ಉಡುಪಿ ಜಿಲ್ಲೆಯ ಕೊಡಚಾದ್ರಿ ಪರ್ವತದಲ್ಲಿ ರೋಪ್‌ವೇ ಯೋಜನೆ ಆರಂಭಿಸಲು ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗಿದೆ ಎಂದಿದ್ದಾರೆ.
ಕೊಡಚಾದ್ರಿ ಪರ್ವತದಲ್ಲಿ ರೋಪ್‌ವೇ ಯೋಜನೆ ಆರಂಭಿಸಲು ಕಾರ್ಯಸಾಧ್ಯತಾ ಅಧ್ಯಯನ ಮಾಡಲಾಗಿದೆ. ಉಳಿದ 14 ಬೆಟ್ಟಗಳಲ್ಲಿ ಈ ಯೋಜನೆಯ ಆರಂಭಕ್ಕೆ ಪೂರ್ವ ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸಲದ ಕೇಂದ್ರ ಬಜೆಟ್‌ನಲ್ಲಿ ಪರ್ವತಮಾಲಾ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆಯಲ್ಲಿ ಗುಡ್ಡಗಾಡು ಪ್ರದೇಶಗಳಿಗೆ ಜನರು ಸುಲಭವಾಗಿ ಪ್ರಯಾಣ ಮಾಡಲು ಅನುಕೂಲವಾಗಲಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಇನ್ನು, 2022-23 ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದ್ದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಯೋಜನೆಗೆ ವಿವಿಧ ವಲಯಗಳಿಂದ ವಿರೋಧ ಬಂದ ಕಾರಣ, ಇದು ಯಾತ್ರಾ ಸ್ಥಳ ಎಂಬ ಕಾರಣದಿಂದ ಕೈಬಿಡಲಾಗಿತ್ತು.
ಚಾಮುಂಡಿ ಬೆಟ್ಟಗಳು ಮತ್ತು ಚಾಮುಂಡೇಶ್ವರಿ ದೇವಸ್ಥಾನವು ಮುಖ್ಯವಾಗಿ ಭಕ್ತರನ್ನು ಆಕರ್ಷಿಸುವ ಪವಿತ್ರ ಸ್ಥಳಗಳಾಗಿವೆ ಹೊರತು ಪ್ರವಾಸಿಗರಿಗಾಗಿಯಲ್ಲ. ಭಕ್ತರನ್ನು ಆಕರ್ಷಿಸಲು ಮೆಟ್ಟಿಲುಗಳ ಹೊರತಾಗಿ ಉತ್ತಮ ಡಾಂಬರು ಹಾಕಿದ ರಸ್ತೆಗಳು ಸೇರಿದಂತೆ ಹಲವಾರು ವಿಧಾನಗಳಿವೆ. ಇದಲ್ಲದೆ, ದೇವಾಲಯಕ್ಕೆ ಲಕ್ಷಾಂತರ ಭಕ್ತರು ಬರುವ ಕಾರಣ ರೋಪ್‌ವೇ ಕಾರ್ಯಸಾಧ್ಯವಾಗುವುದಿಲ್ಲ ಎಂದು ಪರಿಸರವಾದಿಗಲು ಆರೋಪಿಸಿದ್ದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ) ಕಮಲಾ ಕರಿಕಾಳನ್ ಅವರು 2013ರಲ್ಲಿ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ, 1997ರಲ್ಲಿ ಯೋಜನೆಗೆ ಮೊಟ್ಟಮೊದಲ ಬಾರಿಗೆ ಪ್ರಸ್ತಾವನೆ ಸಲ್ಲಿಸಿದಾಗ ನೀಡಿದ್ದ ಪರವಾನಗಿಯನ್ನು ರದ್ದುಗೊಳಿಸಿದ್ದರು. ಈಗ ಮತ್ತೆ ರೋಪ್‌ವೇ ಮಡುವ ಯೋಜನೆಗೆ ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.
ಇತ್ತ, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮಕ್ಕೆ 85 ಕೋಟಿ ವೆಚ್ಚದಲ್ಲಿ ರೋಪ್ ವೇ ನಿರ್ಮಿಸಲು ಟೆಂಡರ್ ಕರೆದಿದ್ದು, ಇದೇ ತಿಂಗಳಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದ್ದಾರೆ. ರೋಪ್ ವೇ ನಿರ್ಮಾಣದ ನಂತರ ಈ ಭಾಗದ ಭೂಮಿ ಬೆಲೆ ಗಗನಕ್ಕೆ ಏರಲಿದೆ. ಹಾಗಾಗಿ ರೈತರು ಭೂಮಿ ಮಾರಾಟ ಮಾಡಬಾರದು ಎಂದು ಮನವಿ ಮಾಡಿದ್ದಾರೆ.












Click it and Unblock the Notifications