Chakravarthy Sulibele: ಹಿಂದೂಗಳು ಧೈರ್ಯವಾಗಿ ಮತಾಂತರ ಮಾಡಿ: ಕರೆ ಕೊಟ್ಟ ಸೂಲಿಬೆಲೆ
ಬೆಂಗಳೂರು,ಏಪ್ರಿಲ್ 21: ರಾಜ್ಯದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾಗುವಂತೆ ಚಕ್ರವರ್ತಿ ಸೂಲಿಬೆಲೆ ಕರೆ ಕೊಟ್ಟು ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಇದರ ಬೆನ್ನಲ್ಲೇ ಇದೀಗ ಹಿಂದೂಗಳು ಮತಾಂತರ ಮಾಡುವಂತೆ ಕರೆ ನೀಡಿದ್ದು, ಸೂಲಿಬೆಲೆ ಅವರ ಮಾತು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಹಿಂದೆ ವಿಶ್ವ ಹಿಂದೂ ಪರಿಷತ್‌ನಿಂದ ಉಳ್ಳಾಲ ತಾಲೂಕು ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ನಡೆದಿದ್ದ ಬೃಹತ್ ಪಾದಯಾತ್ರೆ ಸಮಾರೋಪದ ಭಾಷಣದಲ್ಲಿ ಹೆಣ್ಣು ಸಿಗದ ಹಿಂದೂ ಯುವಕರು ಅನ್ಯಧರ್ಮದ ಯುವತಿಯರನ್ನು ಮದುವೆಯಾಗುವಂತೆ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದರು. ಈ ಕುರಿತು ಯುವ ಕಾಂಗ್ರೆಸ್ ಉಳ್ಳಾಲ ನಗರಾಧ್ಯಕ್ಷ ಅಬ್ದುಲ್ ರಶೀದ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಸೂಲಿಬೆಲೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಇದೀಗ ಹಿಂದೂಗಳಿಗೆ ಮತಾಂತರ ಮಾಡುವಂತೆ ಕರೆ ಕೊಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡಿ, ಹಿಂದೂಗಳು ಮತಾಂತರ ಮಾಡುವಂತೆ ಕರೆ ನೀಡಿದ್ದಾರೆ. ಯಾರಾದರೂ ನಮಗೆ ಮತಾಂತರ ಆಗಬೇಕು ಅಂದರೆ ನಮ್ಮ ಸಮಾಜ ಅವರನ್ನ ಪ್ರೀತಿಯಿಂದ ಸ್ವಾಗತಿಸುತ್ತೆ. ಬನ್ನಿ ಎಂದು ಕರೆಯಿರಿ ಎಂದು ಹಿಂದೂಗಳು ಮತಾಂತರ ಮಾಡುವಂತೆ ಬಹಿರಂಗವಾಗಿ ಕರೆ ಕೊಟ್ಟಿದ್ದಾರೆ.
ಹಿಂದೂಗಳ ಸಂಖ್ಯೆ ಜಾಸ್ತಿ ಮಾಡಲು ಏನು ಐಡಿಯಾ ಇದೆ ಎಂದು ಕೇಳಿದಾಗ ಹೆಚ್ಚು ಮಕ್ಕಳನ್ನು ಮಾಡುವಂತೆ ಮನವಿ ಮಾಡಿಕೊಳ್ತೇವೆ ಎಂದು ಹೇಳಿದ್ರು. ಆದರೆ, ನಮ್ಮ ಜನ ಎರಡ್ಮೂರು ಮಕ್ಕಳನ್ನ ಮಾಡ್ತಾರೇನ್ರೀ? ನಮ್ಮ ಜನರಿಗೆ ಅವರ ಮಕ್ಕಳನ್ನು ಪಂಚರ್ ಹಾಕಲು ಕಳುಹಿಸಲು ಇಷ್ಟ ಇಲ್ಲ. ಅವರಿಗೆ ನಮ್ಮ ಮಕ್ಕಳು ಚೆನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್ ಆಗಿ ಮಾಡಬೇಕು ಅನ್ನೋದಷ್ಟೇ ಇದೆ. ಹಾಗಾಗಿ ಓದಿಸೋ ಕೆಪಾಸಿಟಿ ಇಲ್ಲದ ಕಾರಣ ಒಂದು ಮಗು ಸಾಕು, ಎರಡು ಮಗು ಸಾಕು ಅಂತಾರೆ. ಹಾಗಾಗಿ ಸರ್ಕಾರ ನಮಗಾಗಿ ಮಾಡಿರೋ ಕಾನೂನುಗಳನ್ನು ಬಳಸಿಕೊಳ್ಳಿ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ಕರೆ ನೀಡಿದರು.
ಮತಾಂತರ ಮಾಡುವುದು ಕಷ್ಟ ಏನಲ್ಲ. ನಾನು ಜಗತ್ತಿನ ಅತ್ಯಂತ ಶ್ರೇಷ್ಠ ಹಿಂದೂ ಧರ್ಮಕ್ಕೆ ಸೇರಿದವನು. ಜಗತ್ತಿನಲ್ಲಿ ಅನೇಕ ಮತ ಪಂಥಗಳಿವೆ. ಆದರೆ ಅವರಿಗೆಲ್ಲಾ (ಮುಸ್ಲಿಂ) ಒಬ್ಬನೇ ದೇವರು. ಒಬ್ಬ ದೇವರಿಗೆ ಸಮಸ್ಯೆಯಾದ್ರೆ ಆ ಧರ್ಮವೇ ಹೋಯಿತು. ಆದರೆ ನಮಗೆ 33 ಕೋಟಿ ದೇವತೆಗಳು. ನೀವು ರಾಮನನ್ನ ಬೈದರೆ ನಾನು ಸೀತೆಯನ್ನ ಹಿಡಿದುಕೊಳ್ತೀನಿ. ನೀವು ಸೀತೆಗೆ ಕಳಂಕ ತರೋ ಪ್ರಯತ್ನ ಪಟ್ಟರೆ ಶ್ರೀಕೃಷ್ಣ ಇದ್ದಾನೆ. ಕೃಷ್ಣನಿಗೆ ಕಳಂಕ ತರೋ ಪ್ರಯತ್ನ ಪಟ್ಟರೆ ನಮಗೆ ಮಂಜುನಾಥಸ್ವಾಮಿ ಇದ್ದಾನೆ. ನೀವು ಮಂಜುನಾಥನಿಗೆ ಕಳಂಕ ತರೋ ಪ್ರಯತ್ನ ಪಟ್ಟರೆ ನನಗೆ ಊರಲ್ಲೊಂದು ದೇವಸ್ಥಾನ ಇದೆ. ಎಲ್ಲಿ ಬೇಕಾದರೂ ಹೋಗ್ತೀನಿ ಎಂದು ಸೂಲಿಬೆಲೆ ಅವರು ಹೇಳಿದರು.
ಇದು ಸರ್ಕಾರ ಕೊಟ್ಟಿರೋ ಕಾನೂನು, ನಮ್ಮದಲ್ಲ. ಬಿಜೆಪಿ ಸರ್ಕಾರ ಇದ್ದಾಗ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತು. ಹೊಸ ಸರ್ಕಾರ ಬಂದು ಆ ಕಾನೂನು ತೆಗೆದು ಹಾಕಿತು. ಅಂದರೆ ಅದರ ಅರ್ಥ ನೀವೂ ಮತಾಂತರ ಮಾಡಬಹುದು ಅಂತ. ಸರ್ಕಾರವೇ ಧೈರ್ಯವಾಗಿ ಹೇಳಿದೆ ಮತಾಂತರ ಮಾಡಿ ಅಂತ, ಹಾಗಿದ್ದಾಗ ನಾವು ಮಾಡಬೇಕಲ್ವಾ? ಜಗತ್ತಿನ ಯಾವ ರಾಷ್ಟ್ರದಲ್ಲೂ ಈ ರೀತಿಯ ಪರಿಸ್ಥಿತಿ ಇಲ್ಲ. ಹಾಗಾಗಿ ಮತಾಂತರ ಮಾಡಿ, ಸರ್ಕಾರವೇ ಅಧಿಕೃತವಾಗಿ ಹೇಳಿದೆ ಎಂದು ಹೇಳಿದರು.












Click it and Unblock the Notifications