ಹೈಕೋರ್ಟ್‌ ಚಾಟಿ ಬಳಿಕ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಿಸಿದ ಸರ್ಕಾರ!

ಬೆಂಗಳೂರು, ಆಗಸ್ಟ್ 02; ಕರ್ನಾಟಕ ಹೈಕೋರ್ಟ್‌ ಚಾಟಿ ಬೀಸಿದ ಬಳಿಕ ಸರ್ಕಾರ ಬಹುತೇಕ ಒಂದು ವರ್ಷದಿಂದ ಖಾಲಿ ಉಳಿದಿದ್ದ ಕರ್ನಾಟಕ ಪೊಲೀಸ್ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿದೆ. ಆದರೆ ಇಬ್ಬರು ಸದಸ್ಯರ ಸ್ಥಾನಗಳನ್ನು ಇನ್ನೂ ಭರ್ತಿ ಮಾಡಿಲ್ಲ.

ಕರ್ನಾಟಕ ಪೊಲೀಸ್ ಪ್ರಾಧಿಕಾರದ ಅಧ್ಯಕ್ಷರಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್. ಕೆ. ಸುಧೀಂದ್ರ ರಾವ್‌ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 2022ರ ಜುಲೈ 18ರಿಂದ ಅಧ್ಯಕ್ಷ ಸ್ಥಾನ ಖಾಲಿ ಇತ್ತು. ಅಧ್ಯಕ್ಷರನ್ನು ನೇಮಕ ಮಾಡುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಹ ದಾಖಲು ಮಾಡಲಾಗಿತ್ತು.

Chairman Appointed For Karnataka Police Complaint Authority

ಜುಲೈ 24ರಂದು ಕರ್ನಾಟಕ ಹೈಕೋರ್ಟ್ ಅಧ್ಯಕ್ಷರನ್ನು ನೇಮಕ ಮಾಡಲು ಸರ್ಕಾರಕ್ಕೆ ಎರಡು ವಾರಗಳ ಗಡುವು ನೀಡಿತ್ತು. ಇಲ್ಲವಾದರೆ ಗೃಹ ಇಲಾಖೆಯ ಹೊಣೆ ಹೊತ್ತಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಖುದ್ದು ಹಾಜರಾಗಿ ವಿವರಣೆ ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿತ್ತು.

ಖಾಲಿ ಇದ್ದ ಅಧ್ಯಕ್ಷ ಸ್ಥಾನ; ಕರ್ನಾಟಕ ಪೊಲೀಸ್ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಸಿ. ಆರ್. ಕುಮಾರಸ್ವಾಮಿ ಅವರ ಮೂರು ವರ್ಷಗಳ ಅವಧಿ 2022ರ ಜುಲೈ 18ರಂದು ಪೂರ್ಣಗೊಂಡಿತ್ತು. ಅವರು ಸೇವೆಯಿಂದ ಬಿಡುಗಡೆಗೊಂಡ ಬಳಿಕ ಸರ್ಕಾರ ಒಂದಲ್ಲ ಒಂದು ಕಾರಣ ನೀಡಿ ಅಧ್ಯಕ್ಷರ ನೇಮಕವನ್ನು ಮುಂದೂಡಿಕೆ ಮಾಡುತ್ತಿತ್ತು.

ಸ್ವತಂತ್ರ ಮತ್ತು ಶಾಸನಾತ್ಮಕ ಹುದ್ದೆ ಇದಾಗಿದೆ. ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯನ್ನು ನೇಮಿಸಬೇಕು. ಪ್ರಾಧಿಕಾರದ ಒಂದು ಸದಸ್ಯ ಸ್ಥಾನ 2020ರ ಮೇ 8ರಿಂದ ಮತ್ತು ಮತ್ತೊಂದು ಸದಸ್ಯ ಸ್ಥಾನ 2022ರ ಡಿ.28ರಿಂದ ಖಾಲಿಯಿದೆ.

ಸಕಾಲಕ್ಕೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಿಸದ ಕಾರಣ ಪ್ರಾಧಿಕಾರ ತನ್ನ ಶಾಸನಾತ್ಮಕ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿಲ್ಲ. ಅಪಾರ ಪ್ರಮಾಣದಲ್ಲಿ ದೂರುಗಳು ಮತ್ತು ಕುಂದುಕೊರತೆಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿತ್ತು.

ಪ್ರಾಧಿಕಾರದ ಅಧ್ಯಕ್ಷ ಹಾಗೂ ಇಬ್ಬರ ಸದಸ್ಯರನ್ನು ಕೂಡಲೇ ನೇಮಕ ಮಾಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರಾದ ವಕೀಲೆ ಸುಧಾ ಕಾಟ್ವಾ ಕೋರಿದ್ದರು. ಜುಲೈ 24ರಂದು ಅರ್ಜಿ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಆಗ ಸರ್ಕಾರದ ಪರ ವಕೀಲರು ಅಧ್ಯಕ್ಷರ ನೇಮಕಕ್ಕೆ ಮತ್ತೆ ಸಮಯಾವಕಾಶ ನೀಡಬೇಕು ಎಂದು ಕೋರಿದ್ದರು. ಇದಕ್ಕೆ ಆಕ್ಷೇಪ ಎತ್ತಿದ್ದ ಅರ್ಜಿದಾರರ ಪರ ವಕೀಲ ಎಸ್‌. ಉಮಾಪತಿ ಕಳೆದ ಬಾರಿಯೂ ಸಮಯ ಕೋರಿದ್ದರು. ಈಗ ಮತ್ತೆ ಕೋರುತ್ತಿದ್ದಾರೆ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಾಧಿಕಾರ ಇದ್ದೂ ಇಲ್ಲದಂತಾಗಿದೆ. ಜನರಿಗೆ ತೊಂದರೆ ಆಗುತ್ತಿದೆ ಎಂದು ವಾದ ಮಂಡನೆ ಮಾಡಿದ್ದರು.

ವಕೀಲೆ ಸುಧಾ ಕಾಟ್ವಾ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ಜೂನ್‌ 6ರಂದು ನಡೆದಿತ್ತು. ಆಗ
ಕೆಲವು ಕಾಲ ವಾದ ಆಲಿಸಿದ ಬಳಿಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಗೆ ನ್ಯಾಯಪೀಠ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತ್ತು.

ಸುಪ್ರಿಂಕೋರ್ಟ್ ಆದೇಶದ ಮೇರೆಗೆ ಪೊಲೀಸ್ ಇಲಾಖೆಯ ಎಲ್ಲಾ ಶ್ರೇಣಿಯ ಅಧಿಕಾರಿಗಳ ವಿರುದ್ಧ ದೂರು ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪೊಲೀಸ್ ಪ್ರಾಧಿಕಾರ ರಚಿಸಲಾಗಿದೆ. ಆದರೆ, ಸಕಾಲಕ್ಕೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡುತ್ತಿಲ್ಲ. ಪ್ರಾಧಿಕಾರಕ್ಕೆ ಅಗತ್ಯ ಸಿಬ್ಬಂದಿ ಮತ್ತು ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ವಾದ ಮಂಡಿಸಿದ್ದರು.

ಜುಲೈ 24ರಂದು ಅರ್ಜಿಯ ವಿಚಾರಣೆ ಸಮಯದಲ್ಲಿ ಜೂನ್‌ನಲ್ಲಿ ಮೂರು ವಾರ ಕಾಲಾವಕಾಶ ನೀಡಲಾಗಿತ್ತು. ಈಗ ಮತ್ತೆ ಸರ್ಕಾರ ಸಮಯ ಕೋರುತ್ತಿದೆ. ಕೇವಲ ಎರಡು ವಾರ ಅವಕಾಶ ನೀಡಲಾಗುತ್ತದೆ. ಇದೇ ಕೊನೆಯ ಅವಕಾಶ ಮತ್ತೆ ಅವಕಾಶ ನೀಡುವುದಿಲ್ಲ. ಅಷ್ಟರಲ್ಲಿ ನೇಮಕ ಮಾಡಬೇಕು. ಇಲ್ಲವಾದರೆ ಎಸಿಎಸ್‌ ಖುದ್ದು ಹಾಜರಾಗಿ ವಿವರಣೆ ನೀಡಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆಯನ್ನು ಹೈಕೋರ್ಟ್‌ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+