CET 2025: ವೈದ್ಯಕೀಯ ಕೋರ್ಸ್ ಅಭ್ಯರ್ಥಿಗಳಿಗೆ ಅಂತಿಮ ಅವಕಾಶ, ಆ.16 ಕೊನೆ ದಿನ! KEA ಸೂಚನೆಗಳು ಇಲ್ಲಿವೆ
ಬೆಂಗಳೂರು, ಆಗಸ್ಟ್ 13: ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರವು (ಕೆಇಎ) ಇತ್ತೀಚೆಗೆ UGCET/UGNEET-25 ಪರೀಕ್ಷೆ ಬರೆದು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಬಯಸುವವರಿಗೆ ಗುಡ್ ನ್ಯೂಸ್ ನೀಡಿದೆ. ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಛಾಯ್ಸ್ ದಾಖಲಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ತಪ್ಪದೆ ನಿಗದಿತ ಅವಧಿಯಲ್ಲಿ ಶುಲ್ಕ ಪಾವತಿಸಿ ಕಾಲೇಜಿಗೆ ಪ್ರವೇಶ ಪಡೆಯಲು ಕೊನೆ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಬುಧವಾರ ತಿಳಿಸಿದ್ದಾರೆ.
ಎಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಫಾರ್ಮ್-ಡಿ, ಯೋಗ ಮತ್ತು ನ್ಯಾಚುರೋಪತಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್, ಆರ್ಕಿಟೆಕ್ಚರ್, ಬಿ ಎಸ್ ಸಿ ನರ್ಸಿಂಗ್, ಹೋಮಿಯೋಪಥಿ ಕೋರ್ಸ್ ಗಳಿಗೆ ಸೀಟು ಹಂಚಿಕೆಯಾಗಿರುವವರು ಛಾಯ್ಸ್ ದಾಖಲಿಸಲು ಆಗಸ್ಟ್ 14 ರಂದು ಬೆಳಿಗ್ಗೆ 11ಗಂಟೆವರೆಗೆ ಅವಕಾಶ ನೀಡಲಾಗಿದೆ.

ಶುಲ್ಕ ಪಾವತಿಗೆ ಆಗಸ್ಟ್ 14ರಂದು ಸಂಜೆ 4ರವರೆಗೆ ಅವಕಾಶ ನೀಡಲಾಗಿದೆ. ಕಾಲೇಜಿಗೆ ವರದಿ ಮಾಡಿಕೊಳ್ಳಲು ಆಗಸ್ಟ್ 15 ಕೊನೆ ದಿನ. ಈ ವೇಳಾಪಟ್ಟಿಯಲ್ಲಿ ಯಾವ ಬದಲಾವಣೆ ಇರುವುದಿಲ್ಲ. ದಿನಾಂಕ ಕೂಡ ವಿಸ್ತರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
UGNEET-25: ಆ.14ರಿಂದ ಛಾಯ್ಸ್ ದಾಖಲು
ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳಿಗೆ ಸೀಟು ಹಂಚಿಕೆಯಾಗಿರುವವರಿಗೆ ಛಾಯ್ಸ್ ದಾಖಲಿಸಲು ಆಗಸ್ಟ್ 14ರಂದು ಮಧ್ಯಾಹ್ನ 1 ಗಂಟೆಯಿಂದ ಲಿಂಕ್ ತೆರೆಯಲಾಗುವುದು. ಆಗಸ್ಟ್ 16ರವರೆಗೆ ಛಾಯ್ಸ್ ದಾಖಲಿಸಬಹುದು. ಶುಲ್ಕ ಪಾವತಿಸಲು ಆಗಸ್ಟ್ 18 ಹಾಗೂ ಕಾಲೇಜಿಗೆ ವರದಿ ಮಾಡಿಕೊಳ್ಳಲು ಆಗಸ್ಟ್ 19 ಕೊನೆ ದಿನವಾಗಿದೆ. ನಂತರ ಬಂದವರಿಗೆ ಅವಕಾಶ ನೀಡಲಾಗುವುದಿಲ್ಲ.
ಛಾಯ್ಸ್-1 ಆಯ್ಕೆ ಮಾಡಿದವರು ಆನ್ ಲೈನ್ ನಲ್ಲಿ ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ಎಲ್ಲ ಮೂಲ ದಾಖಲೆಗಳ ಸಮೇತ ಸಂಬಂಧಪಟ್ಟ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದ್ದಾರೆ.
ಈ ಬಾರಿ ಮೂಲ ದಾಖಲೆಗಳ ಪರಿಶೀಲನೆ ಕಾಲೇಜು ಹಂತದಲ್ಲೇ ಆಗುತ್ತದೆ. ಹೀಗಾಗಿ ಕ್ಲೇಮ್ ಪ್ರಕಾರ ಮೂಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು. ದಾಖಲೆಗಳು ಸರಿ ಇವೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವ ಜವಾಬ್ದಾರಿಯನ್ನು ಕಾಲೇಜುಗಳಿಗೂ ನೀಡಲಾಗಿದೆ.












Click it and Unblock the Notifications