ಸಿದ್ದರಾಮಯ್ಯ ಪದಗ್ರಹಣ ಮಧ್ಯೆಯೂ ರಾಜ್ಯದ 592 ಕೇಂದ್ರಗಳಲ್ಲಿ ಸಿಇಟಿ-2023 ಪರೀಕ್ಷೆ ಸುಸೂತ್ರ
ಬೆಂಗಳೂರು, ಮೇ 21: ಕಾಂಗ್ರೆಸ್‌ನ ಬೃಹತ್ ಸಮಾರಂಭದ ಮಧ್ಯೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುತ್ತಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (CET-2023) ಮೊದಲ ದಿನವಾದ ಶನಿವಾರ ಬೆಂಗಳೂರು ಸೇರಿದಂತೆ ರಾಜ್ಯದಲ್ಲೆಡೆ ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗಿ ನಡೆಯಿತು.
ಪ್ರಾಧಿಕಾರದ ಮೂಲಗಳು ಅಧಿಕೃತ ಮಾಹಿತಿ ನೀಡಿವೆ. ಸಿಇಟಿ ಮೊದಲ ದಿನವಾದ ಮೇ 20 ಶನಿವಾರ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದರು. ಈ ಸಂಬಂಧ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಒಂದು ಲಕ್ಷ ಜನ ಸೇರುವಂತೆ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಿಂದ ಸಂಚಾರ ತೊಂದರೆ ಉಂಟಾಗಿ ಅಭ್ಯರ್ಥಿಗಳ ಸಿಇಟಿ ಪರೀಕ್ಷೆಗೆ ತೊಂದರೆಯಾಗುತ್ತದೆ ಎಂದು ಹೇಳಲಾಗಿತ್ತು. ಕಾರ್ಯಕ್ರಮಕ್ಕೆ ಬಿಜೆಪಿಯಿಂದ ವಿರೋಧವು ವ್ಯಕ್ತವಾಗಿತ್ತು. ಆದರೆ ಈ ಮಧ್ಯೆಯು ಸುಸೂತ್ರವಾಗಿ ಬೆಂಗಳೂರು ಸೇರಿದಂತೆ ರಾಜ್ಯದ 592 ಕೇಂದ್ರಗಳಲ್ಲಿ ನಡೆಯಿತು. ಎಲ್ಲಿಯೂ ಸಹ ಅಹಿತಕರ ಘಟನೆಗಳ ವರದಿಯಾಗಿಲ್ಲ.
ಸಿಟಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಒಟ್ಟು 2,61,610 ವಿದ್ಯಾರ್ಥಿಗಳ ಪೈಕಿ ಜೀವಶಾಸ್ತ್ರ ಪರೀಕ್ಷೆಗೆ 2,00,457 (82.53%) ಹಾಗೂ ಗಣಿತ ಪರೀಕ್ಷೆಗೆ 2,39,716 (93.78%) ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನೂತನ ಮುಖ್ಯಮಂತ್ರಿಗಳ ಪದಗ್ರಹಣ ಸ್ವೀಕಾರ ಬೃಹತ್ ಕಾರ್ಯಕ್ರಮ ಇದ್ದುದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಗತ್ಯಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿತ್ತು. ಮುಖ್ಯವಾಗಿ, ವಾಹನ ದಟ್ಟಣೆಯಲ್ಲಿ ಸಿಲುಕಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ತಲುಪುವುದು ತಡವಾಗಬಾರದೆಂದು ಕ್ರಮವಹಿಸಲಾಗಿತ್ತು.

ಇಂದು ಎರಡನೇ ದಿನದ ಪರೀಕ್ಷೆ
ಅದಕ್ಕಾಗಿ ಬೆಂಗಳೂರಿನ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವವರಿಗೆ ನಿಗದಿತ ಸಮಯಕ್ಕಿಂತ 2 ಗಂಟೆ ಮುಂಚಿತವಾಗಿ ಆಯಾ ಕೇಂದ್ರಕ್ಕೆ ಬರುವಂತೆ ಸೂಚಿಸಲಾಗಿತ್ತು. ಅಲ್ಲದೇ, ವಿದ್ಯಾರ್ಥಿಗಳಿಗೆ ಕೇಂದ್ರವನ್ನು ತಲುಪಲು ಸಹಾಯ ಮಾಡುವಂತೆ ಪೊಲೀಸರ ಸಹಕಾರವನ್ನು ಕೂಡ ಕೋರಲಾಗಿತ್ತು.
ಇಂದು ಭಾನುವಾರ ಮೇ 21ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ನಿಗದಿಯಾಗಿರುವಂತೆ ಎರಡನೇ ದಿನದ ಸಿಇಟಿ ಪರೀಕ್ಷೆಗಳನ್ನು ಅಭ್ಯರ್ಥಿಗಳು ಆಯಾ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಬರೆಯಲಿದ್ದಾರೆ.












Click it and Unblock the Notifications