Chickpea Farmers: ಕರ್ನಾಟಕದ ಕಡಲೆ ಬೆಳೆಗಾರರ ಬೆನ್ನಿಗೆ ನಿಂತ ಕೇಂದ್ರ ಸರ್ಕಾರ: 1 ಲಕ್ಷ ಮೆಟ್ರಿಕ್ ಟನ್ ಕಡಲೆ ಖರೀದಿಗೆ ಅಸ್ತು
ನವದೆಹಲಿ: ಕರ್ನಾಟಕದ ಕಡಲೆ ಬೆಳೆಗಾರರ ಬೆನ್ನಿಗೆ ಕೇಂದ್ರ ಸರ್ಕಾರ ನಿಂತಿದೆ. 1 ಲಕ್ಷ ಮೆಟ್ರಿಕ್ ಟನ್ ಕಡಲೆ ಖರೀದಿ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮನವಿ ಮಾಡಿದ್ದರು. ಈ ಮನವಿಗೆ ಕೇಂದ್ರ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದೀಗ ರಾಜ್ಯದ ಕಡಲೆ ಬೆಳೆಗಾರರ ಬೆಂಬಲಕ್ಕೂ ಬಂದಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಅವರ ಮನವಿ ಮೇರೆಗೆ ಕರ್ನಾಟಕದಿಂದ ಬೆಂಬಲ ಬೆಲೆಯಲ್ಲಿ 1 ಲಕ್ಷ ಮೆಟ್ರಿಕ್ ಟನ್ ಕಡಲೆ ಖರೀದಿಗೆ ಅಸ್ತು ಎಂದಿದೆ.
ಬೆಂಬಲ ಬೆಲೆ ಯೋಜನೆಯಡಿ ಕನಿಷ್ಠ ಬೆಂಬಲ ಬೆಲೆ 5,875 ರೂಪಾಯಿ ಮೊತ್ತದಲ್ಲಿ ಒಟ್ಟು 101340 MT ಹಿಂಗಾರು ಹಂಗಾಮಿನ ಕಡಲೆ ಕಾಳು ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಬಗ್ಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಸಚಿವ ಪ್ರಹ್ಲಾದ ಜೋಶಿ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಪ್ರಮುಖ ದ್ವಿದಳ ಧಾನ್ಯಗಳಲ್ಲಿ ಕಡಲೆಯೂ ಒಂದಾಗಿದ್ದು, ಸುಮಾರು 9.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಉತ್ಪಾದನೆ ಹೊಂದಿದೆ. ಆದರೆ, ಪ್ರಸ್ತುತ ಮಾರುಕಟ್ಟೆ ಬೆಲೆಗಿಂತ ತೀರಾ ಕಡಿಮೆ ಬೆಲೆಯಿಂದಾಗಿ ಕಡಲೆ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಬೆಂಬಲ ಬೆಲೆಯಲ್ಲಿ ಖರೀದಿಗೆ ಕ್ರಮ ಕೈಗೊಳ್ಳುವಂತೆ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಪತ್ರ ಬರೆದು ಗಮನ ಸೆಳೆದಿದ್ದರು.
ಕಡಲೆಗೆ ಪ್ರಸ್ತುತ ಮಾರುಕಟ್ಟೆ ಬೆಲೆ RMS 2026-27ಕ್ಕೆ ಘೋಷಿಸಲಾದ ಪ್ರತಿ ಕ್ವಿಂಟಲ್‌ಗೆ 5,875 ರೂಪಾಯಿ MSP ಕ್ಕಿಂತ ತುಂಬಾ ಕಡಿಮೆಯಾಗಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಕಡಲೆ ಬೆಲೆ ಮತ್ತಷ್ಟು ಕುಸಿಯುವ ಆತಂಕವಿದೆ. ಆದ್ದರಿಂದ, ಕರ್ನಾಟಕದಲ್ಲಿ ಕಡಲೆ(ಚಾನ್ನಾ)ಗೆ ಬೆಂಬಲ ಬೆಲೆ ಯೋಜನೆ (PSS) ಅನ್ನು ಆದ್ಯತೆ ಮೇರೆಗೆ ಜಾರಿಗೆ ತರುವ ಅವಶ್ಯಕತೆಯಿದೆ ಎಂದು ಪ್ರಹ್ಲಾದ ಜೋಶಿ ಅವರು ಕೃಷಿ ಸಚಿವರಿಗೆ ಮನದಟ್ಟು ಮಾಡಿಕೊಟ್ಟಿದ್ದರು. ಸಚಿವ ಪ್ರಹ್ಲಾದ ಜೋಶಿ ಅವರ ಮನವಿಗೆ ತಕ್ಷಣವೇ ಸ್ಪಂದಿಸಿದ ಕೃಷಿ ಸಚಿವರು ರಾಜ್ಯದ ರೈತರ ಹಿತದೃಷ್ಟಿಯಿಂದ 1 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ಕಡಲೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ರಾಜ್ಯ ಸರ್ಕಾರಕ್ಕೆ ಅನುಮೋದನೆ ನೀಡಿದ್ದಾರೆ.
ಕೂಡಲೇ ಖರೀದಿ ಕೇಂದ್ರ ತೆರೆಯಲು ಒತ್ತಾಯ
ಕರ್ನಾಟಕ ಸರ್ಕಾರವು ಈ ಕೂಡಲೇ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ರೈತರಿಂದ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಸಚಿವ ಜೋಶಿ ಒತ್ತಾಯಿಸಿದ್ದಾರೆ. ಇನ್ನು ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಗೆ ಅನುಮತಿ ನೀಡುವ ಮೂಲಕ ರಾಜ್ಯದ ರೈತರ ನೆರವಿಗೆ ಬಂದಿರುವ ಪ್ರಧಾನಿ ನರೇಂದ್ರ ಮತ್ತು ಕೃಷಿ ಸಚಿವ ಶಿವರಾಜ್‌ಸಿಂಗ್ ಚವ್ಹಾಣ ಅವರಿಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಅವರು ಧನ್ಯವಾದ ತಿಳಿಸಿದ್ದಾರೆ.












Click it and Unblock the Notifications