ಮಹಿಳೆ, ಮಕ್ಕಳ ಪೌಷ್ಟಿಕಾಂಶ ಪೂರೈಕೆಗೆ ಕೇಂದ್ರೀಕೃತ ವ್ಯವಸ್ಥೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು, ಜುಲೈ 15: ಅಂಗನವಾಡಿ ಕೇಂದ್ರಗಳ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಪೂರಕ ಪೌಷ್ಟಿಕಾಂಶವನ್ನು ಪೂರೈಸಲು ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ.
ಪ್ರಸ್ತುತ ಮಹಿಳಾ ಪೂರಕ ಪೌಷ್ಟಿಕಾಂಶ ಉತ್ಪಾದನೆ ಮತ್ತು ತರಬೇತಿ ಕೇಂದ್ರಗಳು (MSPTC) ಅಂಗನವಾಡಿ ಕೇಂದ್ರಗಳಿಗೆ ಪೂರಕ ಪೌಷ್ಟಿಕಾಂಶವನ್ನು ಪೂರೈಸುತ್ತಿದ್ದು, ಅಕ್ರಮಗಳನ್ನು ತಡೆಗಟ್ಟಲು ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಶಾಸಕ ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ವಿಷಯ ಬಹಿರಂಗ ಮಾಡಿದರು. ಅಂಗನವಾಡಿ ಕೇಂದ್ರಗಳಲ್ಲಿ ಒಂದಕ್ಕೆ ನನ್ನ ಅನಿರೀಕ್ಷಿತ ಭೇಟಿಯ ಸಮಯದಲ್ಲಿ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ನೋಡಿ ನಾನು ಆಘಾತಕ್ಕೊಳಗಾಗಿದ್ದೇನೆ. ಈ ವೇಳೆ ಆ ಕೇಂದ್ರವನ್ನು ತಕ್ಷಣವೇ ಮುಚ್ಚುವಂತೆ ನಾನು ನಿರ್ದೇಶಿಸಿದೆ ಎಂದು ಅವರು ಹೇಳಿದರು.
ತಾನು ಭೇಟಿ ನೀಡಿದ ಕೇಂದ್ರವು ಕೊಳೆತ ಮೊಟ್ಟೆಗಳನ್ನು ಪೂರೈಸುತ್ತಿದೆ. ಹೀಗಾಗಿ ನಾನು ಎಲ್ಲಾ ಕೇಂದ್ರಗಳಿಂದ ಪೂರಕ ಪೌಷ್ಟಿಕಾಂಶದ ಪೂರೈಕೆಯ ಬಗ್ಗೆ ಸಂಪೂರ್ಣ ವರದಿಯನ್ನು ಕೇಳಿದ್ದೇನೆ ಎಂದು ಅವರು ಸದನಕ್ಕೆ ತಿಳಿಸಿದರು.
ಆಗ ಕಳಪೆ ಗುಣಮಟ್ಟದ ಆಹಾರ ಪೂರೈಕೆಯಲ್ಲಿ ಇಲಾಖೆ ಅಧಿಕಾರಿಗಳ ಕೈವಾಡವಿದೆ ಎಂದು ನಾರಾಯಣಸ್ವಾಮಿ ಆರೋಪಿಸಿದರು. ಸಾಕ್ಷ್ಯಾಧಾರಗಳಿದ್ದರೆ ಒದಗಿಸುವಂತೆ ಎಂಎಲ್‌ಸಿಗೆ ಮನವಿ ಮಾಡಿದ ಸಚಿವರು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂಬುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯ ಉದ್ದೇಶ. ಆದರೆ ನಮ್ಮ ಇಲಾಖೆಯ ಉದ್ದೇಶವೇ ಎಡವುತ್ತಿರುವುದು ಗಮನಕ್ಕೆ ಬಂದಿದೆ. ಮೊಟ್ಟೆ ವಿಚಾರ ಕ್ಯಾಬಿನೆಟ್ ನಲ್ಲಿ ಪ್ರಸ್ತಾಪ ಮಾಡುತ್ತೇನೆ. ಇಲಾಖೆಯ ಉದ್ದೇಶ ಈಡೇರಿಸಲು ಬದ್ಧವಾಗಿದ್ದೇವೆ ಎಂದು ಹೇಳಿದರು.
ವಿಕೇಂದ್ರೀಕರಣ ಮಾದರಿಯ ಖರೀದಿಯಿಂದ ಪ್ರಾಮಾಣಿಕವಾಗಿ ಪೂರೈಕೆ ಆಗ್ತಿಲ್ಲ. ಈ ನಿಟ್ಟಿನಲ್ಲಿ ಖರೀದಿ ವ್ಯವಸ್ಥೆ ಕೇಂದ್ರೀಕೃತ ಮಾಡಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಿ ನಿಗಾ ಇಡಲಾಗುತ್ತದೆ. ಖಾಸಗಿ ಜೊತೆಗೆ ಸರ್ಕಾರದ ಸಂಸ್ಥೆಗಳಿಂದ ಖರೀದಿಗೆ ಚಿಂತನೆ ಮಾಡಲಾಗಿದೆ. ಎಲ್ಲಾ ಪ್ರಸ್ತಾವಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.












Click it and Unblock the Notifications