Breaking: ಕಳಸಾ ಬಂಡೂರಿ ಡಿಪಿಆರ್: ಇಂದು ಕಾಂಗ್ರೆಸ್ ಜಲ ಜನಾಂದೋಲನ, ಲಕ್ಷ ಜನ ಭಾಗಿ ನಿರೀಕ್ಷೆ
ಬೆಂಗಳೂರು, ಜನವರಿ 02: ಕಳಸಾ ಬಂಡೂರಿ ಯೋಜನೆಯ ಡಿಪಿಆರ್‌ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದು ಎರಡು ರಾಜಕೀಯ ಪಕ್ಷಗಳ ನಡವೆ ಸಮರಕ್ಕೆ ಕಾರಣವಾಗಿದೆ. ಕೇಂದ್ರದಿಂದ ಒಪ್ಪಿಗೆ ಪಡೆದ ರಾಜ್ಯ ಬಿಜೆಪಿ ಸರ್ಕಾರ ವಿಜಯೋತ್ಸವ ಆಚರಿಸಿದೆ. ಇತ್ತ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಹುಬ್ಬಳ್ಳಿಯಲ್ಲಿ ಬೃಹತ್ ಜಲ ಜನಾಂದೋಲನ ಹಮ್ಮಿಕೊಂಡಿದ್ದಾರೆ.
ಸೋಮವಾರ ಜನವರಿ 02ರಂದು ಮಧ್ಯಾಹ್ನ 3ಗಂಟೆಗೆ ಕಾಂಗ್ರೆಸ್ ವತಿಯಿಂದ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಜಲ ಜನಾಂದೋಲನ ನಡೆಯಲಿದೆ. ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಬಿಜೆಪಿ ಜನರ ಹಾದಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಬೃಹತ್ ಸಮಾರಂಭ ಆಯೋಜಿಸಿದೆ. ಈ ಮೂಲಕ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ನಡೆಸಲು ಕಾಂಗ್ರೆಸ್ ತಯಾರಾಗಿದೆ.
ಇಂದಿನ ಸಮಾವೇಶಕ್ಕೆ ಈಗಾಗಲೇ ಭರ್ಜರಿ ತಯಾರಿ ನಡೆದಿದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಸೇರಿದಂತೆ ಸಾಕಷ್ಟು ಮುಖಂಡರು ಕಾರ್ಯರ್ತರು ಪಾಲ್ಗೊಳ್ಳಲಿದ್ದಾರೆ.

ಇದೇ ಹುಬ್ಬಳ್ಳಿಯಲ್ಲಿ ಕಳಸಾ ಬಂಡೂರಿಗೆ ಯೋಜನೆಗೆ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ವಿಜಯೋತ್ಸವ ನಡೆಯಿತು. ಎರಡೂವರೆ ತಿಂಗಳಲ್ಲಿ ಮಹದಾಯಿ ಯೋಜನೆ ಕಾಮಗಾರಿ ಆರಂಭಿಸುತ್ತೇವೆ ಎಂದು ಸಚಿವರು ತಿಳಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಇದರ ಬೆನ್ನಲ್ಲೆ ಕಾಂಗ್ರೆಸ್ ಜನಾಂದೋಲನ ಆಯೋಜಿಸಿದೆ.
ಇಂದು ಗೋವಾ ಸಿಎಂ ಸಭೆ
ಕರ್ನಾಟಕದ ಕಳಸಾ ಬಂಡೂರಿ ಯೋಜನೆಗೆ ನೀಡಿದ ಅನುಮತಿ ವಾಪಾಸ್ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವ ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ವಿಶೇಷ ಸಂಪುಟ ಸಭೆ ಕರೆದಿದ್ದಾರೆ.
ಸಭೆಯಲ್ಲಿ ಕರ್ನಾಟಕಕ್ಕೆ ನೀಡಿದ ಅನುಮತಿ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಮುಖಂಡರು ನಿರ್ಣಯ ಕೈಗೊಳ್ಳಲಿದ್ದಾರೆ. ಜೊತೆಗೆ ಡಿಪಿಆರ್‌ಗೆ ನೀಡಿದ ಅನುಮತಿ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೆಟ್ಟಿಲೇರುವ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications