Karnataka: ಬೆಲೆ ಏರಿಕೆಯಿಂದ ಹೈರಾಣವಾಗಿರುವ ಜನರಿಗೆ ಮತ್ತೊಂದು ಶಾಕ್
ಬೆಂಗಳೂರು, ಆಗಸ್ಟ್ 01: ತರಕಾರಿ, ಹಾಲು ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಕಂಗಾಲಾಗಿರುವ ಜನರಿಗೆ ಮತ್ತೊಂದು ಆರ್ಥಿಕ ಹೊಡೆದ ಬಿದ್ದಿದೆ. ಮರಳು, ಸ್ಯಾಂಡ್ ಹಾಗೂ ಇನ್ನಿತರ ಕಟ್ಟಡ ಕಾಮಗಾರಿಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಇದು ಹೊಸ ಮನೆ ಕಟ್ಟುವ ಆಸೆ-ಕನಸು ಹೊಂದಿದವರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.
ಆಗಸ್ಟ್ 1ರಿಂದ ಅನ್ವಯವಾಗುವಂತೆ ನಂದಿನಿ ಹಾಲು ಮತ್ತದರ ಉತ್ಪನ್ನಗಳ ಮೇಲೆ ದರ ಹೆಚ್ಚಾಗಿದೆ. ಇದರೊಂದಿಗೆ ಇನ್ನಿತರ ಅಗತ್ಯ ವಸ್ತುಗಳ ದರವು ಹೆಚ್ಚಾಗಿದೆ. ಟೊಮೆಟೋ ಪ್ರತಿ ಕೇಜಿಗೆ 160 ರೂಪಾಯಿ ದಾಟಿದೆ. ಬದುಕು ಇಷ್ಟು ದುಬಾರಿ ಆಗಿರುವ ಸಂದರ್ಭದಲ್ಲಿಯೇ ಸಿಮೆಂಟ್, ಮರಳು, ಎಂಸ್ಯಾಂಡ್, ಗ್ರಾನೈಟ್ಸ್, ಸೈಜ್‌ಗಲ್ಲು, ಬೊಲ್ಡರ್ಸ್, ದಿಂಡಿಗಲ್ಲು, ಸೇರಿದಂತೆ ಗೃಹ ನಿರ್ಮಾಣಕ್ಕೆ ಬಳಸುವ ಬಹುತೇಕ ವಸ್ತುಗಳ ದರವುದ ಇಂದಿನಿಂದ (ಆಗಸ್ಟ್ 1)ರಿಂದಲೇ ಏರಿಕೆ ಆಗಿದೆ.

ರಾಜ್ಯದಲ್ಲಿ ರಾಜ್ಯ ಸರ್ಕಾರವು ರಾಯಲ್ಟಿ ಹೆಚ್ಚಿಸಿದರೆ ಹೀಗೆ ಸಿಎಂಟ್, ಗ್ರಾನೈಟ್, ಮರಳುಗಳ ಬೆಲೆ ಏರಿಕೆ ಆಗಲಿದೆ. ಇದರಿಂದ ಸರ್ಕಾರಿ, ಖಾಸಗಿ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿ ಕೆಲಸಗಳ ಮೇಲೆ ಹೊಡೆತ ಬೀಳುತ್ತದೆ. ಮುಖ್ಯವಾಗಿ ಇದು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಲಿದೆ.
ಸರ್ಕಾರದ ರಾಯಲ್ಟಿ ಹೆಚ್ಚಳದಿಂದ ಬೆಲೆ ಏರಿಕೆ
ಈ ಹಿಂದಿದ್ದ ಬಿಜೆಪಿ ಸರ್ಕಾರ ಶೇಕಡಾ 10 ರಷ್ಟು ರಾಯಲ್ಟಿ ಹೆಚ್ಚಳ ಮಾಡಿತ್ತು. ಅದರ ಬೆನ್ನಲ್ಲೇ ಹೊಸ ಕಾಂಗ್ರೆಸ್ ಸರ್ಕಾರ ಸಹ ಪ್ರಸಕ್ತ ಬಜೆಟ್‌ನಲ್ಲಿ ರಾಜಸ್ವ ಏರಿಕೆ ಮಾಡಿತು. ಇದರ ಪರಿಣಾಮ ನೇರವಾಗಿ ಜನಸಾಮಾನ್ಯರ ಮೇಲೆ ಬೀಳಲಿದೆ. ಈಗಾಗಲೇ ನಿರಂತರ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಮತ್ತೊಂದು ಶಾಕ್ ಹೊಡೆದಂತಾಗಿದೆ. ಈ ದುಬಾರಿ ಕಾಲದಲ್ಲಿ ಬದುಕು ನಡೆಸುವುದು ದುಸ್ತರ ಎಂಬಂತಾಗಿದೆ.

ಪ್ರತಿ ಲೀಟರ್ ಹಾಲಿನ ದರದಲ್ಲಿ ಮೂರು ರೂಪಾಯಿ ಹೆಚ್ಚಾಗಿದ್ದರಿಂದ ಒಂದು ಕಪ್ ಟೀ ಬೆಲೆ ಎರಡು ರೂಪಾಯಿಗೆ ಹೆಚ್ಚಾಗಿದೆ. ಕೆಲವರು 10 ರೂಪಾಯಿ ಟೀ ಬೆಲೆಯನ್ನು 15ರೂಪಾಯಿಗೆ ಹೆಚ್ಚಿಸಿದ್ದಾರೆ. ಅದರೊಂದಿಗೆ ಅಡುಗೆ ಅನಿಲ, ತರಕಾರಿ, ದಿನಸಿ ಬೆಲೆ ಏರಿಕೆಯಿಂದ ಹೋಟೆಲ್ ತಿಂಡಿ-ತಿನಿಸುಗಳ ಬೆಲೆ ಶೇಕಡಾ 10ರಷ್ಟು ಏರಿಕೆ ಆಗಿದೆ. ಕೊರೊನಾ ನಂತರ ಬೆಲೆ ಏರಿಕೆಯ ಪ್ರಕ್ರಿಯೆ ಮುಂದುವರಿದಿದೆ. ಇದರಿಂದ ಜನಸಾಮಾನ್ಯರು ದಿನೇ ದಿನೇ ಆರ್ಥಿಕವಾಗಿ ಕುಗ್ಗುವಂತಾಗಿದೆ.












Click it and Unblock the Notifications