ಜಯಂತಿಗಳ ಆಚರಣೆ; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ
ಬೆಂಗಳೂರು, ಏಪ್ರಿಲ್ 05; ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಮಹಾಪುರುಷ/ ಗಣ್ಯರಾದ ಭಗವಾನ್ ಮಹಾವೀರ, ಬಸವಣ್ಣ, ಅಕ್ಕಮಹಾದೇವಿ, ಮುಂತಾದವರ ಜಯಂತಿಗಳನ್ನು ಆಚರಿಸುವ ಬಗ್ಗೆ ಜಿಲ್ಲೆಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ಆದರೆ ಈ ಪತ್ರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆಯ ಬಗ್ಗೆ ನಮೂದಿಸಿಲ್ಲ ಎಂಬುದ ಸುದ್ದಿಯಾಗಿತ್ತು.
ಈ ಹಿನ್ನಲೆಯಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆಯ ಬಗ್ಗೆ ನಮೂದಿಸದೇ ಇರುವ ಕುರಿತು ದೃಶ್ಯ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿರುವ ಬಗ್ಗೆ ವಿವರಣೆ ನೀಡಿದ್ದಾರೆ.

2023ನೇ ಸಾಲಿನ ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ 6 ಜಯಂತಿಗಳನ್ನು ಆಚರಿಸಬೇಕಿದ್ದು, ಆದರೆ ದಿನಾಂಕ 29/3/2023ರಿಂದ ದಿನಾಂಕ 15/5/2023ರವರೆಗೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸದರಿ ಜಯಂತಿಗಳನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಣೆ ಮಾಡುವಂತೆ ಎಂದು ಜಿಲ್ಲಾಧಿಕಾರಿಗಳಿಗೆ ದಿನಾಂಕ 1/4/2023ರಂದು ಪತ್ರದ ಮೂಲಕ ಎಲ್ಲಾ ಜಿಲ್ಲೆಗಳಿಗೆ ತಿಳಿಸಲಾಗಿರುತ್ತದೆ.
ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಂರವರ ಜಯಂತಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರತಿ ವರ್ಷ ಆಚರಿಸಲಾಗುತ್ತಿದ್ದು, ಮೇಲ್ಕಂಡ 2 ಜಯಂತಿಗಳ ಆಚರಣೆಗೆ ಸಂಬಂಧಿಸಿದ ವಿಷಯಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ ಎಂದು ಬುಧವಾರದ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಂ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್‌ರವರ ಜಯಂತಿಯನ್ನು ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಸರ್ಕಾರದಿಂದ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಪ್ರತಿ ವರ್ಷವೂ ಆಚರಿಸಲಾಗುತ್ತಿದೆ ಎಂಬ ಅಂಶವನ್ನು ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರಲಾಗಿದೆ.
ದಿನಾಂಕ 5/4/2023ರಂದು ಡಾ. ಬಾಬು ಜಗಜೀವನ್ ರಾಂ ಇವರ ಜನ್ಮದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸಲಾಗಿದೆ ಎಂದು ಈ ಮೂಲಕ ತಿಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಡಾ. ಬಾಬು ಜಗಜೀವನ್ ರಾಂ ಜಯಂತಿ; ಸಮಾಜ ಕಲ್ಯಾಣ ಇಲಾಖೆಯ ಮೂಲಕ ಏಪ್ರಿಲ್ 5ರ ಬುಧವಾರ ಡಾ. ಬಾಬು ಜಗಜೀವನ್ ರಾಂ ಜಯಂತಿ ಆಚರಣೆ ಮಾಡಲಾಯಿತು. ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದ ಪಾರ್ಕ್‌ನಲ್ಲಿ ಡಾ. ಬಾಬು ಜಗಜೀವನ್ ರಾಂ ಅವರ 116ನೇ ಜನ್ಮದಿನಾಚರಣೆ ನಡೆಯಿತು. ಮಂಡ್ಯ ಜಿಲ್ಲಾಧಿಕಾರಿ ಡಾ. ಹೆಚ್. ಎನ್. ಗೋಪಾಲಕೃಷ್ಣ ಮಾತನಾಡಿ, "ಬಾಬು ಜಗಜೀವನ್ ರಾಂ ಅವರು ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ಬಡ ಕುಟುಂಬದಲ್ಲಿ ಜನಿಸಿದ ಇವರು ಮಂತ್ರಿಮಂಡಲದಲ್ಲಿ ಸಚಿವರಾಗಿ, ಭಾರತದ ಉಪ ಪ್ರಧಾನಿಯಾಗಿ, ಹಸಿರು ಕ್ರಾಂತಿ ಹರಿಕಾರರಾಗಿ ಭಾರತ ದೇಶಕ್ಕೆ ದಿಕ್ಕು ತೋರಿಸಿಕೊಟ್ಟರು" ಎಂದರು.
"1951 ರಿಂದ 1986 ರವರೆಗೆ ಸತತವಾಗಿ 50 ವರ್ಷಗಳ ಕಾಲ ಸಂಸತ್ ಸದಸ್ಯರಾಗಿ ಅತ್ಯುತ್ತಮ ಸಂಸದೀಯ ಪಟುವಾಗಿ ಡಾ. ಬಾಬು ಜಗಜೀವನ್ ರಾಂ ಕೆಲಸ ಮಾಡಿದರು. ಶೋಷಿತ ಸಮುದಾಯದವರು ಇಂತಹ ಮಹಾನ್ ವ್ಯಕ್ತಿಗಳ ಅದರ್ಶಗಳನ್ನು ಮೈಗೂಡಿಸಿಕೊಂಡು ಅವಕಾಶ ಸೃಷ್ಟಿ ಮಾಡಿಕೊಳ್ಳುವ ಕಡೆ ಯೋಚನೆ ಮಾಡಿ ದೇಶದ ಚುಕ್ಕಾಣಿ ಹಿಡಿಯಬೇಕಿದೆ" ಎಂದು ಕರೆ ನೀಡಿದರು.
"ಡಾ. ಬಾಬು ಜಗಜೀವನ್ ರಾಂ ಅಸ್ಪ್ರಶ್ಯತಾ ನಿವಾರಣೆಯ ಹೋರಾಟದ ಮಹಾನ್ ನಾಯಕರಾಗಿ ಮುಂಚೂಣಿಯಲ್ಲಿದ್ದರು. ಇವರ ತತ್ವ ಆದರ್ಶಗಳನ್ನು ನಾವುಗಳು ಮೈಗೂಡಿಸಿಕೊಂಡು ಮುನ್ನಡೆಯಬೇಕಿದೆ. ಸಮಾಜದಲ್ಲಿ ಧರ್ಮ, ಜಾತಿಗಳ ನಡುವೆ ಘರ್ಷಣೆಗಳು ಉಂಟಾಗದಂತೆ ಮುನ್ನಡೆಯಲು ನಾವೂ ಒಂದೇ ಮನೋಭಾವ ಹಾಗೂ ಸಮಾನರು ಎಂಬ ದೃಷ್ಟಿಯಿಂದ ಮುಂದುವರೆಯಬೇಕಾಗುತ್ತದೆ" ಎಂದು ತಿಳಿಸಿದರು.












Click it and Unblock the Notifications