ಬೇಲೇಕೇರಿ ಪ್ರಕರಣ : ಶಾಸಕ ಆನಂದ್ ಸಿಂಗ್‌ಗೆ ಜಾಮೀನು
ಬೆಂಗಳೂರು, ಜ.23 : ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಹೊಸಪೇಟೆಯ (ವಿಜಯನಗರ) ಬಿಜೆಪಿ ಶಾಸಕ ಆನಂದ್ ಸಿಂಗ್‌ಗೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 2013ರಲ್ಲಿ ಆನಂದ್ ಸಿಂಗ್ ಅವರನ್ನು ಬಂಧಿಸಲಾಗಿತ್ತು.
ವಿಜಯನಗರ ಬಿಜೆಪಿ ಶಾಸಕ ಆನಂದ್ ಸಿಂಗ್ ಅವರಿಗೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದ್ದು, ಶನಿವಾರ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಸಿಕ್ಕ ನಂತರ ಆನಂದ್ ಸಿಂಗ್‌ಗೆ ಜಾಮೀನು ಸಿಕ್ಕಿದೆ.

ಆನಂದ್ ಸಿಂಗ್ ಒಡೆತನದ ವೈಷ್ಣವಿ ಮಿನರಲ್ಸ್ ಅಕ್ರಮವಾಗಿ ಬೇಲೇಕೇರಿ ಬಂದರಿನಿಂದ ಅದಿರು ಸಾಗಣೆ ಮಾಡಿದ ಆರೋಪವಿದೆ. ಜನವರಿ 2009 ರಿಂದ ಮೇ 2010ರ ಅವಧಿಯಲ್ಲಿ ಬೆಲೇಕೇರಿ ಬಂದರಿನಿಂದ ಮುಖ್ಯವಾಗಿ ಚೀನಾ, ಸಿಂಗಪುರ ಸೇರಿದಂತೆ ವಿದೇಶಕ್ಕೆ ಕಬ್ಬಿಣದ ಅದಿರನ್ನು ಸಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂಬುದುವುದು ಆರೋಪ. [ಗಾಲಿ ರೆಡ್ಡಿ ಬೆಂಜ್ ನಲ್ಲಿ ಹೊರಟ್ರು]
2013ರ ಅಕ್ಟೋಬರ್ 17ರಂದು ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆನಂದ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಸಿಂಗಪುರದಿಂದ ಬೆಂಗಳೂರಿಗೆ ವಾಪಾಸ್ ಆಗುತ್ತಿದ್ದಾಗ, ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. [ಶಾಸಕ ಆನಂದ್ ಸಿಂಗ್ ಬಂಧನ]
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಆನಂದ್ ಸಿಂಗ್ ಸಲ್ಲಿಸಿದ್ದ ಜಾಮೀನು ಅರ್ಜಿ ಅ.7ರಂದು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂಬ ಕಾರಣ ನೀಡಿ ಸಿಂಗ್ ಜಾಮೀನು ಕೋರಿದ್ದರು.












Click it and Unblock the Notifications