ಡಿಕೆ ರವಿ ಪ್ರಕರಣ ಸಿಬಿಐಗೆ : ಯಾರು, ಏನು ಹೇಳಿದರು?
ಬೆಂಗಳೂರು, ಮಾ. 23 : ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕರ್ನಾಟಕ ಜನರ ಒತ್ತಾಯ, ಪ್ರತಿಪಕ್ಷಗಳ ಒತ್ತಡ, ಡಿಕೆ ರವಿ ಕುಟುಂಬದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಕೊನೆಗೂ ಈ ನಿರ್ಧಾರ ಕೈಗೊಂಡಿದ್ದಾರೆ.
ಮಾ.16ರ ಸೋಮವಾರ ಸಂಜೆ ಡಿಕೆ ರವಿ ಅವರು ಮೃತಪಟ್ಟಿದ್ದರು. ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರ ಸಾವು ನಿಗೂಢವಾಗಿದ್ದು, ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂಬ ಒತ್ತಾಯ ರಾಜ್ಯಾದ್ಯಂತ ಕೇಳಿಬಂದಿತ್ತು. [ಡಿಕೆ ರವಿ ಸಾವಿನ ತನಿಖೆ ಸಿಬಿಐಗೆ : ಸಿದ್ದರಾಮಯ್ಯ]
ಡಿಕೆ ರವಿ ಅವರ ಕುಟುಂಬದವರು ವಿಧಾನಸೌಧದ ಮುಂದೆ ಧರಣಿ ಮಾಡಿ ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆವಹಿಸಬೇಕು ಎಂದು ಒತ್ತಾಯಿಸಿದ್ದರು. ಇಂದು ಸರ್ಕಾರ ಸಿಬಿಐ ತನಿಖೆ ನಡೆಸಲು ಒಪ್ಪಿಗೆ ನೀಡಿದೆ. ಈ ಬಗ್ಗೆ ಯಾರು ಏನು ಹೇಳಿದರು ನೋಡೋಣ ಬನ್ನಿ. [ಸಿಬಿಐ, ಸಿಐಡಿಗೆ ಇರುವ ವ್ಯತ್ಯಾಸವೇನು?]

ತನಿಖೆಯಿಂದ ಸತ್ಯಾಂಶ ಹೊರಬರಲಿದೆ
'ರವಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ, ಆದ್ದರಿಂದ ಅವರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿ ಎಂದು ಒತ್ತಾಯ ಮಾಡಿದ್ದೆವು, ಈ ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇನೆ' ಎಂದು ಡಿಕೆ ರವಿ ಅವರ ಮಾವ ಹನುಮಂತರಾಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿಪಕ್ಷಗಳು ಸಾವಿನಲ್ಲಿ ರಾಜಕರಣ ಮಾಡಿಲ್ಲ : ಎಚ್ಡಿಕೆ
'ಡಿಕೆ ರವಿ ಸಾವಿನ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕರಣ ಮಾಡಿಲ್ಲ. ರವಿ ತಂದೆ-ತಾಯಿಯನ್ನು ಕರೆಸಿ ಪ್ರತಿಭಟನೆ ಮಾಡಿಸುವ ದುರ್ಗತಿ ನಮಗೆ ಬಂದಿಲ್ಲ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬುದು ರಾಜ್ಯದ 6 ಕೋಟಿ ಜನರ ಒತ್ತಾಯವಾಗಿತ್ತು, ಇದಕ್ಕೆ ಸರ್ಕಾರ ಸ್ಪಂದಿಸಿದೆ' ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದ ಎಲ್ಲಾ ಜನರ ಹೋರಾಟಕ್ಕೆ ಸಿಕ್ಕ ಜಯ
'ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ರಾಜ್ಯದ ಎಲ್ಲಾ ಜನರು ನಡೆಸಿದ ಹೋರಾಟಕ್ಕೆ ಫಲ ದೊರಕಿದೆ. ಮುಖ್ಯಮಂತ್ರಿಗಳು ಕೊನೆಗೂ ನಮ್ಮ ಒತ್ತಾಯಕ್ಕೆ ಮಣಿಸಿದ್ದಾರೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

ಮಗನ ಸಾವಿನ ರಹಸ್ಯ ಬಯಲಾಗಬೇಕು
'ರಾಜ್ಯದ ಎಲ್ಲಾ ಮಕ್ಕಳು ಚೆನ್ನಾಗಿ ಓದಿ ನನ್ನ ಮಗನಂತೆ ಉತ್ತಮ ಹೆಸರನ್ನು ಮಾಡಬೇಕು. ನನ್ನ ಮಗನ ಸಾವಿನ ರಹಸ್ಯ ತನಿಖೆಯಿಂದ ಹೊರಬರಬೇಕು' ಎಂದು ಡಿಕೆ ರವಿ ಅವರ ತಾಯಿ ಗೌರಮ್ಮ ಹೇಳಿದ್ದಾರೆ.

ಒಂದು ವಾರಗಳ ಕಾಲ ತಡ ಮಾಡಿದ್ದು ಏಕೆ?
'ಡಿಕೆ ರವಿ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯ ಕೇಳಿಬರುತ್ತಿದ್ದರೂ ಸಿದ್ದರಾಮಯ್ಯ ಅವರು ಒಂದು ವಾರಗಳ ಕಾಲ ತಡ ಮಾಡಿದ್ದು ಏಕೆ?' ಎಂದು ಪ್ರಶ್ನಿಸಿರುವ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ರಾಜ್ಯದ ಜನರ ಒತ್ತಾಯಕ್ಕೆ ಮಣಿದು ಸಿಬಿಐ ತನಿಖೆಗೆ ಒಪ್ಪಿದ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಸರ್ಕಾರದಿಂ ಕುಟುಂಬಕ್ಕೆ ಪರಿಹಾರ ನೀಡಲಿ
'ಡಿಕೆ ರವಿ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇನೆ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸರ್ಕಾರದಿಂದ ಡಿಕೆ ರವಿ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಂದೆ-ತಾಯಿಯ ಮನವಿಯಂತೆ ಸಿಬಿಐಗೆ ನೀಡಿದೆ
'ಪ್ರತಿಪಕ್ಷಗಳು ಹೆಣದ ಮೇಲೆ ಸ್ಮಶಾನದಲ್ಲಿ ರಾಜಕಾರಣ ಮಾಡುತ್ತವೆ. ಡಿಕೆ ರವಿ ಅವರ ತಂದೆ-ತಾಯಿಯ ಮನವಿಯಂತೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ. ಪ್ರಕರಣದಲ್ಲಿ ಸಚಿವರ ತಪ್ಪಿದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ' ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.












Click it and Unblock the Notifications