ಕಾವೇರಿ ಜಲವಿವಾದ: ಒಂದೇ ವಾರದಲ್ಲಿ ಎರಡು ಬಂದ್‌ಗಳು- ಬೆಂಗಳೂರಿಗೆ ತಟ್ಟಲಿದೆ ಬಿಸಿ
ಬೆಂಗಳೂರು, ಸೆಪ್ಟೆಂಬರ್ 25: ತಮಿಳುನಾಡಿಗೆ ಪ್ರತಿ ದಿನ 5,000 ಕ್ಯೂಸೆಕ್ಸ್ ನೀರು ಹರಿಸುವಂತೆ ನೀಡಿರುವ ಆದೇಶ ಖಂಡಿಸಿ ಸೆಪ್ಟೆಂಬರ್ 26ರ ಮಂಗಳವಾರ ಬೆಂಗಳೂರು ಬಂದ್ ಹಾಗೂ ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಈ ಎರಡು ಬಂದ್‌ಗಳಿಂದ ರಾಜಧಾನಿ ಬೆಂಗಳೂರಿನ ಮೇಲೆ ನೇರ ಪರಿಣಾಮ ಬೀರಲಿದೆ.
ಸೆಪ್ಟೆಂಬರ್ 26 ಬೆಂಗಳೂರು ಬಂದ್‌ನ ನೇತೃತ್ವವನ್ನು ರೈತ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ವಹಿಸಿದರೆ, ಸೆಪ್ಟೆಂಬರ್ 29ರ ಕರ್ನಾಟಕ ಬಂದ್‌ನ ನೇತೃತ್ವವನ್ನು ವಾಟಾಳ್ ನಾಗರಾಜ್ ವಹಿಸಲಿದ್ದಾರೆ. ಕರ್ನಾಟಕದಲ್ಲಿ ನೂರಾರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದೆ. ಹೀಗಿದ್ದರೂ ತಮಿಳುನಾಡಿಗೆ ನೀರು ಬಿಡುವಂತೆ ಸೂಚಿಸಿರುವುದು ಸಹಜವಾಗಿ ನಾಡಿನ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಕಾವೇರಿ ಕೊಳ್ಳದ ಜನರಿಗೆ ನೀರಿನ ಅಭಾವ ಸೃಷ್ಟಿಯಾಗಿದೆ. ಮಾತ್ರವಲ್ಲದೆ ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಎದುರಾಗಲಿದ್ದು, ಜನರಿಗೆ ನೀರಿನ ಹಾಹಾಕಾರ ಸೃಷ್ಟಿಯಾಗಲಿದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಮುಂಗಾರು ಬಿತ್ತನೆ ಪ್ರಮುಖವಾಗಿದ್ದು, ಮಳೆ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ಇದರಿಂದ ಆಹಾರ ಭದ್ರತೆ ಧಕ್ಕೆಯಾಗಲಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಮುಂದೆ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ. ಉದಾಹರಣೆಗೆ ಟೊಮೇಟೊ ಬೆಲೆ 200ಕ್ಕೆ ಏರಿದ್ದನ್ನು ನಾವು ಗಮನಿಸಬಹುದು. ಹೀಗೆ ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯ ಬಿಸಿ ರಾಜಧಾನಿ ಬೆಂಗಳೂರಿನ ಜನರಿಗೆ ನೇರವಾಗಿ ತಟ್ಟಲಿದೆ.
ನಾಳೆ ಬೆಂಗಳೂರು ಬಂದ್‌ನಿಂದಾಗಿ ಸರ್ಕಾರಿ ಬಸ್, ಖಾಸಗಿ ಬಸ್, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್, ಹೋಟೆಲ್‌ಗಳು, ಕೆಲವು ಕೈಗಾರಿಕೆಗಳು, ಶಾಲೆ, ಕಾಲೇಜು, ಐಟಿ ಕಂಪೆನಿಗಳು, ಆಟೋ ರಿಕ್ಷಾ, ಕ್ಯಾಬ್ (ಓಲಾ, ಉಬರ್) ಇವೇ ಮೊದಲಾದ ಸೇವೆಗಳು ವ್ಯತ್ಯಯವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಹಲವಾರು ಜನರ ಆದಾಯಕ್ಕೆ ಇದು ನೇರ ಹೊಡೆತ ನೀಡಲಿದೆ.
ಆದರೆ ರಾಜ್ಯಕ್ಕೆ ನೀರಿನ ಅಗತ್ಯವಿರುವುದರಿಂದ ಕೆಆರ್‌ಎಸ್ ಜಲಾಶಯದಲ್ಲಿ ನೀರು ಇಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುವಂತೆ ಹೇಳಿರುವುದು ನಾಡಿನ ಜನರ ಆಕ್ರೋಶಕ್ಕೆ ಗುರಿಯಾಗಿದೆ, ಈ ಮಧ್ಯೆ ರಾಜ್ಯ ಸರ್ಕಾರ ಸರಿಯಾಗಿ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಿಲ್ಲ ಎಂದು ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಆರೋಪಿಸಿವೆ. ಇವೆಲ್ಲದರ ಮಧ್ಯೆ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಕ್ಕೆ ಇದೆ.
ರಾಜ್ಯದ ಹಿತದೃಷ್ಟಿಯಿಂದ ನೀರು ನಮಗೆಲ್ಲರಿಗೂ ಬೇಕಾಗಿದ್ದು, ರಾಜ್ಯದಲ್ಲಿರುವ ಎಲ್ಲ ಜನರು ಬಂದ್‌ಗೆ ಬೆಂಬಲ ಸೂಚಿಸಬೇಕು ಎಂದು ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಶುರುವಾದಗಿನಿಂದಲೂ ಅದರ ನಿರ್ಧಾರಕ್ಕೆ ರಾಜ್ಯದಿಂದ ವಿರೋಧ ವ್ಯಕ್ತವಾಗುತ್ತಲೇ ಇದೆ. ತಮಿಳುನಾಡಿನ ಕುರುವೈ ಬೆಳೆಗೆ ಕಾವೇರಿ ನೀರು ಮಹತ್ವದ್ದಾಗಿದೆ. ಒಂದು ವೇಳೆ ಕಾವೇರಿ ನೀರು ಬಿಡದಿದ್ದರೇ ತಮಿಳುನಾಡಿನ ಪರಿಸ್ಥಿತಿಯೂ ಹದಗೆಡುತ್ತದೆ ಎಂದು ವಾದ ಮಂಡಿಸಲಾಗಿದೆ.
ಬೆಂಗಳೂರು ಹಾಗೂ ಕರ್ನಾಟಕ ಬಂದ್‌ನಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುವುದಂತೂ ನಿಜ. ದಿನಗೂಲಿ ನೌಕರರು, ಆಟೋ ಚಾಲಕರು, ಖಾಸಗಿ ಸಾರಿಗೆ ಸಂಸ್ಥೆಗಳ ನೌಕರರು, ದಿನನಿತ್ಯದ ಆದಾಯವನ್ನೇ ನಂಬಿಕೊಂಡಿರುವ ಕಾರ್ಮಿಕರಿಗೆ ನೇರ ಪರಿಣಾಮ ಎದುರಿಸಲಿದ್ದಾರೆ. ಆದರೆ ರಾಜ್ಯದಲ್ಲಿ ಕಾವೇರಿ ನೀರಿನ ಅಗತ್ಯವಿರುವುದರಿಂದ ನೀರಿಗಾಗಿ ಹೋರಾಟ ಅನಿವಾರ್ಯ ಎಂದು ಸಾವಿರಾರು ಕನ್ನಡಿಗರು ನಿರ್ಧರಿಸಿದ್ದಾರೆ.












Click it and Unblock the Notifications