ತಮಿಳುನಾಡು ಅರ್ಜಿ ತಿರಸ್ಕರಿಸಿದ ನ್ಯಾಯಾಧೀಕರಣ
ನವದೆಹಲಿ, ಜು. 15 : ಏಳು ವರ್ಷಗಳ ನಂತರ ನಡೆದ ಕಾವೇರಿ ನ್ಯಾಯಾಧೀಕರಣದ ಸಭೆಯಲ್ಲಿ ಜಲ ವಿವಾದದ ಕುರಿತು ವಿಚಾರಣೆ ನಡೆಸುವ ಬಗ್ಗೆ ಸುಪ್ರೀಂಕೋರ್ಟ್ ನಿಂದ ಸ್ಪಷ್ಟ ನಿರ್ದೇಶನ ಪಡೆಯುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಲಾಗಿದೆ.
ಮಂಗಳವಾರ ನವದೆಹಲಿಯಲ್ಲಿ ನ್ಯಾಯಾಧೀಕರಣದ ನೂತನ ಅಧ್ಯಕ್ಷ ಬಿ.ಎಸ್.ಚೌಹಾಣ್ ಅವರ ನೇತೃತ್ವದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಕೇಂದ್ರ ಸರ್ಕಾರಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಯಿತು. [ಕಾವೇರಿ ವಿವಾದದ ವಿಚಾರಣೆ]

ವಿಚಾರಣೆ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ ಕಾವೇರಿ ನದಿ ನೀರು ಹಂಚಿಕೆ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಆದ್ದರಿಂದ ಕಾವೇರಿ ನ್ಯಾಯಾಧೀಕರಣ 2007ರ ಫೆ.5ರಂದು ನೀಡಿದ್ದ ಅಂತಿಮ ಐ ತೀರ್ಪಿನ ಬಗ್ಗೆ ವಿಚಾರಣೆ ನಡೆಸಬಾರದು ಎಂದು ಮನವಿ ಮಾಡಿತು.
ಕರ್ನಾಟಕದ ವಾದವನ್ನು ಪರಿಗಣಿಸಿದ ನ್ಯಾಯಾಧೀಕರಣ ಈ ಬಗ್ಗೆ ವಿಚಾರಣೆ ನಡೆಸಬಹುದೆ? ಎಂಬ ಬಗ್ಗೆ ಸುಪ್ರೀಂಕೋರ್ಟ್ ನಿಂದ ಸೂಕ್ತ ನಿರ್ದೇಶನವನ್ನು ಪಡೆಯುವಂತೆ ತಮಿಳುನಾಡು ರಾಜ್ಯಕ್ಕೆ ಸೂಚನೆ ನೀಡಿತು. [ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಇಲ್ಲ]
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಸುಧೀರ್ಘ ವಿಚಾರಣೆ ನಡೆಸಿದ್ದ ಕಾವೇರಿ ನ್ಯಾಯಾಧೀಕರಣ 2007ರ ಫೆ.5ರಂದು ತನ್ನ ಅಂತಿಮ ಐ ತೀರ್ಪು ಪ್ರಕಟಿಸಿತ್ತು. ತೀರ್ಪಿನಲ್ಲಿ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರು ಇದೆ ಎಂದು ಹೇಳಿದ್ದ ನ್ಯಾಯಾಧೀಕರಣ, ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30 ಹಾಗೂ ಪುದುಚೇರಿಗೆ 7 ಟಿಎಂಸಿ ನೀರನ್ನು ಹಂಚಿಕೆ ಮಾಡಿತ್ತು.
ಇದನ್ನು ಪ್ರಶ್ನಿಸಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕಾವೇರಿ ನ್ಯಾಯಾಧೀಕರಣ ಇಂದು ನಡೆಸಿತು. ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿರುವುದರಿಂದ ಯಾವುದೇ ಆದೇಶ ನೀಡಲು ನಿರಾಕರಿಸಿತು.












Click it and Unblock the Notifications