ಕಾವೇರಿ ವಿವಾದ : ಸಿದ್ದರಾಮಯ್ಯ ರೆಡಿಯೋ ಸಂದೇಶ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 08 : ಕಾವೇರಿ ನದಿ ನೀರು ಹಂಚಿಕೆ ವಿವಾದದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ತಮಿಳುನಾಡಿಗೆ ನೀರು ಬಿಡುವ ಕುರಿತಂತೆ ಬುಧವಾರ ಆಕಾಶವಾಣಿಯಲ್ಲಿ ಸಿದ್ದರಾಮಯ್ಯ ಅವರು ಸಂದೇಶ ನೀಡಿದ್ದಾರೆ.

ಕಾವೇರಿಯ ತವರೂರು ಕರ್ನಾಟಕ. ತಲಕಾವೇರಿಯಲ್ಲಿ ಹುಟ್ಟಿ ಮುಂದಕ್ಕೆ ಹರಿಯುವ ಕಾವೇರಿ ಜತೆ ನಮಗೆ ಕರುಳುಬಳ್ಳಿಯ ಸಂಬಂಧ ಇದೆ. ನಮ್ಮ ರೈತರ ಪಾಲಿನ ಜೀವನದಿ ಇದು. ನದಿ ಉಕ್ಕಿ ಹರಿದಾಗ ಸಂಭ್ರಮಿಸುವ ನಮ್ಮ ರೈತರು ಸಮುದಾಯ ಬತ್ತಿಹೋದಾಗ ಸಂಕಟ ಪಡುತ್ತಾರೆ. ಮಳೆಯ ಜೂಜಾಟಕ್ಕೆ ಸಿಕ್ಕಿ ನಮ್ಮ ರೈತಬಂಧುಗಳು ಆಗಾಗ ಇಂತಹ ಸಂಕಷ್ಟಕ್ಕೆ ಸಿಲುಕುತ್ತಲೇ ಬಂದಿದ್ದಾರೆ. ಈ ವರ್ಷ ಅಂತಹದ್ದೊಂದು ಭೀಕರವಾದ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವಿದ್ದೇವೆ.[ಚಿತ್ರಗಳು : ಮಂಡ್ಯದಲ್ಲಿ ಕಾವೇರಿ ಹೋರಾಟ]

ಈ ವರ್ಷದ ಜೂನ್ ತಿಂಗಳಿನಿಂದ ಆಗಸ್ಟ್ ಅಂತ್ಯದ ವರೆಗಿನ ಅವಧಿಯಲ್ಲಿ ಕಾವೇರಿ ಜಲಾನಯನ ಪ್ರದೇಶ ಮಳೆಯ ತೀವ್ರ ಅಭಾವಕ್ಕೆ ತುತ್ತಾಗಿದೆ. ನಮ್ಮ ನಾಲ್ಕು ಜಲಾಶಯಗಳಾದ ಕೃಷ್ಣರಾಜ ಸಾಗರ, ಹಾರಂಗಿ, ಹೇಮವಾತಿ ಮತ್ತು ಕಬಿನಿಗೆ ಆಗಸ್ಟ್ ಅಂತ್ಯದ ವರೆಗೆ ಸಾಮಾನ್ಯ ವರ್ಷದಲ್ಲಿ 215.70 ಟಿಎಂಸಿ ನೀರು ಹರಿದುಬರಬೇಕಾಗಿತ್ತು. ಆದರೆ ಮಳೆಯ ಅಭಾವದಿಂದಾಗಿ ಈ ವರ್ಷ ಹರಿದು ಬಂದಿರುವ ನೀರು ಕೇವಲ 114.66 ಟಿಎಂಸಿ ಮಾತ್ರ.

siddaramaiah

ಕೃಷಿ ಚಟುವಟಿಕೆಗಾಗಿ 47.71 ಟಿಎಂಸಿ, ಕುಡಿಯುವ ನೀರು ಪೂರೈಕೆಗಾಗಿ 28.08 ಟಿಎಂಸಿ ಮತ್ತು ಕೆರೆ ತುಂಬಿಸುವುದಕ್ಕಾಗಿ 11.58 ಹೀಗೆ ಒಟ್ಟು 87.37 ಟಿಎಂಸಿ ನಮಗೆ ಬೇಕಾಗಿದೆ. ನಮ್ಮ ನಾಲ್ಕು ಜಲಾಶಯಗಳಲ್ಲಿ ಲಭ್ಯ ಇರುವ ನೀರಿನ ಸಂಗ್ರಹ 58.78 ಟಿಎಂಸಿ ಮಾತ್ರ.[ಕರ್ನಾಟಕದ ಜಲಾಶಯಗಳಲ್ಲಿ ನೀರು ಸಂಗ್ರಹ ಎಷ್ಟಿದೆ?]

ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನೀರು ಬಿಡುವುದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಂದಿನ 10 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 15,000 ಕ್ಯುಸೆಕ್ ನೀರು ಹರಿಸುವಂತೆ ಆದೇಶ ನೀಡಿದೆ. ನಮಗೆ ಕುಡಿಯುವ ನೀರಿಗೂ ತತ್ವಾರ ಇರುವಂತಹ ಸ್ಥಿತಿಯಲ್ಲಿ ತಮಿಳುನಾಡಿನ ಸಾಂಬಾ ಬೆಳೆಗೆ ನೀರು ಹರಿಸುವಂತೆ ಆದೇಶಿಸಿರುವುದು ನಮಗೆ ಆಘಾತವನ್ನುಂಟುಮಾಡಿದೆ.[ಕಾವೇರಿ ವಿವಾದ : ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ವಿವರಗಳು]

ಈ ರೀತಿಯ ಇಕ್ಕಟ್ಟಿನ ಪರಿಸ್ಥಿತಿಯನ್ನು ಕರ್ನಾಟಕ ಎದುರಿಸಿರುವುದು ಇದೇ ಮೊದಲ ಬಾರಿಯೇನಲ್ಲ. 2012-13ರ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ಇದೇ ರೀತಿಯ ಪರಿಸ್ಥಿತಿ ಉದ್ಭವವಾಗಿತ್ತು. ಆಗಲೂ ತಮಿಳುನಾಡಿನ ಮೊರೆಯನ್ನು ಆಲಿಸಿದ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 12 ರಿಂದ 20ರ ವರೆಗೆ 9 ದಿನಗಳ ಕಾಲ ಪ್ರತಿದಿನ 10,000 ಕ್ಯುಸೆಕ್ಸ್ ನಂತೆ ಕಾವೇರಿ ನೀರನ್ನು ಹರಿಸುವಂತೆ ಆದೇಶ ನೀಡಿತ್ತು. ಆಗ ಆಡಳಿತ ನಡೆಸುತ್ತಿದ್ದ ಸರ್ಕಾರ ನ್ಯಾಯಾಲಯದ ಆದೇಶವನ್ನು ಒಪ್ಪಿಕೊಂಡು ಅಷ್ಟು ಪ್ರಮಾಣದ ನೀರನ್ನು ತಮಿಳುನಾಡಿಗೆ ಹರಿಸಿತ್ತು ಎನ್ನುವುದನ್ನು ವಿನಮ್ರತೆಯಿಂದ ವಿರೋಧಪಕ್ಷಗಳ ನಾಯಕರಿಗೆ ನೆನಪಿಸಬಯಸುತ್ತೇನೆ.

ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭಾಗವಾಗಿರುವ ನಾವು ನ್ಯಾಯಾಲಯದ ಆದೇಶಕ್ಕೆ ತಲೆಬಾಗಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಇದ್ದೇವೆ. ಆದೇಶವನ್ನು ಪಾಲಿಸದೆ ಇದ್ದರೆ ನ್ಯಾಯಾಂಗದ ನಿಂದನೆಯ ಆರೋಪವನ್ನು ಎದುರಿಸಬೇಕಾಗುತ್ತದೆ. ಅಂತಹ ದುಸ್ಸಾಹಸಕ್ಕೆ ಇಳಿಯುವುದು ಜಾಣತನದ ನಡೆಯೂ ಅಲ್ಲ. ಈ ಹಿನ್ನೆಲೆಯಲ್ಲಿ ಸಂಭವನೀಯ ಪರಿಸ್ಥಿತಿಯ ಸಾಧಕ-ಬಾಧಕಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಸುಪ್ರೀಂಕೋರ್ಟ್ ಆದೇಶವನ್ನು ಭಾರವಾದ ಮನಸ್ಸಿನಿಂದ ಪಾಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಆದರೆ ಇದರಿಂದಾಗಿ ಕಾವೇರಿ ಕಣಿವೆಯ ರೈತರು ಆತಂಕಕ್ಕೀಡಾಗುವ ಅವಶ್ಯಕತೆ ಇಲ್ಲ. ನ್ಯಾಯಾಂಗದ ಹೋರಾಟದಲ್ಲಿ ಯಾವುದೇ ರೀತಿಯ ರಾಜಿಮಾಡಿಕೊಳ್ಳದೆ ರಾಜ್ಯದ ಹಿತಾಸಕ್ತಿಯ ರಕ್ಷಣೆಗಾಗಿ ನಮ್ಮೆಲ್ಲ ಶಕ್ತಿ-ಯುಕ್ತಿಯನ್ನು ಬಳಸಿಕೊಳ್ಳಲಾಗುವುದು. ನಾಲ್ಕು ದಿನಗಳೊಳಗೆ ಮೇಲುಸ್ತುವಾರಿ ಸಮಿತಿ ಮುಂದೆ ಹೋಗುವಂತೆ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ನಾವು ತಡಮಾಡದೆ ಮೇಲುಸ್ತುವಾರಿ ಸಮಿತಿ ಮುಂದೆ ಹಾಜರಾಗಿ ರಾಜ್ಯದ ಸಂಕಷ್ಟದ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತೇವೆ.

ಇದರ ಜತೆಗೆ ಸುಪ್ರೀಂ ಕೋರ್ಟ್ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ಅರ್ಜಿಯನ್ನು ಕೂಡಾ ಸಲ್ಲಿಸಲಾಗುವುದು. ಸುಪ್ರೀಂಕೋರ್ಟ್ ಆದೇಶಕ್ಕೆ ರಾಜ್ಯದಲ್ಲಿ ವ್ಯಕ್ತವಾದ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕೂಡಾ ಗಮನಿಸಿರಬಹುದು ಇದರ ಜತೆಗೆ ರಾಜ್ಯದ ಜನರು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತದೆ ಎಂಬ ಭರವಸೆ ನನಗಿದೆ.

ಸಾರ್ವಜನಿಕ ಆಸ್ತಿಗೆ ಹಾನಿಮಾಡುವ ಇಲ್ಲವೇ ಶಾಂತಿ-ಸುವ್ಯವಸ್ಥೆಯನ್ನು ಕದಡುವ ಅತಿರೇಕಕ್ಕೆ ಹೋಗಬಾರದು. ಸಂಯಮದಿಂದ ವರ್ತಿಸಿ ರಾಜ್ಯದಲ್ಲಿ ಶಾಂತಿ ಕಾಪಾಡಲು ನೆರವಾಗಬೇಕು. ಸರ್ಕಾರದ ಮೇಲೆ, ನನ್ನ ಮೇಲೆ ಭರವಸೆ ಇಡಿ. ರೈತನ ಮಗನಾದ ನಾನು ರೈತರಿಗೆ ಅನ್ಯಾಯವಾಗಲು ಅವಕಾಶ ಖಂಡಿತ ನೀಡುವುದಿಲ್ಲ.[ಪೂರ್ಣ ಸಂದೇಶ ಓದಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah addressed the state on Cauvery dispute in radio interaction. Here are the message of CM Siddaramaiah.
Please Wait while comments are loading...