ಮಂಗಳೂರು: ಚಾಕೊಲೇಟ್ ಆಮಿಷವೊಡ್ಡಿ ಚರ್ಚ್‌ನಲ್ಲಿ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ, ಫಾದರ್ ವಿರುದ್ಧ POCSO ಕೇಸ್ ದಾಖಲು
ಪ್ರಾರ್ಥನೆಗಾಗಿ ಚರ್ಚ್‌ಗೆ ಬರುತ್ತಿದ್ದ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದಡಿ ಮಂಗಳೂರಿನ ಕ್ಯಾಥೋಲಿಕ್ ಪ್ರೀಸ್ಟ್ (ಧರ್ಮಗುರು) ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಹೌದು, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರೀಸ್ಟ್ ವಿರುದ್ಧ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಈ ಪೋಕ್ಸೊ ಪ್ರಕರಣವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಚಾಕೊಲೇಟ್ ಆಮಿಷವೊಡ್ಡಿ ಅಪ್ರಾಪ್ತನ ಮೇಲೆ ಲೈಂಗಿಕ ಕಿರುಕುಳ
ಬಾಲಕನ ಪೋಷಕರು ನೀಡಿರುವ ದೂರಿನ ಪ್ರಕಾರ, ಚರ್ಚ್‌ಗೆ ಬರುತ್ತಿದ್ದ ಬಾಲಕನ ಬಳಿ ಪ್ರೀಸ್ಟ್ ಅತ್ಯಂತ ಸಲುಗೆಯಿಂದ ಮಾತನಾಡಲು ಮುಂದಾಗುತ್ತಿದ್ದರು. ಆತನಿಗೆ ಚಾಕೊಲೇಟ್ ನೀಡಿ, ಆತನ ದೈಹಿಕ ರೂಪವನ್ನ ಹೊಗಳಿ ಆಕರ್ಷಿಸಲು ಪ್ರಯತ್ನಿಸುತ್ತಿದ್ದರು.
ಇದಾದ ಬಳಿಕ ಬಾಲಕನನ್ನ ಚರ್ಚ್‌ನ ಸ್ಯಾಕ್ರಿಸ್ಟಿ ಅಂದರೆ ಪೂಜಾ ಸಾಮಗ್ರಿಗಳನ್ನ ಇಡುವ ಕೊಠಡಿ ಬಳಿಯಿರುವ ಮತ್ತೊಂದು ಕೊಠಡಿಗೆ ಕರೆದೊಯ್ದು ಅನುಚಿತವಾಗಿ ಸ್ಪರ್ಶಿಸಿ, ಅಪ್ರಾಪ್ತನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
ಕೇವಲ ಒಂದು ದಿನ ಮಾತ್ರವಲ್ಲದೆ, ಬಾಲಕ ಚರ್ಚ್‌ಗೆ ಭೇಟಿ ನೀಡಿದ ಬಹುತೇಕ ಸಂದರ್ಭಗಳಲ್ಲಿ ಈ ಕೃತ್ಯ ಮರುಕಳಿಸಿದೆ ಎನ್ನಲಾಗಿದೆ. ಆಗಸ್ಟ್ 14ರಂದು ಸಂಜೆ 6.30ರ ಸುಮಾರಿಗೆ ಚರ್ಚ್‌ನ ರಿಸೆಪ್ಷನ್ ರೂಂಗೆ ಬಾಲಕನನ್ನ ಕರೆದು ಅಲ್ಲಿಯೂ ಲೈಂಗಿಕವಾಗಿ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸ್ನೇಹಿತರಿಗೂ ಇದೇ ಕ್ಯಾಥೋಲಿಕ್ ಪ್ರೀಸ್ಟ್‌ನಿಂದ ಕಹಿ ಅನುಭವ
ಈ ದೌರ್ಜನ್ಯದಿಂದ ನೊಂದ ಬಾಲಕ, ಆರಂಭದಲ್ಲಿ ಭಯದಿಂದ ಈ ವಿಚಾರವನ್ನ ತನ್ನ ಪೋಷಕರಿಗೆ ತಿಳಿಸಲು ಹಿಂದೇಟು ಹಾಕಿದ್ದ. ಆದರೆ, ಈ ವಿಚಾರವನ್ನ ತನ್ನ ಕೆಲವು ಸ್ನೇಹಿತರ ಬಳಿ ಹಂಚಿಕೊಂಡಾಗ ಮತ್ತೊಂದು ಆಘಾತಕಾರಿ ಸತ್ಯ ಹೊರಬಿದ್ದಿದೆ.
ಆತನ ಸ್ನೇಹಿತರು ಸಹ ಇದೇ ಪ್ರೀಸ್ಟ್‌ನಿಂದ ಇದೇ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಕ್ಯಾಥೋಲಿಕ್ ಪ್ರೀಸ್ಟ್ ಪೋಕ್ಸೊ ಪ್ರಕರಣವು ಕೇವಲ ಒಬ್ಬ ಬಾಲಕನಿಗೆ ಸೀಮಿತವಾಗಿರದೆ, ಹಲವು ಮಕ್ಕಳ ಮೇಲೆ ಪ್ರಭಾವ ಬೀರಿದೆ ಎಂಬುದು ಆತಂಕಕಾರಿ ವಿಚಾರ.
ಕೊನೆಗೂ ಧೈರ್ಯ ತಂದುಕೊಂಡ ಬಾಲಕ, ತನ್ನ ಪೋಷಕರಿಗೆ ನಡೆದ ಎಲ್ಲಾ ಘಟನೆಗಳನ್ನ ಎಳೆಎಳೆಯಾಗಿ ವಿವರಿಸಿದ್ದಾನೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್
ಬಾಲಕನಿಂದ ವಿಷಯ ತಿಳಿದ ಪೋಷಕರು, ತಕ್ಷಣವೇ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅವರನ್ನ ಭೇಟಿಯಾಗಿ ಪ್ರೀಸ್ಟ್ ವಿರುದ್ಧ ದೂರು ನೀಡಿದರು. ಜೊತೆಗೆ, ತಮಗೆ ನ್ಯಾಯ ಒದಗಿಸಿಕೊಡುವಂತೆ ಕೋರಿ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ನಿರ್ದೇಶನಾಲಯದ ಮೊರೆ ಹೋದರು.
ಸಂತ್ರಸ್ತ ಬಾಲಕರು ಹಾಗೂ ಅವರ ಪೋಷಕರು ಸಲ್ಲಿಸಿದ ದೂರಿನ ಆಧಾರದ ಮೇಲೆ, ಆಗಸ್ಟ್ 31ರಂದು ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಈ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ನಿರ್ದೇಶನಾಲಯ ಆದೇಶ ಹೊರಡಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಸಂತ್ರಸ್ತನ ಪೋಷಕರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಪೋಷಕರು ನೀಡಿದ ದೂರಿನ ಆಧಾರದ ಮೇಲೆ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಆರೋಪಿ ಪ್ರೀಸ್ಟ್ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 8 ಮತ್ತು 10, ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 75 (2) ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸದ್ಯ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಚರ್ಚ್ ಆವರಣದಲ್ಲಿಯೇ ಇಂತಹ ಹೇಯ ಕೃತ್ಯ ನಡೆದಿರುವುದು ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.


Click it and Unblock the Notifications
