160,00,00,000 ಕೋಟಿ ರೂ. ಹಣ ವ್ಯರ್ಥವನ್ನು ಒಪ್ಪಿಕೊಳ್ಳಲಿದೆಯೇ ರಾಜ್ಯ ಸರ್ಕಾರ ?!
ಕರ್ನಾಟಕದಲ್ಲಿ ಜಾತಿ ಗಣತಿ ವಿಷಯವು ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಕರ್ನಾಟಕದಲ್ಲಿ ಜಾತಿ ಗಣತಿ ವಿಚಾರವು ಚರ್ಚೆಯ ಮುನ್ನೆಲೆಗೆ ಬಂದಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ. ಇನ್ನು ಜಾತಿ ಗಣತಿ ವಿಚಾರವು ಪ್ರಾರಂಭವಾಗಿದ್ದೇ ಬಿಹಾರದಿಂದ ಎಂದು ಹೇಳಬಹುದು. ಬಿಹಾರ ವಿಧಾನಸಭೆ ಚುನಾವಣೆ ಇದೇ ವರ್ಷಾಂತ್ಯಕ್ಕೆ ನಡೆಯಲಿದೆ. ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ & ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದೇನು ಎನ್ನುವ ಮಾಹಿತಿ ಇಲ್ಲಿದೆ.
ರಾಜ್ಯ ಸರ್ಕಾರದ ನಡೆಯನ್ನು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ವಿರೋಧಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಕರ್ನಾಟಕ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯದಿಂದ ಬಿಕ್ಕಟ್ಟಿಗೆ ಸಿಲುಕಿದಾಗಲೆಲ್ಲಾ, ಜಾತಿ ಜನಗಣತಿಯನ್ನು ಪ್ರಸ್ತಾಪಿಸುತ್ತದೆ ಅದು ಸಾಮಾಜಿಕ ಕಾಳಜಿಯಿಂದಲ್ಲ, ಬದಲಾಗಿ ನಾಡಿನ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸದಾ ಸಂಚು ರೂಪಿಸುತ್ತಿರುತ್ತದೆ ಎಂದಿದ್ದಾರೆ.

ಬೆಂಗಳೂರಿನ ದುರಂತದ ಕಾಲ್ತುಳಿತದ 11 ಅಮಾಯಕರ ಸಾವುಗಳಿಗೆ ರಾಜ್ಯವಷ್ಟೇ ಅಲ್ಲ ದೇಶವೇ ಮಮ್ಮಲ ಮರುಗುತ್ತಿದೆ. ಆದರೆ ಪ್ರಚಾರದ ಗೀಳಿಗೆ ಇಳಿದು ದೇಶದ ಜನಸಾಮಾನ್ಯರ ಆಕ್ರೋಶ ಎದುರಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಜನಗಣತಿಯನ್ನು ಪುನಃ ಪ್ರಸ್ತಾಪಿಸುವ ಮೂಲಕ ತನ್ನ ಹುಳುಕು ಮುಚ್ಚಿಕೊಳ್ಳಲು ಹೊರಟಿರುವುದು ನಿಜಕ್ಕೂ ದುರ್ದೈವದ ಸಂಗತಿ.
ಮರು ಜಾತಿಗಣತಿ ಮಾಡಲು ಹೊರಟಿರುವ ರಾಜ್ಯ ಸರ್ಕಾರ ಈಗಾಗಲೇ ಜಾತಿಗಣತಿಗಾಗಿ ಖರ್ಚು ಮಾಡಿರುವ ₹160 ಕೋಟಿ ಗೂ ಹೆಚ್ಚು ಹಣ ಸಂಪೂರ್ಣ ವ್ಯರ್ಥ ಎಂದು ಒಪ್ಪಿಕೊಳ್ಳುತ್ತಿದ್ದಾರೆಯೇ? ಉಪಮುಖ್ಯಮಂತ್ರಿಗಳ ಹೇಳಿಕೆಯಿಂದ ಈ ಸಂಗತಿ ಬಹಿರಂಗವಾದಂತಿದೆ. ಕಾಂಗ್ರೆಸ್ ಸರ್ಕಾರದ ಈ ಕುಟಿಲ ಬುದ್ದಿ, ಬೇಜವಾಬ್ದಾರಿತನ ಹಾಗೂ ಜನ ಪೀಡಕ ನಿಲುವುಗಳಿಗೆ ಜನರು ತಕ್ಕಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದೇನು ?
ಜಾತಿ ಜನಗಣತಿ ದತ್ತಾಂಶವು ಸುಮಾರು 10 ವರ್ಷ ಹಳೆಯದಾಗಿರುವುದರಿಂದ ಪ್ರತಿಯೊಂದು ವರ್ಗದ ಪ್ರಮುಖರಿಗೂ ಈ ಬಗ್ಗೆ ಮಾತನಾಡಲು ಅವಕಾಶವನ್ನು ನೀಡಿ ಸಾಮಾಜಿಕ ನ್ಯಾಯ ಒದಗಿಸುವಂತೆ ವರಿಷ್ಠರು ಸಲಹೆ ನೀಡಿದ್ದಾರೆ. ಹೀಗಾಗಿ ಯಾವ ವರ್ಗದವರಿಂದಲೂ ಸಣ್ಣ ಅಪಸ್ವರ ಬಾರದಂತೆ, ಯಾರಿಗೂ ಅನ್ಯಾಯ ಆಗದಂತೆ ಅವಕಾಶವನ್ನು ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಮತ್ತೊಮ್ಮೆ ಜಾತಿ ಗಣತಿಗೆ ಅವಕಾಶ ನೀಡಲು ಹಾಗೂ ಆನ್‌ಲೈನ್ ಮೂಲಕವೂ ಅವಕಾಶ ಕಲ್ಪಿಸಲು ಒಂದು ದಿನಾಂಕವನ್ನು ನಿರ್ಧರಿಸುತ್ತೇವೆ. ಈ ಬಾರಿ ಮತ್ತೊಂದು ಸುವರ್ಣಾವಕಾಶ ನೀಡುತ್ತಿದ್ದೇವೆ, ಎಲ್ಲರೂ ಅವರ ಜಾತಿಯ ಗುರುತನ್ನು ನ್ಯಾಯಬದ್ಧವಾಗಿ ಸಮೀಕ್ಷಾ ತಂಡಕ್ಕೆ ನೀಡಬೇಕು. ಗಣತಿ ಎನ್ನುವುದು ಸುದೀರ್ಘ ಪ್ರಕ್ರಿಯೆ. ಯಾವಾಗಿನಿಂದ ಗಣತಿ ಆರಂಭವಾಗಲಿದೆ, ಹೇಗೆ ನಡೆಯಲಿದೆ ಎಂಬ ಬಗ್ಗೆ ಶೀಘ್ರವೇ ಮಾಹಿತಿ ಒದಗಿಸುತ್ತೇವೆ ಎಂದಿದ್ದಾರೆ.
ಇನ್ನು, ಬೆಂಗಳೂರಿನಲ್ಲಿ ಆರ್‌ಸಿಬಿ ಸಂಭ್ರಮದ ವೇಳೆ ನಡೆದ ದುರ್ಘಟನೆ ಸೇರಿದಂತೆ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ನಾನು ಮತ್ತು ಮುಖ್ಯಮಂತ್ರಿಗಳು ಸೇರಿ ವರಿಷ್ಠರೊಂದಿಗೆ ಚರ್ಚಿಸಿದ್ದೇವೆ. ಘಟನೆ ಬಳಿಕ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದೇವೆ ಎಂದೂ ತಿಳಿಸಿದ್ದಾರೆ.












Click it and Unblock the Notifications