Caste Census: ಕೇಂದ್ರ ಸರ್ಕಾರದ ಜಾತಿಗಣತಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಈ ವಿಷಯಕ್ಕೆ ಆಕ್ಷೇಪ: ಮಹತ್ವದ ಸಲಹೆ

ಕೇಂದ್ರ ಸರ್ಕಾರದ ಜಾತಿಗಣತಿಯ ವಿಚಾರಕ್ಕೆ ಕರ್ನಾಟಕ ಸರ್ಕಾರವು ಆಕ್ಷೇಪ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸಲು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದೆಯಾದರೂ, ನಮ್ಮ ಮುಂದಿರುವ ನಿಜವಾದ ಸವಾಲು ಈ ಜಾತಿ ಗಣತಿ ಹಳಿತಪ್ಪದಂತೆ ನಿಗಾ ವಹಿಸುವುದಾಗಿದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ.

ಜಾತಿ ಗಣತಿ ತಡೆಗೆ ರಾಜಕೀಯವಾಗಿ ಶತಪ್ರಯತ್ನ ನಡೆಸಿ ಸೋತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ, ಇದೀಗ ಜಾತಿ ಗಣತಿ ಕಾರ್ಯವಿಧಾನದಲ್ಲೇ ತಪ್ಪುಗಳನ್ನು ಸೇರಿಸುವ ಮೂಲಕ ನಿಖರ ದತ್ತಾಂಶ ಸಿಗದಂತೆ ಮಾಡುವ ಸಂಚು ಹೂಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹಲವು ವರ್ಷಗಳಿಂದ ಜಾತಿ ಗಣತಿಯನ್ನು ವಿರೋಧಿಸುತ್ತ ಬಂದಿದೆ. 2021ರಲ್ಲಿ ಜಾತಿ ಆಧಾರಿತ ಜನಸಂಖ್ಯಾ ಗಣತಿಯನ್ನು ನಡೆಸದಿರುವಂತೆ ನಿರ್ಣಯ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ತಿಳಿಸಿತ್ತು. ಆದರೆ ಇದನ್ನು ಎಂದಿಗೂ ಕಾಂಗ್ರೆಸ್‌ ಒಪ್ಪಿರಲಿಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ ಅವರು ನಿರಂತರವಾಗಿ ಜಾತಿ ಗಣತಿ ನಡೆಸುವಂತೆ ಒತ್ತಾಯಿಸಿದ್ದಾರೆ. ಜಾತಿ ಗಣತಿಯಿಂದ ಸಾಮಾಜಿಕ ನ್ಯಾಯ, ಪ್ರಾತಿನಿಧ್ಯ ಮತ್ತು ಅವಕಾಶಗಳ ಸಮಾನ ಹಂಚಿಕೆ ಸಾಧ್ಯ ಎಂಬುದನ್ನು ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಅಂತಿಮವಾಗಿ 2027ರ ಜನಗಣತಿ ಜೊತೆಗೆ ಜಾತಿ ಗಣತಿಯನ್ನು ನಡೆಸುವುದಾಗಿ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

Caste Census Karnataka Congress Government Objects to Centre s Methodology Offers Key Suggestion

ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸುವ ನಿರ್ಣಯವನ್ನು ತೆಗೆದುಕೊಂಡಾಗ ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದೆವು. ಜಾತಿ ಗಣತಿ ಮಾಡಲು ಒಪ್ಪಿಕೊಂಡಿದ್ದೇನೋ ಸರಿಯೇ, ಆದರೆ ಜಾತಿ ಗಣತಿಯನ್ನು ಪ್ರಾಮಾಣಿಕವಾಗಿ ಮಾಡುತ್ತದೆಯೇ? ಸೂಕ್ತ ಮತ್ತು ಉಪಯುಕ್ತ ದತ್ತಾಂಶವನ್ನು ನೀಡುತ್ತದೆಯೇ? ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

ಜಾತಿ ಗಣತಿಗೆ ಪ್ರಸ್ತಾಪಿಸಲಾಗಿರುವ ಕಾರ್ಯವಿಧಾನದ ಬಗ್ಗೆ ನನಗೆ ಆತಂಕವಿದೆ. ಒಬಿಸಿ ಮತ್ತು ಇತರೆ ಸಮುದಾಯಗಳ ಜಾತಿ ಗುರುತಿಸುವಿಕೆಗೆ ಸರಿಯಾದ ವ್ಯವಸ್ಥೆಯಿಲ್ಲದಿರುವುದು ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಒಂದೇ ಜಾತಿಯನ್ನು ವಿವಿಧ ಅಕ್ಷರಗಳಿಂದ, ಉಪಜಾತಿ ಹೆಸರುಗಳಿಂದ, ಪ್ರಾದೇಶಿಕ ಮತ್ತು ಸ್ಥಳೀಯ ಹೆಸರುಗಳಿಂದ ಗುರುತಿಸುವ ಸಂಭವ ಹೆಚ್ಚಿರುವುದರ ಪರಿಣಾಮ ಹೆಚ್ಚಿನ ಸಂಖ್ಯೆಯ ಜಾತಿಗಳು ಹುಟ್ಟಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಒಂದೇ ಜಾತಿ ಸಾವಿರಾರು ಪ್ರತ್ಯೇಕ ಜಾತಿಯಾಗಿ ರೂಪುಗೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಒಂದೇ ಜಾತಿಯನ್ನು ವಿವಿಧ ಹೆಸರುಗಳಿಂದ ಗುರುತಿಸಿದಾಗ ಆ ಜಾತಿಯ ನಿಜವಾದ ಜನಸಂಖ್ಯೆಯನ್ನು ಪತ್ತೆ ಮಾಡಲು ಹೇಗೆ ಸಾಧ್ಯ?

ದೇಶದ ಸಾಮಾಜಿಕ ರಚನೆ ಕುರಿತು ನಿಖರ, ವಿಶ್ವಾಸಾರ್ಹ ಮತ್ತು ವೈಜ್ಞಾನಿಕವಾಗಿ ಬಳಸಬಹುದಾದ ದತ್ತಾಂಶ ಸಿದ್ಧಗೊಂಡರಷ್ಟೇ ಜಾತಿ ಗಣತಿಗೆ ಅರ್ಥ ಸಿಗಲಿದೆ. ಜನಗಣತಿಯ ಅರ್ಜಿಯಲ್ಲಿ ಯಾವ ಜಾತಿ ಎಂಬ ಪ್ರಶ್ನೆಯನ್ನು ಸೇರಿಸುವುದರಿಂದ ಯಾವುದೇ ಉಪಯೋಗವಾಗುವುದಿಲ್ಲ. ಇಲ್ಲಿ ಕಾರ್ಯವಿಧಾನವೇ ಜಾತಿಗಳನ್ನು ವಿಭಜಿಸುವಂತಿರುವಾಗ ಮತ್ತು ಅವುಗಳನ್ನು ಕ್ರೋಢೀಕರಿಸುವುದು ಕಷ್ಟದಾಯಕವಾಗಿರುವಾಗ ಜಾತಿಗಣತಿಯ ಉದ್ದೇಶವೇ ವಿಫಲವಾಗುತ್ತದೆ. ದೇಶದ ಒಬಿಸಿಗಳ ಗಣತಿಯನ್ನು ಸರಿಯಾಗಿ ನಡೆಸಲು ಯಾಕೆ ಸಾಧ್ಯವಿಲ್ಲ ಎಂಬುದು ಪ್ರಶ್ನೆಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಗಣತಿಗೆ ಸರಿಯಾದ ವ್ಯವಸ್ಥೆಯಿರುವಾಗ ಒಬಿಸಿ ಗಣತಿಗೆ ವೈಜ್ಞಾನಿಕ ರೂಪುರೇಷೆಯನ್ನು ಸಿದ್ಧಪಡಿಸಲು ಏಕೆ ಸಾಧ್ಯವಾಗಿಲ್ಲ ಎಂದು ಡಾ.ಜಿ ಪರಮೇಶ್ವರ್ ಅವರು ಪ್ರಶ್ನೆ ಮಾಡಿದ್ದಾರೆ.

ರಾಜ್ಯ ಸರ್ಕಾರಗಳು ಈಗಾಗಲೇ ಹಿಂದುಳಿದ ವರ್ಗಗಳ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿ ಹೆಸರುಗಳ ಪಟ್ಟಿಯನ್ನು ಹೊಂದಿವೆ. ಜಾತಿಗಳನ್ನು ಗುರುತಿಸುವಲ್ಲಿ ಹಾಗೂ ಮೀಸಲಾತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ರಾಜ್ಯಗಳಿಗೆ ದಶಕಗಳ ಅನುಭವವಿದೆ. ಹೀಗಿರುವಾಗ ಕೇಂದ್ರ ಸರ್ಕಾರವು ಈ ಪಟ್ಟಿಯನ್ನು ಏಕೆ ಪರಿಗಣಿಸುತ್ತಿಲ್ಲ? ಈ ಪಟ್ಟಿಯ ಮೂಲಕ ಸರಿಯಾದ ಜಾತಿ ಸೂಚಕಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ. ಇದರಿಂದ ನಿರ್ಧಿಷ್ಟ ಜಾತಿಯ ಪರ್ಯಾಯ ಹೆಸರು, ಉಪಜಾತಿ ಮತ್ತು ಪ್ರಾದೇಶಿಕ ಗುರುತಿಸುವಿಕೆಗಳನ್ನು ದಾಖಲಿಸಲು ಸರಿಯಾದ ವ್ಯವಸ್ಥೆಯನ್ನು ರೂಪಿಸಲು ಸಾಧ್ಯ. ಇದು ತಾಂತ್ರಿಕವಾಗಿ ಸಾಧ್ಯವಾಗದ ವಿಷಯವೇನಲ್ಲ. ಇದಕ್ಕೆ ರಾಜಕೀಯ ಬದ್ಧತೆ ಬೇಕಷ್ಟೆ.

ಪ್ರತಿಯೊಂದು ಜಾತಿಗೆ ಒಂದು ಪ್ರಮಾಣಿತ ಗುರುತು ಅಥವಾ ಸೂಚಕ ಇರಬೇಕು ಎಂಬುದನ್ನು ನಾನು ಬಲವಾಗಿ ಪ್ರತಿಪಾದಿ ಸುತ್ತೇನೆ. ಇದರಿಂದ ಜನರು ತಮ್ಮ ಸ್ಥಳೀಯ ಅಥವಾ ಬದಲಿ ಗುರುತನ್ನು ಪ್ರಾಮಾಣಿಕವಾಗಿ ದಾಖಲಿಸಲು ಸಾಧ್ಯ. ಬಳಿಕ ಈ ವ್ಯತ್ಯಾಸಗಳನ್ನು ವೈಜ್ಞಾನಿಕವಾಗಿ ಕ್ರೋಢೀಕರಿಸಲು ಸಾಧ್ಯವಾಗುತ್ತದೆ. ಇದರಿಂದ ಪ್ರತಿಯೊಂದು ಜಾತಿಯನ್ನು ನಿಖರವಾಗಿ ಗುರುತಿಸಲು ಸಾಧ್ಯ.

ಪ್ರತಿಯೊಂದು ಜಾತಿಯ ಜನಸಂಖ್ಯೆಯನ್ನು ಲೆಕ್ಕ ಹಾಕಲು ಸಾಧ್ಯ. ಈ ದತ್ತಾಂಶದ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯ. ಈ ವಿಚಾರವಾಗಿ ನಮ್ಮ ರಾಜ್ಯಕ್ಕೆ ಅನುಭವವಿದೆ. ಕೇಂದ್ರ ಸರ್ಕಾರವು ರಾಜ್ಯಗಳಿಂದ ಕಲಿಯಬೇಕು. ಕರ್ನಾಟಕವು ಈಗಾಗಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಹೊಂದಿದೆ. ಬಿಹಾರದಲ್ಲಿ ಜಾತಿ ಆಧಾರಿತ ಗಣತಿಯನ್ನು ನಡೆಸಲಾಗಿದೆ. ತೆಲಂಗಾಣದಲ್ಲಿಯೂ ಜಾತಿ ಗಣತಿ ನಡೆಸಲಾಗಿದೆ. ಈ ಅನುಭವಗಳನ್ನು ಕೇಂದ್ರ ಬಳಸಿಕೊಳ್ಳಬೇಕು.

ಜಾತಿ ಗಣತಿ ಕೇವಲ ಅಂಕಿಸಂಖ್ಯೆಗಳ ವಿಚಾರವಲ್ಲ, ಇದು ಸಾಮಾಜಿಕ ನ್ಯಾಯದ ವಿಚಾರವಾಗಿದೆ. ಹಾಗಾಗಿ ಕೇಂದ್ರ ಸರ್ಕಾರವು ಜಾತಿ ಗಣತಿಯನ್ನು ಒಂದು ಆಡಳಿತಾತ್ಮಕ ಕಸರತ್ತು ಎಂದು ಭಾವಿಸದೆ ರಾಜ್ಯ ಸರ್ಕಾರಗಳನ್ನು, ತಜ್ಞರನ್ನು, ರಾಜಕೀಯ ಪಕ್ಷಗಳನ್ನು ಮತ್ತು ಜಾತಿಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಂತರ ಅಂತಿಮ ಕಾರ್ಯವಿಧಾನವನ್ನು ರೂಪಿಸಬೇಕಿದೆ. ಕರ್ನಾಟಕವು ತನ್ನ ಅನುಭವವನ್ನು ಹಂಚಿಕೊಳ್ಳಲು ಮತ್ತು ತಜ್ಞರ ತಂಡವನ್ನು ಕಳುಹಿಸಲು ಸಿದ್ಧವಿದೆ. ರಾಜ್ಯಗಳು ಈಗಾಗಲೇ ಸರಿಪಡಿಸಿಕೊಂಡಿರುವ ತಪ್ಪುಗಳನ್ನೇ ಕೇಂದ್ರ ಸರ್ಕಾರವು ಪುನರಾವರ್ತಿತಗೊಳಿಸಬಾರದು ಎಂಬುದು ನಮ್ಮ ಕಾಳಜಿಯಾಗಿದೆ.

ನನ್ನ ಪ್ರಕಾರ ಜಾತಿ ಗಣತಿ ಎಂಬುದು ಅಂಕಿಸಂಖ್ಯೆಗಳನ್ನು ಸಂಗ್ರಹಿಸುವ ಕಸರತ್ತಲ್ಲ. ಇದು ಸಾಮಾಜಿಕ ನ್ಯಾಯದ ಸಾಧನವಾಗಿದೆ. ದಶಕಗಳಿಂದ ಸರ್ಕಾರಗಳು ಮೀಸಲಾತಿ, ಶಿಕ್ಷಣ, ಉದ್ಯೋಗ, ಕಲ್ಯಾಣ ಕಾರ್ಯಕ್ರಮಗಳು, ರಾಜಕೀಯ ಪ್ರಾತಿನಿಧ್ಯ ಮತ್ತು ಆರ್ಥಿಕ ಅವಕಾಶಗಳಿಗೆ ಸಂಬಂಧಿಸಿದಂತೆ ಸಮಕಾಲೀನ ಮತ್ತು ಸಮಗ್ರ ಜಾತಿಯ ದತ್ತಾಂಶಗಳಿಲ್ಲದೆ ಈ ವರೆಗೆ ನಿರ್ಧಾರಗಳನ್ನು ತೆಗೆದುಕೊಂಡಿವೆ. ಯಾರಿಗೆ ಹೆಚ್ಚು ಅವಕಾಶಗಳು ಸಿಗುತ್ತಿವೆ ಮತ್ತು ಯಾರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಲು ಸರಿಯಾದ ದತ್ತಾಂಶದ ಅಗತ್ಯ ನಮಗಿದೆ.

ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರ ನಿಜವಾದ ಸಂಖ್ಯೆ ಎಷ್ಟಿದೆ ಎಂಬುದನ್ನು ಗುರುತಿಸಬೇಕಿದೆ. ಈ ಮೂಲಕ ಉತ್ತಮ ನೀತಿಗಳನ್ನು ರೂಪಿಸಲು ನಿಖರ ದತ್ತಾಂಶದ ಅಗತ್ಯವಿದೆ. ಶತಮಾನಗಳಿಂದ ಸಮಾನ ಅವಕಾಶಗಳಿಂದ ವಂಚಿತರಾದವರಿಗೆ ಅಭಿವೃದ್ಧಿಯ ಫಲ ತಲುಪಿಸುವುದನ್ನು ದೃಢಪಡಿಸಿಕೊಳ್ಳಲು ನಮಗೆ ಜಾತಿಗಣತಿಯ ದತ್ತಾಂಶ ಬೇಕಿದೆ. ಮುಖ್ಯವಾಗಿ ಇದು ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ಸಮುದಾಯಗಳಿಗೆ ಅಗತ್ಯವಾಗಿದೆ.

ಕೇಂದ್ರ ಸರ್ಕಾರವು ಅಹಿಂದ ಸಮುದಾಯಗಳ ಗಣತಿಯನ್ನು ಸರಿಯಾಗಿ ನಡೆಸದೆ, ಅವರಿಗೆ ಈ ವ್ಯವಸ್ಥೆಯ ಮೇಲೆ ವಿಶ್ವಾಸವಿಡುವಂತೆ ಹೇಳುವುದು ಹಾಸ್ಯಾಸ್ಪದ. ಹಲವು ವರ್ಷಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾತಿ ಗಣತಿಯನ್ನು ವಿರೋಧಿಸುತ್ತಲೇ ಬಂದಿದೆ. 2021ರಲ್ಲಿ ಜಾತಿ ಆಧಾರಿತ ಗಣತಿಯನ್ನು ಸ್ಪಷ್ಟವಾಗಿ ವಿರೋಧಿಸಿದ್ದು ಇದಕ್ಕೆ ಇತ್ತೀಚಿನ ನಿದರ್ಶನ. ಆದರೆ ಕಾಂಗ್ರೆಸ್‌ ನಿರಂತರವಾಗಿ ಜಾತಿಗಣತಿ ಪರವಾಗಿ ಧ್ವನಿಯೆತ್ತಿದೆ. ಶ್ರೀ ರಾಹುಲ್‌ ಗಾಂಧಿ ಅವರು "ಜಿಸ್ಕಿ ಜಿತ್ನಿ ಸಂಖ್ಯಾ ಭಾರಿ, ಉಸ್ಕಿ ಉತ್ನಿ ಭಾಗಿದಾರಿ" (ಜನಸಂಖ್ಯೆಗೆ ತಕ್ಕಷ್ಟು ಪ್ರಾತಿನಿಧ್ಯ) ಎಂಬ ಘೋಷವಾಕ್ಯದೊಂದಿಗೆ ಸಾಮಾಜಿಕ ನ್ಯಾಯದ ಕುರಿತು ರಾಷ್ಟ್ರಾದ್ಯಂತ ಚರ್ಚೆಯನ್ನು ಹುಟ್ಟುಹಾಕಿದರು. ಇದರಿಂದ ಜಾತಿಗಣತಿ ನಡೆಸುವಂತೆ ರಾಷ್ಟ್ರಾದ್ಯಂತ ಕೂಗು ಕೇಳಿಬಂತು. ಕೊನೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜನಾಭಿಪ್ರಾಯಕ್ಕೆ ತಲೆಬಾಗಿ ಜಾತಿಗಣತಿ ನಡೆಸಲು ಒಪ್ಪಿಕೊಂಡಿತು.

ಕೇಂದ್ರ ಸರ್ಕಾರ ತಕ್ಷಣ ಕೈಗೊಳ್ಳಬೇಕಿರುವ ಕ್ರಮಗಳು

● ಜಾತಿಗಣತಿ ಕಾರ್ಯವಿಧಾನವನ್ನು ಸರಿಪಡಿಸಬೇಕು.

● ವೈಜ್ಞಾನಿಕವಾದ ರಾಷ್ಟ್ರೀಯ ಪ್ರಮಾಣಿತ ಜಾತಿ ಪಟ್ಟಿ ಸಿದ್ಧಪಡಿಸಬೇಕು ಮತ್ತು ರಾಜ್ಯಗಳೊಂದಿಗೆ ಸಮಾಲೋಚಿಸಿ ನಿರ್ದಿಷ್ಟ ಜಾತಿ ಸೂಚಕ ಕೋಡಿಂಗ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು.

● ಕೇಂದ್ರ ಮತ್ತು ರಾಜ್ಯಗಳ ಬಳಿಯಿರುವ ಒಬಿಸಿ/ಎಸ್‌ಇಬಿಸಿ ಪಟ್ಟಿಯನ್ನು ಸಮನ್ವಯಗೊಳಿಸುವ ಮೂಲಕ ರಾಜ್ಯ/ಪ್ರಾದೇಶಿಕ ಕೇಂದ್ರಿತ ಜಾತಿಗಳ ಲೆಕ್ಕ ತಪ್ಪಾಗಿ ದಾಖಲಾಗದಂತೆ ಎಚ್ಚರಿಕೆವಹಿಸಬೇಕು.

● ಪರ್ಯಾಯ ಹೆಸರುಗಳು, ಉಪಜಾತಿಗಳು ಮತ್ತು ಪ್ರಾದೇಶಿಕ ಗುರುತುಗಳಿಗೆ ಪ್ರಮಾಣಿತ ಜಾತಿ ಕೋಡ್‌ ರೂಪಿಸುವ ಮೂಲಕ ಗಣತಿ ಕಾರ್ಯವಿಧಾನಕ್ಕೆ ಪಾರದರ್ಶಕತೆ ತರಬೇಕು.

● ಪಟ್ಟಿ ಮಾಡದ ಸಮುದಾಯಗಳಿಗೆ ದಾಖಲೆ ಮಾಡಿಕೊಳ್ಳಲು ಮತ್ತು ನಂತರ ಪರಿಶೀಲಿಸಲು ಕಾರ್ಯವಿಧಾನವನ್ನು ಒದಗಿಸಬೇಕು.

● ರಾಜ್ಯ ಸರ್ಕಾರಗಳು, ರಾಜಕೀಯ ಪಕ್ಷಗಳು, ಸಾಮಾಜಿಕ ನ್ಯಾಯ ತಜ್ಞರು ಮತ್ತು ಸಮುದಾಯಗಳ ಮುಖಂಡರೊಂದಿಗೆ ಸಮಾಲೋಚಿಸಿ ಅಂತಿಮ ಕಾರ್ಯವಿಧಾನವನ್ನು ರೂಪಿಸಬೇಕು.

● ಅಂತಿಮ ದತ್ತಾಂಶವು ಮೀಸಲಾತಿ, ಪ್ರಾತಿನಿಧ್ಯ, ಶಿಕ್ಷಣ, ಉದ್ಯೋಗ, ಅಭಿವೃದ್ಧಿ ಯೋಜನೆ ಮತ್ತು ಆರ್ಥಿಕ ಅವಕಾಶಗಳನ್ನು ಒದಗಿಸಲು, ಸೂಕ್ತವಾದ ನೀತಿ ರೂಪಿಸಲು ಸಹಾಯಕವಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು.

ದೇಶದ ಜನತೆ ಜನಗಣತಿಯ ಅರ್ಜಿಯಲ್ಲಿ ಯಾವ ಜಾತಿ ಎಂಬ ಪ್ರಶ್ನೆಯನ್ನು ನಿರೀಕ್ಷಿಸಿಲ್ಲ. ಜನರು ಜಾತಿಗಣತಿಗೆ ಒತ್ತಾಯಿಸುತ್ತಿರುವುದು ಸಾಮಾಜಿಕ ನ್ಯಾಯದ ಉದ್ದೇಶಕ್ಕಾಗಿ ಎಂಬುದನ್ನು ಕೇಂದ್ರ ಸರ್ಕಾರ ಮನಗಾಣಬೇಕು. ಕೇಂದ್ರ ಸರ್ಕಾರವು ಒಂದೋ ಪ್ರಾಮಾಣಿಕವಾಗಿ ಜಾತಿ ಸಮೀಕ್ಷೆಯನ್ನು ನಡೆಸಬೇಕು ಅಥವಾ ಜಾತಿ ಗಣತಿ ಮಾಡಲು ಯಾಕೆ ಹಿಂಜರಿಯುತ್ತಿದೆ ಎಂಬುದನ್ನು ದೇಶದ ಜನತೆಗೆ ವಿವರಿಸಬೇಕು.

ದೇಶಕ್ಕೆ ಕೇವಲ ಜಾತಿ ಗಣತಿಯ ಅಂಕಿಸಂಖ್ಯೆಯ ಅಗತ್ಯವಿಲ್ಲ. ಜನರಿಗೆ ಬೇಕಿರುವುದು ಮುಂದಿನ ಪೀಳಿಗೆಗೆ ಸಾಮಾಜಿಕ ನ್ಯಾಯ ಒದಗಿಸಲು ಅಗತ್ಯವಾದ ಜಾತಿವಾರು ದತ್ತಾಂಶ. ಪ್ರತಿಯೊಂದು ಜಾತಿಯನ್ನು ಗಣತಿ ಮಾಡಿ. ಪ್ರತಿಯೊಂದು ಸಮುದಾಯವನ್ನು ಗುರುತಿಸಿ. ಭಾರತದ ಅಭಿವೃದ್ಧಿಯಲ್ಲಿ ಪ್ರತಿಯೊಂದು ಸಮುದಾಯಕ್ಕೂ ನ್ಯಾಯಯುತ ಸ್ಥಾನಮಾನವನ್ನು ಕೊಡಿ ಎಂದೂ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+