ಸರ್ಕಾರದ ವಿರುದ್ಧ ಮಾನವ ಹಕ್ಕು ಆಯೋಗದಲ್ಲಿ ಪ್ರಕರಣ ದಾಖಲು
ಬೆಂಗಳೂರು, ಆಗಸ್ಟ್ 02: ಕರ್ನಾಟಕ ಸರ್ಕಾರದ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗ ಪ್ರಕರಣ ದಾಖಲು ಮಾಡಿಕೊಂಡಿದೆ. ಕೋವಿಡ್ -19 ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪದಡಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಚ್. ಕೆ. ಪಾಟೀಲ್ ನೀಡಿದ ದೂರಿನ ಅನ್ವಯ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ. ಆಗಸ್ಟ್ 28ರಂದು ಈ ಕುರಿತ ಮೊದಲ ವಿಚಾರಣೆ ನಡೆಯಲಿದೆ.
ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಸಕಾಲಕ್ಕೆ ಅಂಬ್ಯುಲೆನ್ಸ್‌ಗಳು ಸಿಗುತ್ತಿಲ್ಲ ಎಂದು ಎಚ್. ಕೆ. ಪಾಟೀಲ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೊರೊನಾ ವಾರಿಯರ್ಸ್‌ಗೆ ಸರಿಯಾದ ಪಿಪಿಇ ಕಿಟ್ ವ್ಯವಸ್ಥೆ ಇಲ್ಲ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಬಳ್ಳಾರಿ, ರಾಯಚೂರು, ದಾವಣಗೆರೆ ಮತ್ತು ಬೆಂಗಳೂರಿನಲ್ಲಿ ಕೋವಿಡ್ -19ನಿಂದ ಮೃತಪಟ್ಟ ರೋಗಿಗಳ ಅಂತ್ಯ ಸಂಸ್ಕಾರವನ್ನು ಸರಿಯಾಗಿ ನಡೆಸಿಲ್ಲ. ವ್ಯಕ್ತಿಗೆ ಕೊಡಬೇಕಾದ ಕನಿಷ್ಠ ಗೌರವವನ್ನು ನೀಡಿಲ್ಲ ಎಂದು ಆರೋಪಿಸಿದ್ದರು.
ಕರ್ನಾಟಕದಲ್ಲಿ ಶನಿವಾರ 5172 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,29,287ಕ್ಕೆ ಏರಿಕೆಯಾಗಿದೆ.












Click it and Unblock the Notifications