2018ರ ಚುನಾವಣೆಗಿಂತ 2023ರ ಚುನಾವಣೆಯಲ್ಲಿ ಕ್ರಿಮಿನಲ್ ಕೇಸ್ ಹೊಂದಿರುವ ಅಭ್ಯರ್ಥಿಗಳು ಹೆಚ್ಚು!
ಬೆಂಗಳೂರು, ಮೇ. 04: ಕಳೆದ 2018ರ ಚುನಾವಣೆಯಿಂದ ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ಮೂರು ಪಕ್ಷಗಳಲ್ಲಿ ಘೋಷಿತ ಅಪರಾಧ ಪ್ರಕರಣಗಳಿರುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿ ಅಭ್ಯರ್ಥಿಗಳಲ್ಲಿ ಪ್ರಕರಣಗಳ ಸಂಖ್ಯೆ 83 ರಿಂದ 96 ಕ್ಕೆ, ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ 59 ರಿಂದ 122 ಪ್ರಕರಣಗಳು ಮತ್ತು ಜೆಡಿಎಸ್ ಅಭ್ಯರ್ಥಿಗಳಲ್ಲಿ 41 ರಿಂದ 70 ಪ್ರಕರಣಗಳು ಹೆಚ್ಚಿವೆ ಎಂದು ವರದಿ ಬಹಿರಂಗಪಡಿಸಿದೆ.
'ಕರ್ನಾಟಕ ವಿಧಾನಸಭಾ ಚುನಾವಣೆ 2023: ಅಪರಾಧ ಹಿನ್ನೆಲೆ, ಹಣಕಾಸು, ಶಿಕ್ಷಣ, ಲಿಂಗ ವಿಶ್ಲೇಷಣೆ ಮತ್ತು ಅಭ್ಯರ್ಥಿಗಳ ಇತರ ವಿವರಗಳು' ಎಂಬ ವರದಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಬಿಡುಗಡೆ ಮಾಡಿದೆ. ಈ ವರದಿಯಲ್ಲಿ 2023ರ ಚುನಾವಣೆಯಲ್ಲಿ ಸ್ವರ್ಧಿಸಿರುವ ಅಭ್ಯರ್ಥಿಗಳ ಅಪರಾದ ಪ್ರಕರಣಗಳು ಹೆಚ್ಚು ಎನ್ನಲಾಗಿದೆ.

ಕೊಲೆ ಸಂಬಂಧಿತ ಪ್ರಕರಣಗಳು (ಐಪಿಸಿ ಸೆಕ್ಷನ್ 302) ಘೋಷಿಸಿದ ಎಂಟು ಅಭ್ಯರ್ಥಿಗಳು, ಕೊಲೆ ಯತ್ನ ಪ್ರಕರಣಗಳನ್ನು ಘೋಷಿಸಿದ 35 ಅಭ್ಯರ್ಥಿಗಳು (ಸೆಕ್ಷನ್ 307) ಮತ್ತು ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳನ್ನು ಘೋಷಿಸಿದ 49 ಅಭ್ಯರ್ಥಿಗಳು ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳನ್ನು ಘೋಷಿಸಿದ ಅಭ್ಯರ್ಥಿಗಳ ಪೈಕಿ ಒಂದು ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಕ್ರಿಮಿನಲ್ ಪ್ರಕರಣಗಳಿವೆ. ಕಾಂಗ್ರೆಸ್‌ನ 55% ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದರೆ, 31% ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಬಿಜೆಪಿಯಲ್ಲಿ 30% ಅಭ್ಯರ್ಥಿಗಳು ಗಂಭೀರ ಪ್ರಕರಣಗಳನ್ನು ಹೊಂದಿದ್ದರೆ, ಜೆಡಿಎಸ್‌ನಲ್ಲಿ 25% ಅಭ್ಯರ್ಥಿಗಳು ಗಂಭೀರ ಅಪರಾಧ ಪ್ರಕರಣಗಳನ್ನು ಘೋಷಿಸಿದ್ದಾರೆ.

ಶಾಶ್ವತ ಅನರ್ಹತೆ
ಕೊಲೆ, ಅತ್ಯಾಚಾರ, ಕಳ್ಳಸಾಗಣೆ, ಡಕಾಯಿತಿ ಮತ್ತು ಅಪಹರಣದಂತಹ ಘೋರ ಅಪರಾಧಗಳಿಗೆ ಶಿಕ್ಷೆಗೊಳಗಾದ ಅಭ್ಯರ್ಥಿಗಳನ್ನು ಶಾಶ್ವತವಾಗಿ ಅನರ್ಹಗೊಳಿಸಬೇಕು ಎಂದು ಎಡಿಆರ್ ಶಿಫಾರಸು ಮಾಡಿದೆ. ಗಂಭೀರ ಕ್ರಿಮಿನಲ್ ಅಪರಾಧಗಳ ಆರೋಪ ಹೊತ್ತಿರುವವರನ್ನು ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸುವಂತೆಯೂ ಅವರು ಶಿಫಾರಸು ಮಾಡಿದ್ದಾರೆ.
ತಮ್ಮ ವಿರುದ್ಧ ಪ್ರಕರಣಗಳಿರುವ ರಾಜಕಾರಣಿಗಳು ಚುನಾವಣೆಗೆ ಸ್ಪರ್ಧಿಸಬಹುದು ಮತ್ತು ಸಚಿವರಾಗಬಹುದು ಎಂದು ಕರ್ನಾಟಕ ಚುನಾವಣಾ ಕಾವಲು ಸಂಸ್ಥೆಯ ರಾಜ್ಯ ಸಂಯೋಜಕಿ ಕಾತ್ಯಾಯಿನಿ ಚಾಮರಾಜ್ ಹೇಳಿದ್ದಾರೆ. ಅವರನ್ನು ಅನರ್ಹಗೊಳಿಸುವುದು ಕಾನೂನಿನ ಮುಂದೆ ಅಸಮಾನತೆಯನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು.
"ಕಾನೂನು ಆಯೋಗವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ 244 ನೇ ವರದಿಯು ತಮ್ಮ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅನರ್ಹಗೊಳಿಸುವಂತೆ ಶಿಫಾರಸು ಮಾಡಿತ್ತು. ಆದರೆ ಅದು ನಡೆದಿಲ್ಲ. ಮತದಾರರು ತಮ್ಮ ವಿವೇಚನೆಯನ್ನು ಬಳಸುತ್ತಾರೆ ಮತ್ತು ಅಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡದಿರುವುದು ಅವರ ಕೈಯಲ್ಲಿದೆ ಎಂದು ಕಾತ್ಯಾಯಿನಿ ಚಾಮರಾಜ್ ಹೇಳಿದ್ದಾರೆ.
ವರದಿಯಲ್ಲಿ ಒಟ್ಟು ಕ್ಷೇತ್ರಗಳ ಸುಮಾರು 50% (224 ರಲ್ಲಿ 111) ರೆಡ್ ಅಲರ್ಟ್ ಕ್ಷೇತ್ರಗಳು ಎಂದು ಘೋಷಿಸಲಾಗಿದೆ. ಅಂದರೆ ಈ ಕ್ಷೇತ್ರಗಳ ಮೂರು ಅಥವಾ ಹೆಚ್ಚಿನ ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ. 2018 ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ರೆಡ್ ಅಲರ್ಟ್ ಕ್ಷೇತ್ರಗಳು ಶೇಕಡಾ 25 ಪಾಯಿಂಟ್‌ಗಳಷ್ಟು (2018 ರಲ್ಲಿ 56 ಕ್ಷೇತ್ರಗಳು) ಹೆಚ್ಚಾಗಿದೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿ ಏಳು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.












Click it and Unblock the Notifications