ಲೋಕಸಭೆ ಉಪ ಚುನಾವಣೆ ರದ್ದುಪಡಿಸಲು ರಾಷ್ಟ್ರಪತಿಗಳಿಗೆ ಪತ್ರ
ಶಿವಮೊಗ್ಗ, ಅಕ್ಟೋಬರ್ 09 : ಬಳ್ಳಾರಿ, ಶಿವಮೊಗ್ಗ ಮತ್ತು ಮಂಡ್ಯ ಲೋಕಸಭೆ ಉಪ ಚುನಾವಣೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ಮಂಗಳವಾರ ಕಿಮ್ಮನೆ ರತ್ನಾಕರ ಅವರು ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಈಗ ಸಂಸದರಾಗಿ ಆಯ್ಕೆಯಾದವರ ಅಧಿಕಾರ 6 ತಿಂಗಳು ಇರುತ್ತದೆ. ಆದ್ದರಿಂದ, ಜನರ ತೆರಿಗೆ ಹಣ ವ್ಯರ್ಥ ಮಾಡಿ ಚುನಾವಣೆ ನಡೆಸುವುದು ಬೇಡ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಘೋಷಣೆಯಾಗಿರುವ ಉಪ ಚುನಾವಣೆಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಪ್ರಧಾನಿ ಕಚೇರಿ, ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗಕ್ಕೂ ಪತ್ರವನ್ನು ಕಳಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಶಿವಮೊಗ್ಗ, ಬಿ.ಶ್ರೀರಾಮುಲು ರಾಜೀನಾಮೆಯಿಂದ ತೆರವಾದ ಬಳ್ಳಾರಿ ಮತ್ತು ಸಿ.ಎಸ್.ಪುಟ್ಟರಾಜು ಅವರ ರಾಜೀನಾಮೆಯಿಂದ ತೆರವಾದ ಮಂಡ್ಯ ಕ್ಷೇತ್ರಕ್ಕೆ ನ.3ರಂದು ಉಪ ಚುನಾವಣೆ ನಡೆಯಲಿದೆ.
ಆದರೆ, ಮೂರು ರಾಜಕೀಯ ಪಕ್ಷಗಳ ಕೆಲವು ನಾಯಕರು ಉಪ ಚುನಾವಣೆ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಮೇ ಅಥವ ಜೂನ್ ತಿಂಗಳಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಆದ್ದರಿಂದ, ಈಗ ಉಪ ಚುನಾವಣೆ ನಡೆಸಿ ಹಣ ಖರ್ಚು ಮಾಡುವ ಅಗತ್ಯವೇನಿದೆ? ಎಂದು ಹಲವು ನಾಯಕರು ಪ್ರಶ್ನಿಸಿದ್ದಾರೆ.
ಮತ್ತೊಂದು ಕಡೆ ತುಮಕೂರು ಮೂಲದ ರಮೇಶ್ ನಾಯ್ಕ್ ಎಂಬುವವರು ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಮೂರು ಕ್ಷೇತ್ರಗಳ ಉಪ ಚುನಾವಣೆಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.












Click it and Unblock the Notifications