ಕಾಂಗ್ರೆಸ್ ಬೆಂಬಲಿಸಿದ ಗೂಳಿಹಟ್ಟಿ, ಪ್ರಚಾರ ಅಂತ್ಯ
ಬೆಂಗಳೂರು, ಆ.19 : ಮೂರು ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರ ಮಂಗಳವಾರ ಅಂತ್ಯಗೊಂಡಿದೆ. ಬುಧವಾರ ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ನಡೆಸಬಹುದಾಗಿದ್ದು, ಆ.21ರ ಗುರುವಾರ ಮತದಾನ ನಡೆಯಲಿದೆ. ಪ್ರಚಾರದ ಕೊನೆಯ ದಿನ ಶಿಕಾರಿಪುರದಲ್ಲಿ ಗೂಳಿಹಟ್ಟಿ ಶೇಖರ್ ಕಾಂಗ್ರೆಸ್ ಬೆಂಬಲಿಸುವುದಾಗಿ ಘೋಷಿಸಿದ್ದಾರೆ.
ಶಿಕಾರಿಪುರ, ಚಿಕ್ಕೋಡಿ-ಸದಲಗಾ ಮತ್ತು ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿನ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ವಿವಿಧ ಪಕ್ಷ ನಾಯಕರು ಮತದಾರರನ್ನು ಸೆಳೆಯಲು ಅಂತಿಮ ಕ್ಷಣದ ಕಸರತ್ತು ನಡೆಸಿದರು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದು, ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ.

ಶಿಕಾರಿಪುರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ ನಾಯಕ ಗೂಳಿಹಟ್ಟಿ ಶೇಖರ್ ಅವರು ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ. ಇದರಿಂದಾಗಿ ಶಿಕಾರಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿ ಬೆಂಬಲ ಸಿಕ್ಕಿದಂತಾಗಿದೆ. ಶಾತವೀರಪ್ಪ ಗೌಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.[ಶಿಕಾರಿಪುರದಲ್ಲಿ ಕಾಂಗ್ರೆಸ್ ಕೈಹಿಡಿದ ಜೆಡಿಎಸ್]
ಶಾಸಕರಾಗಿದ್ದ ಬಿ.ಎಸ್.ಯಡಿಯೂರಪ್ಪ, ಪ್ರಕಾಶ್ ಹುಕ್ಕೇರಿ, ಬಿ.ಶ್ರೀರಾಮುಲು ಅವರು ಸಂಸದರಾಗಿ ಆಯ್ಕೆಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ನಡೆಯುತ್ತಿದೆ. ಆ.21ರ ಗುರುವಾರ ಮೂರು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಆ.25ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. [ಉಪ ಚುನಾವಣೆ ಅಭ್ಯರ್ಥಿಗಳ ಪಟ್ಟಿ]












Click it and Unblock the Notifications