'ಸಿದ್ದರಾಮಯ್ಯಗೆ ನೀಡಿದ ಶೋಕಾಸ್ ನೋಟಿಸ್‌ ಹಿಂಪಡೆಯಿರಿ': ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ

ಬೆಂಗಳೂರು, ಆಗಸ್ಟ್‌ 02: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಟಿ.ಜೆ ಅಬ್ರಾಹಂ ಅವರ ದೂರಿನನ್ವಯ ಮುಖ್ಯಮಂತ್ರಿಗಳಿಗೆ ಜುಲೈ 26ರಂದು ನೀಡಿರುವ ಶೋಕಾಸ್ ನೋಟೀಸ್ ಅನ್ನು ಹಿಂಪಡೆಯಬೇಕು ಎಂದು ರಾಜ್ಯ ಸಚಿವ ಸಂಪುಟ ರಾಜ್ಯಪಾಲರಿಗೆ ಸಲಹೆ ನೀಡಲು ತೀರ್ಮಾನಿಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸಚಿವ ಸಂಪುಟ ಸಭೆಯ ತೀರ್ಮಾನ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ರಾಜ್ಯಪಾಲರು ನೀಡಿರುವ ಶೋಕಾಸ್ ನೋಟೀಸ್ ವಿಚಾರವಾಗಿ ವಿಸ್ತೃತವಾಗಿ ಚರ್ಚೆ ನಡೆಸಿದ್ದೇವೆ. ಬೇರೆ ರಾಜ್ಯಗಳಲ್ಲಿ ನಡೆದಿರುವ ಪ್ರಕರಣ, ಇತರೆ ಪ್ರಕರಣಗಳಲ್ಲಿ ನ್ಯಾಯಾಲಯದ ಮಾರ್ಗದರ್ಶನ ಹಾಗೂ ತೀರ್ಪು, ಇಂತಹ ಪರಿಸ್ಥಿತಿಯಲ್ಲಿ ಬೇರೆ ರಾಜ್ಯಗಳಲ್ಲಿ ಯಾವ ಸರ್ಕಾರಗಳು ಯಾವ ರೀತಿ ನಡೆದುಕೊಂಡಿವೆ ಎಂದು ಚರ್ಚೆ ಮಾಡಿದ್ದೇವೆ ಎಂದರು.

Cabinet Has Resolved To Advise Governor To Withdraw Show Cause Notice To CM DK Shivakumar

ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳಿಂದ ಅಕ್ರಮ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಾಗಲಿ, ತನಿಖಾ ಸಂಸ್ಥೆಗಳ ವಿಚಾರಣೆಯಾಗಲಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳ ವಿಚಾರಣೆ ನಡೆಸಲು ಹೇಗೆ ಸಾಧ್ಯ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುದೊಡ್ಡ ಬಹುಮತದೊಂದಿಗೆ ಆಯ್ಕೆಯಾದ ರಾಜ್ಯದ ಮುಖ್ಯಮಂತ್ರಿಗಳನ್ನು ಕೆಳಗಿಳಿಸಲು ಷಡ್ಯಂತ್ರ ನಡೆಯುತ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಕಿಡಿಕಾರಿದರು.

ರಾಜ್ಯದ ಜನತೆ 136 ಸೀಟುಗಳನ್ನು ನೀಡಿ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಟಿ.ಜೆ. ಅಬ್ರಹಾಂ ಎಂಬಾತನ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಆತ ಯಾರ ವಿರುದ್ಧ ಕೇಸ್ ದಾಖಲಿಸಿದ್ದಾನೆ, ಸುಪ್ರೀಂ ಕೋರ್ಟ್ ಎಷ್ಟು ದಂಡ ವಿಧಿಸಿದೆ ಎಂಬುದು ನಿಮ್ಮೆಲ್ಲರಿಗೂ ಗೊತ್ತಿದೆ. ಆತ ನೀಡಿರುವ ದೂರನ್ನು ಇಟ್ಟುಕೊಂಡು ಘನವೆತ್ತ ರಾಜ್ಯಪಾಲರನ್ನು ಬಳಸಿಕೊಂಡು ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 5ರಂದು ರಾಜ್ಯಪಾಲರು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಆಧರಿಸಿ ಪ್ರಕರಣದ ಕುರಿತ ವರದಿ ನೀಡುವಂತೆ ರಾಜ್ಯ ಮುಖ್ಯಕಾರ್ಯದರ್ಶಿಗಳಿಗೆ ಕೇಳುತ್ತಾರೆ. ಜುಲೈ 15ರಂದು ರಾಜ್ಯಪಾಲರು ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದು, 'ಕರ್ನಾಟಕ ರಾಜ್ಯ ರೈತ ಒಕ್ಕೂಟವು ಮುಡಾದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ್ದು, ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು' ಎಂದು ಮನವಿ ಸಲ್ಲಿಸಿದ್ದು, ಆದಷ್ಟು ಬೇಗ ವರದಿ ನೀಡುವಂತೆ ಕೇಳಿದ್ದಾರೆ.

ರಾಜ್ಯಪಾಲರ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಗೌರವಿಸಬೇಕು ಎಂದು ಮುಖ್ಯಮಂತ್ರಿಗಳು ಈ ಪ್ರಕರಣದ ತನಿಖೆಯನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್ ದೇಸಾಯಿ ಅವರ ನೇತೃತ್ವದ ಸಮಿತಿ ರಚಿಸಿ ನ್ಯಾಯಾಂಗ ತನಿಖೆಗೆ ಆದೇಶ ನೀಡುತ್ತಾರೆ. ಇದಾದ ನಂತರ ಅಬ್ರಾಹಂ ಅವರು ಜುಲೈ 26ರಂದು ದೂರು ನೀಡುತ್ತಾರೆ. ಅದೇ ದಿನ ಮುಖ್ಯ ಕಾರ್ಯದರ್ಶಿಗಳು ರಾಜ್ಯಪಾಲರಿಗೆ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಸಲ್ಲಿಸುತ್ತಾರೆ. ರಾಜ್ಯಪಾಲರು ದೂರು ಹಾಗೂ ಮುಖ್ಯ ಕಾರ್ಯದರ್ಶಿಗಳ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸುವ ಮುನ್ನವೇ, ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟೀಸ್ ನೀಡಿದ್ದಾರೆ ಎಂದು ತಿಳಿಸಿದರು.

ಇಷ್ಟು ತರಾತುರಿಯಲ್ಲಿ ಇಂತಹ ತೀರ್ಮಾನ ಮಾಡುತ್ತಿರುವುದೇಕೆ? ನಮ್ಮ ಅನುಭವದ ಪ್ರಕಾರ ಯಾವುದೇ ದೂರು ದಾಖಲಾದರೂ ತನಿಖೆಗೆ ಆದೇಶ ನೀಡುವ ಮುನ್ನ ಆರೋಪ ಸಾಬೀತುಪಡಿಸಲು ಪೂರಕ ಸಾಕ್ಷ್ಯಾಧಾರಗಳು ಬೇಕು. ಅಥವಾ ಯಾವುದಾದರೂ ತನಿಖಾ ಸಂಸ್ಥೆಗಳು ಅನುಮತಿಗೆ ಮನವಿ ನೀಡುತ್ತಾರೆ. ಆದರೆ ಈ ಪ್ರಕರಣದಲ್ಲಿ ತನಿಖೆ ಮಾಡುವ ಮುನ್ನವೇ ಶೋಕಾಸ್ ನೋಟೀಸ್ ನೀಡಲಾಗಿದೆ. ಇದು ಪ್ರಾಜಾಪ್ರಭುತ್ವ ಹಾಗೂ ಸಂವಿಧಾನದ ಕಗ್ಗೊಲೆಯಲ್ಲವೇ? ಎಂದು ಪ್ರಶ್ನಿಸಿದರು.

ನಮ್ಮ ಮುಖ್ಯಮಂತ್ರಿಗಳ ಧರ್ಮಪತ್ನಿ ಪಾರ್ವತಿ ಅವರ ಸಹೋದರ ಡಿನೋಟಿಫಿಕೇಷನ್ ಆದ ಐದಾರು ವರ್ಷಗಳ ನಂತರ ಖರೀದಿ ಮಾಡಿ ಅದನ್ನು ತವರು ಮನೆಯ ಅರಿಷಿನ ಕುಂಕುಮದ ಕಾಣಿಕೆಯಾಗಿ ದಾನ ಪತ್ರದ ಮೂಲಕ ನೀಡಿದ್ದಾರೆ. ಈ ಜಮೀನನ್ನು ಮುಡಾ ಮರುನೋಟಿಫಿಕೇಶನ್ ಮಾಡದೇ, ಬಳಸಿಕೊಂಡಿದೆ. ಆ ಮೂಲಕ ಈ ಜಾಗವನ್ನು ಮುಡಾ ಒತ್ತುವರಿ ಮಾಡಿಕೊಂಡಿದೆ. ಆಗ ಪಾರ್ವತಿ ಅವರು ಅಕ್ರಮವಾಗಿ ನಮ್ಮ ಜಾಗ ಒತ್ತುವರಿ ಮಾಡಿ ಬೇರೆಯವರಿಗೆ ಹಂಚಿಕೆ ಮಾಡಲಾಗಿದೆ ಹೀಗಾಗಿ ನಮಗೆ ಪರಿಹಾರ ನೀಡಿ ಎಂದು ಕೇಳುತ್ತಾರೆ.

ಮುಡಾ ಅವರು ತಮ್ಮ ತಪ್ಪಿನ ಅರಿವಾಗಿ ಪಾರ್ವತಮ್ಮನವರ ಜತೆ ಚರ್ಚೆ ಮಾಡಿ 50:50 ಅನುಪಾತದಲ್ಲಿ ಪರಿಹಾರ ನೀಡಲು ತೀರ್ಮಾನಿಸಿದ್ದಾರೆ. ಮುಡಾದ ಮನವಿ ಆಧಾರದ ಮೇಲೆ ಪಾರ್ವತಮ್ಮನವರು ತಮ್ಮ ಜಮೀನನ್ನು ಮುಡಾಕ್ಕೆ ಬಿಟ್ಟುಕೊಡುತ್ತಾರೆ. ಈ ತೀರ್ಮಾನ ಮಾಡಿದಾಗ ಮುಡಾದಲ್ಲಿ ಕಾಂಗ್ರೆಸ್ ಪಕ್ಷದ ಒಂದಿಬ್ಬರು ಸದಸ್ಯರ ಹೊರತಾಗಿ ಉಳಿದಂತೆ ಜಿ.ಟಿ ದೇವೇಗೌಡ, ರಾಮದಾಸ್ ಅವರು ಸೇರಿ ಎಲ್ಲಾ ಸದಸ್ಯರು ವಿರೋಧ ಪಕ್ಷದವರಾಗಿದ್ದರು. ಇದೆಲ್ಲವೂ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ನಡೆದಿರುವ ಪ್ರಕ್ರಿಯೆ. ಆಗ ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇರಲಿಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+