ನ್ಯಾಯಮೂರ್ತಿ ಭಕ್ತವತ್ಸಲ ಆಯೋಗದ 3 ಶಿಫಾರಸ್ಸುಗಳಿಗೆ ಸಂಪುಟ ಒಪ್ಪಿಗೆ
ಬೆಂಗಳೂರು ಅಕ್ಟೋಬರ್ 6: ನ್ಯಾಯಮೂರ್ತಿ ಭಕ್ತವತ್ಸಲ ಆಯೋಗದ 3 ಶಿಫಾರಸಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ನ್ಯಾಯಮೂರ್ತಿ ಕೆ ಭಕ್ತವತ್ಸಲ ಆಯೋಗದ ಶಿಫಾರಸಿನಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿಗಳಿಗೆ ಶೇ 33 ಮೀಸಲಾತಿಯನ್ನು ನೀಡಲು ಕರ್ನಾಟಕ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಇದರಿಂದ ಒಬಿಸಿಗಳಿಗೆ ಶೇ 33ರಷ್ಟು ಮೀಸಲಾತಿ ಜಾರಿಯಾಗಲಿದೆ.
ಹಿಂದುಳಿದ ವರ್ಗಗಳಿಗೆ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಸುವ ಸಲುವಾಗಿ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ಡಾ ಜಸ್ಟೀಸ್ ಕೆ, ಭಕ್ತವತ್ಸಲ ಆಯೋಗದ ಮೂರು ಶಿಫಾರಸಿಗಳಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ.

ಒಬಿಸಿಗಳಿಗೆ ಶೇ 33 ಮೀಸಲಾತಿ ಸೇರಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಉಪಮೇಯರ್ ಸ್ಥಾನಗಳಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಿರಿಸುವುದು ಮತ್ತು ಎಲ್ಲಾ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ಶಾಖೆಗಳನ್ನು ಡಿಪಿಎಆರ್ ಹತೋಟಿಗೆ ನೀಡಲು ಭಕ್ತವತ್ಸಲ ಮಾಡಿದ ಶಿಫಾರಸಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸಚಿವ ಸಂಪುಟದಲ್ಲಿ ಗುರುವಾರ ಈ ಬಗ್ಗೆ ಚರ್ಚೆ ನಡೆಡಿತು. ಐದು ಶಿಫಾರಸುಗಳ ಪೈಕಿ ಮೂರು ಶಿಫಾರಸ್ಸುಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ಒಪ್ಪಿಗೆಯನ್ನು ಸೂಚಿಸಿದೆ. ಆಯೋಗವು ಮಾಡಿದ ಇತರ ಎರಡು ಶಿಫಾರಸುಗಳನ್ನು ಕ್ಯಾಬಿನೆಟ್ ತಿರಸ್ಕರಿಸಿದೆ. ಅದರಲ್ಲಿ ಒಂದು ಒಬಿಸಿಗಳನ್ನು ಮರುವರ್ಗೀಕರಿಸುವುದು ಮತ್ತು ಮತ್ತೊಂದು ಮೇಯರ್ ಮತ್ತು ಉಪ ಮೇಯರ್‌ಗಳ ಅಧಿಕಾರಾವಧಿಯನ್ನು ಹೆಚ್ಚಿಸುವುದು.
ಒಬಿಸಿಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಕಂಡುಹಿಡಿಯಲು ಆಯೋಗವನ್ನು ರಚಿಸಲಾಗಿದೆ. ಅದು ತನ್ನ ವರದಿಯನ್ನು 2022ರ ಜುಲೈನಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿತ್ತು. ಅದನ್ನು ಸಚಿವ ಸಂಪುಟ ಅಂಗೀಕರಿಸಿತು.
ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ ಕಾನೂನು ಸಚಿವ ಎಚ್‌ಕೆ ಪಾಟೀಲ್, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿಗಳಿಗೆ ಮೂರನೇ ಒಂದು ಅಥವಾ 33 ಪ್ರತಿಶತ ಮೀಸಲಾತಿಯನ್ನು ಮುಂದುವರಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಹೇಳಿದರು. ಆಯೋಗವು ಐದು ಶಿಫಾರಸುಗಳನ್ನು ಮಾಡಿದ್ದು, ಮೂರು ಶಿಫಾರಸುಗಳನ್ನು ಸಂಪುಟ ಅನುಮೋದಿಸಿದೆ ಎಂದು ಪಾಟೀಲ್ ಹೇಳಿದರು.
ಬಿಬಿಎಂಪಿಯಲ್ಲಿ ಮೇಯರ್ ಮತ್ತು ಉಪಮೇಯರ್ ಕಚೇರಿಗಳನ್ನು ಒಬಿಸಿಗಳಿಗೆ ಮೀಸಲಿಡುವುದು ಮತ್ತು ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಡಿಪಿಎಆರ್ ವ್ಯಾಪ್ತಿಯಲ್ಲಿ ತರುವುದು ಸೇರಿದಂತೆ ಇತರ ಎರಡು ಶಿಫಾರಸುಗಳಿಗೆ ಸಂಪುಟ ಅನುಮೋದನೆ ನೀಡಿದೆ.
ಆದರೆ ಬಿಬಿಎಂಪಿಯಲ್ಲಿ ಮೇಯರ್ ಮತ್ತು ಉಪಮೇಯರ್ ಅವರ ಅಧಿಕಾರಾವಧಿಯನ್ನು 30 ತಿಂಗಳಿಗೆ ಪರಿಷ್ಕರಿಸುವ ಸಲುವಾಗಿ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಸೆಕ್ಷನ್ 10 ಅನ್ನು ತಿದ್ದುಪಡಿ ಮಾಡುವ ಆಯೋಗದ ಶಿಫಾರಸನ್ನು ಸರ್ಕಾರ ತಿರಸ್ಕರಿಸಿದೆ.












Click it and Unblock the Notifications