ದೀಪಾವಳಿ ನಂತರ ಸಚಿವ ಸಂಪುಟ ವಿಸ್ತರಣೆ ಸುಳಿವು ಕೊಟ್ಟ ಜೋಶಿ
ಬೆಂಗಳೂರು, ಅ. 23: ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುಳಿವನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ದೀಪಾವಳಿ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಬರುವುದಾಗಿ ಹೇಳಿದ್ದಾರೆ. ದೀಪಾವಳಿ ಹಬ್ಬ ಮುಗಿದ ಮೇಲೆ ಸಿಎಂ ದೆಹಲಿಗೆ ಬರಲಿದ್ದಾರೆ. ಸಿಎಂ ದೆಹಲಿಗೆ ಬಂದಾಗ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸುವುದಾಗಿ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಿದ ಬಳಿಕ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರನ್ನ ಭೇಟಿ ಮಾಡಿ ಮಾತನಾಡುವುದಾಗಿ ಹೇಳಿರುವ ಪ್ರಲ್ಹಾದ್ ಜೋಶಿ, ದೀಪಾವಳಿ ಬಳಿಕ ಸಚಿವ ಸಂಪುಟ ವಿಸ್ತರಣೆ ಸುಳಿವು ನೀಡಿದರು.

ಭಾರತ್ ಜೋಡೋ ಯಾತ್ರೆ ಮಾಡಿದಷ್ಟು ಬಿಜೆಪಿಗೆ ಅನುಕೂಲ
ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿ ಭಯ ಬಿದ್ದಿದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ. ಹೌದು ನಾವು ವಿಚಲಿತರಾಗಿದಕ್ಕೆ ಗೋವಾದಲ್ಲಿ ಕೈ ನಾಯಕರು ಕಾಂಗ್ರೆಸ್ ಪಕ್ಷ ಬಿಟ್ಟು ಹೋಗ್ತಿದ್ದಾರೆ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.
ಭಾರತ್ ಜೋಡೊ ಆಗ್ತಿದ್ದಂತೆ ರಾಜಸ್ಥಾನದಲ್ಲೂ ಕಾಂಗ್ರೆಸ್ ನಾಯಕರು ಪಕ್ಷ ಬಿಟ್ಟು ಹೋಗಲು ತಯಾರಾಗಿದ್ದಾರೆ. ಜೋಡೋ ಅಂತ ಹೆಸರಿಟ್ಟುಕೊಂಡು ಯಾತ್ರೆ ನಡೆಸ್ತಿದ್ದಾರೆ. ಆದರೆ, ಕಾಂಗ್ರೆಸ್ ಚೋಡೋ ನಡೆಯುತ್ತಿದೆ. ಅದನ್ನು ಮುಚ್ಚಿಕೊಳ್ಳಲು ಜೋಡೋ ಯಾತ್ರೆಯನ್ನು ಕಾಂಗ್ರೆಸ್ ನಡೆಸ್ತಿದೆ. ರಾಹುಲ್ ಗಾಂಧಿ ಅವರು ಯಾತ್ರೆ ಹೋದಲೆಲ್ಲ ಬಿಜೆಪಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಜೋಶಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

ಹೊಸ ಉದ್ಯೋಗ ಸೃಷ್ಟಿ:
ಕೊಟ್ಟ ಮಾತಿನಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿಗಳನ್ನು ಮಾಡುವತ್ತ ಮಹತ್ತರ ಹೆಜ್ಜೆಗಳನ್ನು ಇಟ್ಟಿದ್ದಾರೆ. ಒಬ್ಬ ದೂರ ದೃಷ್ಟಿಯುಳ್ಳ ನಾಯಕ ದೇಶದ ಅಭಿವೃದ್ಧಿಗಾಗಿ ಯಾವ ರೀತಿ ಬದಲಾವಣೆಗಳನ್ನು ತರಬಹುದು ಎಂಬುದಕ್ಕೆ ಇದೇ ಉದಾಹರಣೆಯಾಗಿದೆ ಎಂದು ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಪ್ರಲ್ಹಾದ್ ಜೋಶಿ ಬೆಂಗಳೂರಿನಿಂದ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಚಿವರಾದ ಅಶ್ವತ್ಥ್ ನಾರಾಯಣ್,, ಸಂಸದ ಪಿ.ಸಿ ಮೋಹನ್, ಹಾಗೂ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.












Click it and Unblock the Notifications