ಸಿಗದ ಸಚಿವ ಸ್ಥಾನ, ಒಳಗೊಳಗೆ ಅತೃಪ್ತಿ: ಮುಂದೆ ಮಂತ್ರಿ ಆಗ್ತೀನಿ ಎಂದ ಎಂಟಿಬಿ

ಬೆಂಗಳೂರು, ಫೆಬ್ರವರಿ 6: ರಾಜ್ಯ ಸಚಿವ ಸಂಪುಟದಲ್ಲಿ ಸೇರಬೇಕೆಂಬ ಆಕಾಂಕ್ಷಿಗಳಲ್ಲಿ ಕೆಲವರು ಗೆದ್ದ ಸಂಭ್ರಮದಲ್ಲಿದ್ದಾರೆ. ಇನ್ನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಲ್ಲಿ ಅನೇಕರಿಗೆ ತೀವ್ರ ನಿರಾಶೆಯಾಗಿದೆ. ಉಪ ಚುನಾವಣೆಯಲ್ಲಿ ಸೋತ ಮಾಜಿ ಸಚಿವ ಎಂಟಿಬಿ ನಾಗರಾಜ್, ಸಂಪುಟದಲ್ಲಿ ತಮಗೆ ಕುರ್ಚಿ ಸಿಗದೆ ಬೇಸರಗೊಂಡಿದ್ದರೂ, ಮತ್ತೆ ಸಚಿವನಾಗಲು ಅವಕಾಶ ಸಿಗಲಿದೆ ಎಂಬ ಆಶಾಭಾವ ವ್ಯಕ್ತಪಡಿಸಿದ್ದಾರೆ.

ಮೊದಲ ಹಂತದಲ್ಲಿ ತಮಗೆ ಮಂತ್ರಿಗಿರಿ ಸಿಗದಿದ್ದರೂ, ಮುಂದಿನ ಹಂತದಲ್ಲಿ ತಮ್ಮನ್ನು ಖಂಡಿತವಾಗಿಯೂ ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ಯಡಿಯೂರಪ್ಪ ಅವರು ನೀಡಿರುವ ವಚನದ ಬಗ್ಗೆ ಎಂಟಿಬಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಯಡಿಯೂರಪ್ಪ ಅವರು ಯಾರಿಗೆ ಮಂತ್ರಿ ಮಾಡುತ್ತೇನೆ ಎಂದು ಮಾತು ನೀಡಿದ್ದಾರೋ, ಅದನ್ನು ಉಳಿಸಿಕೊಳ್ಳುವ ಗುಣಲಕ್ಷಣ ಅವರಿಗಿದೆ. ಮುಂದೊಂದು ದಿನ ನಾನೂ ಸಚಿವನಾಗಲಿದ್ದೇನೆ' ಎಂದು ಎಂಟಿಬಿ ಗುರುವಾರ ಹೇಳಿದರು. ಚುನಾವಣೆಯಲ್ಲಿ ಗೆದ್ದರೂ ಸಚಿವ ಸ್ಥಾನ ಸಿಗದೆ ಇರುವುದು ಶಾಸಕ ಮಹೇಶ್ ಕುಮಟಳ್ಳಿ ಅವರಿಗೂ ನಿರಾಸೆ ಮೂಡಿಸಿದೆ. ಹಾಗೆಯೇ ಬಿಜೆಪಿಯ ಮೂಲ ಮುಖಂಡರ ಕನಸೂ ಈಡೇರಿಲ್ಲ.

ಸಿಗದ ಮಂತ್ರಿಗಿರಿ-ಒಳಗೊಳಗೇ ಬೇಗುದಿ

ಸಿಗದ ಮಂತ್ರಿಗಿರಿ-ಒಳಗೊಳಗೇ ಬೇಗುದಿ

ಗುರುವಾರ ನಡೆದ ಸಂಪುಟ ವಿಸ್ತರಣೆ ಮಹೇಶ್ ಕುಮಟಳ್ಳಿ, ಎಚ್. ವಿಶ್ವನಾಥ್, ಎಂಟಿಬಿ ನಾಗರಾಜ್, ಆರ್. ಶಂಕರ್, ಉಮೇಶ್ ಕತ್ತಿ, ಯೋಗೀಶ್ವರ್ ಮುಂತಾದ ಸಚಿವ ಸ್ಥಾನದ ಆಕಾಂಕ್ಷಿಗಳ ನೋವನ್ನು ಹೆಚ್ಚಿಸಿರುವುದು ನಿಜ. ಆದರೆ ಅವರು ಅದರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹಂಚಿಕೊಳ್ಳುವ ಸ್ಥಿತಿಯಲ್ಲಿಲ್ಲ. ಸರ್ಕಾರ ಈಗ ಬಹುಮತದೊಂದಿಗೆ ನಡೆಯುತ್ತಿರುವುದರಿಂದ ಮತ್ತು ತಮ್ಮ ಮಾತುಗಳಿಗೆ ಹೈಕಮಾಂಡ್ ಕವಡೆಕಾಸಿನ ಕಿಮ್ಮತ್ತು ನೀಡುವುದಿಲ್ಲ ಎನ್ನುವುದು ಅರಿವಿರುವುದರಿಂದ ಅಸಹಾಯಕತೆಯಿಂದ ಸಂಕಟ ಅದುಮಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ.

ಯಡಿಯೂರಪ್ಪ ಮಾತು ಮರೆಯುವವರಲ್ಲ

ಯಡಿಯೂರಪ್ಪ ಮಾತು ಮರೆಯುವವರಲ್ಲ

'ನನಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಬೇಸರವಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿದೆ. ನನಗೂ ಮಂತ್ರಿ ಸ್ಥಾನ ಸಿಗಬೇಕು ಎನ್ನುವುದು ಕ್ಷೇತ್ರದ ಜನತೆಯ ಬಯಕೆ. ಯಡಿಯೂರಪ್ಪ ಅವರು ಕೊಟ್ಟ ಮಾತನ್ನು ಮರೆಯುವವರಲ್ಲ' ಎಂದು ಎಂಟಿಬಿ ಹೇಳಿದರು.

ಎಂಟಿಬಿ ಗೈರಾಗಲು ಕಾರಣ

ಎಂಟಿಬಿ ಗೈರಾಗಲು ಕಾರಣ

ರಾಜಭವನದಲ್ಲಿ ಗುರುವಾರ ನಡೆದ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನನಗೆ ಆಹ್ವಾನ ನೀಡಿದ್ದರು. ಆದರೆ ಸ್ಥಳೀಯ ಚುನಾವಣೆಯ ಕಾರಣದಿಂದ ಬರಲು ಸಾಧ್ಯವಾಗಲಿಲ್ಲ. ನೂತನ ಸಚಿವರಿಗೆ ಶುಭ ಹಾರೈಸುತ್ತೇನೆ ಎಂದು ಎಂಟಿಬಿ ನಾಗರಾಜ್ ಹೇಳಿದರು.

ಮಹೇಶ್ ಕುಮಟಳ್ಳಿಗೆ ಸಿಗದ ಉತ್ತರ

ಮಹೇಶ್ ಕುಮಟಳ್ಳಿಗೆ ಸಿಗದ ಉತ್ತರ

ತಮಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಬೇಸರವಾಗಿರುವುದು ನಿಜ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಕ್ಷದ ನಾಯಕರಿಗೆ ಮುಜುಗರ ಉಂಟುಮಾಡುವ ಕೆಲಸ ಮಾಡುವುದಿಲ್ಲ. ತಮಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ಕಾರಣವೇನು ಎನ್ನುವುದು ತಿಳಿದಿಲ್ಲ. ಸಚಿವ ಸ್ಥಾನ ನೀಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಬಗ್ಗೆ ಸಿಎಂ ಜತೆ ಮಾತುಕತೆ ನಡೆಸುತ್ತೇನೆ. ಸಚಿವನಾಗಲು ಏನು ಅಡ್ಡಿ ಇದೆಯೋ ತಿಳಿದಿಲ್ಲ ಎಂದು ಮತ್ತೊಬ್ಬ ಆಕಾಂಕ್ಷಿ ಮಹೇಶ್ ಕುಮಟಳ್ಳಿ ಹೇಳಿದರು.

ಶಾಸಕ ತಿಪ್ಪಾರೆಡ್ಡಿ ಅಸಮಾಧಾನ

ಶಾಸಕ ತಿಪ್ಪಾರೆಡ್ಡಿ ಅಸಮಾಧಾನ

'ರಾಜ್ಯ ಸಚಿವ ಸಂಪುಟದಲ್ಲಿ ಬೆಂಗಳೂರು ಹಾಗೂ ಬೆಳಗಾವಿಗೆ ಅರ್ಧದಷ್ಟು ಪಾಲು ಕೊಡಲಾಗಿದೆ. ಆದರೆ ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ನಾನು ಮಂತ್ರಿಯಾಗಬೇಕು ಎನ್ನುವುದು ಚಿತ್ರದುರ್ಗದ ಜನರ ಬಯಕೆಯಾಗಿತ್ತು. ಆದರೆ ಇದಕ್ಕಾಗಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗುವುದಿಲ್ಲ. ಉಪ ಚುನಾವಣೆಯಲ್ಲಿ ಗೆದ್ದು ಸರ್ಕಾರ ಸುಭದ್ರಗೊಳಿಸಿದವರಿಗೆ ಮಂತ್ರಿ ಸ್ಥಾನ ನೀಡಿರುವುದು ಸ್ವಾಗತಾರ್ಹ' ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+