ಸಂಪುಟ ವಿಸ್ತರಣೆ ಕಸರತ್ತು : ಗುಲಾಂ ನಬಿ ಆಜಾದ್ ಭೇಟಿಯಾದ ಎಚ್ಡಿಕೆ
ಬೆಂಗಳೂರು, ಮೇ 28 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೆಹಲಿ ತಲುಪಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇಂದು ಸಂಪುಟ ಸೇರುವ ಕಾಂಗ್ರೆಸ್ ಶಾಸಕರ ಪಟ್ಟಿ ಅಂತಿಮಗೊಳ್ಳುವ ನಿರೀಕ್ಷೆ ಇದೆ.
ಶನಿವಾರ ಮತ್ತು ಭಾನುವಾರ ರಾಜ್ಯದ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಸರಣಿ ಸಭೆಗಳನ್ನು ನಡೆಸಿದ್ದಾರೆ. ಆದರೆ, ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೋಮವಾರ ಬೆಳಗ್ಗೆ ದೆಹಲಿಗೆ ತೆರಳಿದರು.
ಎಚ್.ಡಿ.ಕುಮಾರಸ್ವಾಮಿ ಹಿರಿಯ ಕಾಂಗ್ರೆಸ್ ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಸಭೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಯಾವ ಶಾಸಕರು ಸಂಪುಟ ಸೇರಬೇಕು, ಯಾರಿಗೆ ಯಾವ ಖಾತೆ ಎಂಬ ಬಗ್ಗೆ ಚರ್ಚೆ ನಡೆದಿದೆ.

ಕರ್ನಾಟಕದ ಕಾಂಗ್ರೆಸ್ ನಾಯಕರು ಎರಡು ದಿನಗಳಿಂದ ದೆಹಲಿಯಲ್ಲಿದ್ದಾರೆ. ಶನಿವಾರ ಮತ್ತು ಭಾನುವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆ ನಾಯಕರು ನಡೆಸಿದ ಸಭೆ ವಿಫಲವಾಗಿದೆ. ರಾಹುಲ್ ಗಾಂಧಿ ಅವರು ವಿದೇಶಕ್ಕೆ ತೆರಳಿದ್ದಾರೆ.
ಕಾಂಗ್ರೆಸ್ ಬೇಡಿಕೆ : ಹಣಕಾಸು ಸೇರಿದಂತೆ ಪ್ರಮುಖ ಖಾತೆಗಳನ್ನು ನೀಡಬೇಕು ಎಂದು ಕಾಂಗ್ರೆಸ್ ಬೇಡಿಕೆ ಮುಂದಿಟ್ಟಿದೆ. ಕಾಂಗ್ರೆಸ್ 22, ಜೆಡಿಎಸ್ 12 ಸಚಿವ ಸ್ಥಾನಗಳನ್ನು ಸಮ್ಮಿಶ್ರ ಸರ್ಕಾರದಲ್ಲಿ ಹಂಚಿಕೊಂಡಿವೆ.
ಸೋಮವಾರವೇ ಖಾತೆಗಳ ಹಂಚಿಕೆ ಬಗ್ಗೆ ಅಂತಿಮ ತೀರ್ಮಾನವಾಗಲಿದೆಯೇ? ಅಥವ ರಾಹುಲ್ ಗಾಂಧಿ ವಿದೇಶದಿಂದ ಬರುವ ತನಕ ಕಾಯಲಾಗುತ್ತದೆಯೇ? ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ರಾಹುಲ್ ಆಗಮನದ ತನಕ ಕಾಯುವುದಾದದರೆ ಸಂಪುಟ ವಿಸ್ತರಣೆ ಒಂದು ವಾರ ಮುಂದಕ್ಕೆ ಹೋಗಲಿದೆ.












Click it and Unblock the Notifications