ಸಂಪುಟ ವಿಸ್ತರಣೆ : ಖರ್ಗೆ ಭೇಟಿಯಾಗಲು ಶಾಸಕರ ತಯಾರಿ!
ಬೆಂಗಳೂರು, ಡಿಸೆಂಬರ್ 03 : ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ 8 ಸಚಿವ ಸ್ಥಾನಗಳು ಖಾಲಿ ಇದ್ದು, ಕಾಂಗ್ರೆಸ್ ಪಕ್ಷಕ್ಕೆ 6 ಸ್ಥಾನಗಳು ಸಿಗಲಿವೆ.
ಡಿಸೆಂಬರ್ 10ರೊಳಗೆ ಸಂಪುಟ ವಿಸ್ತರಣೆ ಮಾಡಬೇಕು ಎಂಬುದು ಶಾಸಕರ ಬೇಡಿಕೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಹ ಸಹಮತ ವ್ಯಕ್ತಪಡಿಸಿದ್ದಾರೆ. ಚಳಿಗಾಲದ ಅಧಿವೇಶನ ಆರಂಭವಾಗುವ ಮೊದಲು ಸಂಪುಟ ವಿಸ್ತರಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಆದರೆ, ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕರು ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಅವರ ಮೂಲಕ ಹೈಕಮಾಂಡ್ ನಾಯಕರಿಗೆ ಹೇಳಿಸುವ ಪ್ರಯತ್ನ ನಡೆಸಿದ್ದಾರೆ.

ಡಿಸೆಂಬರ್ 10ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅದಕ್ಕೂ ಮೊದಲು ಸಂಪುಟ ವಿಸ್ತರಣೆ ಮಾಡಬೇಕು ಎಂದು ಶಾಸಕರು ಬೇಡಿಕೆ ಇಟ್ಟಿದ್ದಾರೆ. 6 ಸಚಿವ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಡಜನ್‌ಗೂ ಅಧಿಕ ಆಕಾಂಕ್ಷಿಗಳಿದ್ದಾರೆ.
ಡಿಸೆಂಬರ್ 5ರಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಸಭೆ ಕರೆದಿದ್ದಾರೆ. ಅಂದು ಸಂಪುಟ ವಿಸ್ತರಣೆ ದಿನಾಂಕ ಅಂತಿಮವಾಗಲಿದೆ. ಆದರೆ, ಯಾರು-ಯಾರು ಸಂಪುಟ ಸೇರಲಿದ್ದಾರೆ? ಎಂಬುದು ಇನ್ನೂ ಅಂತಿಮವಾಗಿಲ್ಲ.












Click it and Unblock the Notifications