Bengaluru Real Estate: ಬೆಂಗಳೂರು, ಪುಣೆ ರಿಯಲ್ ಎಸ್ಟೇಟ್ ಬೇಡಿಕೆಯಲ್ಲಿ ಭಾರಿ ಕುಸಿತ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹುಚ್ಚಾಟದಿಂದ ಇಡೀ ಜಗತ್ತು ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಟ್ರಂಪ್ ಸರ್ಕಾರ ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಳೆ 26% ಸುಂಕ ವಿಧಿಸಿದ್ದು ಸಮಸ್ಯೆಗೆ ಕಾರಣವಾಗಿದೆ. ಮೇಲ್ನೋಟಕ್ಕೆ ಇದು ಆಮದು ಸುಂಕ ವ್ಯಾಪಾರದ ಮೇಲೆ ಮಾತ್ರ ಪರಿಣಾಮ ಬೀರುತ್ತವೆ ಎಂದುಕೊಂಡರೂ ಅದರ ಆಳ ಅಗಲ ನೋಡಿದಾಗ ಇದು ಸಾಕಷ್ಟು ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ.
ತಜ್ಞರು ಆಮದು ಸುಂಕದ ವಿವಿಧ ಪರಿಣಾಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸಂಭಾವ್ಯ ಯುಎಸ್ ಆರ್ಥಿಕ ಹಿಂಜರಿತ. ಭಾರತದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಭಾರತದಲ್ಲಿ ಉದ್ಯೋಗ ಕಡಿತಕ್ಕೆ ಕಾರಣವಾಗಲಿದ್ದು ಇದು ರಿಯಲ್ ಎಸ್ಟೇಟ್ ಮತ್ತು ಅದರ ತಂತ್ರಜ್ಞಾನ-ಚಾಲಿತ ನಗರಗಳ ಮೇಲೂ ಕೆಟ್ಟ ಪರಿಣಾಮ ಉಂಟುಮಾಡುತ್ತದೆ.

ಅಮೇರಿಕನ್ ಕಂಪನಿಗಳು ವೆಚ್ಚವನ್ನು ಕಡಿಮೆ ಮಾಡುತ್ತಿರುವುದರಿಂದ, ಭಾರತೀಯ ಐಟಿ ಸಂಸ್ಥೆಗಳ ಆದಾಯ ಕಡಿಮೆಯಾಗಿದೆ. ಐಟಿ ವಲಯ ಸಂಕಷ್ಟದಲ್ಲಿದ್ದಾಗ ಐಟಿ-ಬಿಟಿ ವಲಯವನ್ನು ಹೆಚ್ಚಾಗಿ ಅವಲಂಬಿಸಿರುವು ಬೆಂಗಳೂರು ಮತ್ತು ಪುಣೆಯಂತಹ ನಗರಗಳ ಅಭಿವೃದ್ಧಿ ಮೇಲೂ ಪರಿಣಾಮ ಬೀರಿದೆ.
ತಜ್ಞರಿಂದ ಎಚ್ಚರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಸುಂಕ ಯುದ್ಧದ ಪರಿಣಾಮದ ಸಂಭಾವ್ಯ ಪರಿಣಾಮದ ಬಗ್ಗೆ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ಅಮೆರಿಕದಲ್ಲಿ ಆರ್ಥಿಕ ಹಿಂಜರಿತವು ಬೆಂಗಳೂರು ಮತ್ತು ಪುಣೆಯಂತಹ ಐಟಿ ನಗರಗಳಲ್ಲಿ ರಿಯಲ್ ಎಸ್ಟೇಟ್ ವಲಯದಲ್ಲಿ ಡೊಮಿನೊ ಪರಿಣಾಮವನ್ನು ಉಂಟುಮಾಡಬಹುದು ಎಂದು ಎಚ್ಚರಿಕೆ ನೀಡಿರುವುದಾಗಿ ಬ್ಯುಸಿನೆಸ್ ಟುಡೆ ವರದಿ ಮಾಡಿದೆ.
"ಬೆಂಗಳೂರು, ಪುಣೆ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಐಟಿ ವಲಯದ ಜೊತೆ ನಂಟು ಹೊಂದಿದೆ. ಕಳೆದ 3-4 ವರ್ಷಗಳಲ್ಲಿ ಐಟಿ ವಲಯದಲ್ಲಿ ಉಂಟಾದ ಹಿಂಜರಿಕೆಯಿಂದಾಗಿ ಸಮಸ್ಯೆ ಉಂಟಾಗಿದೆ. ಯುಎಸ್ಎಯಲ್ಲಿನ ಆರ್ಥಿಕ ಹಿಂಜರಿತವು ಐಟಿ ನಗರಗಳ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಬಹುದು" ಎನ್ನಲಾಗಿದೆ.
ಆರ್ಥಿಕ ಬೆಳವಣಿಗೆ, ಐಟಿ ವಲಯದ ಅಭಿವೃದ್ಧಿ ಮತ್ತು ದೇಶಾದ್ಯಂತದ ವೃತ್ತಿಪರರ ಒಳಹರಿವಿನಿಂದಾಗಿ ಬೆಂಗಳೂರಿನ ರಿಯಲ್ ಎಸ್ಟೇಟ್ ಬೆಲೆಗಳು ಇತ್ತೀಚಿನ ವರ್ಷಗಳಲ್ಲಿ ನಾಟಕೀಯವಾಗಿ ಏರಿಕೆಯಾಗಿವೆ. ಇಂದಿರಾನಗರ, ಕೋರಮಂಗಲ ಮತ್ತು ವೈಟ್‌ಫೀಲ್ಡ್‌ನಂತಹ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚಿನ ಬೇಡಿಕೆ ಮತ್ತು ಸೀಮಿತ ಭೂ ಲಭ್ಯತೆಯಿಂದಾಗಿ ಬೆಲೆ ಏರಿಕೆ ಕಂಡುಬಂದಿದೆ. ಆದರೂ ಈ ಬೆಲೆ ಏರಿಕೆ ಸುಸ್ಥಿರವಾಗಿರುವುದಿಲ್ಲ ಎಂದು ಆತಂಕ ವ್ಯಕ್ತವಾಗಿದೆ.
2024ರಲ್ಲಿ ಬೆಂಗಳೂರಿನಲ್ಲಿ 50,000ಕ್ಕೂ ಹೆಚ್ಚು ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದರಿಂದ ವಸತಿ ಬೇಡಿಕೆಯಲ್ಲಿ ಗಮನಾರ್ಹ ಕುಸಿತ ಉಂಟಾಗಿದೆ. ಎಐ ಮತ್ತು ಯಾಂತ್ರೀಕರಣದ ಪರಿಣಾಮ ಉದ್ಯೋಗ ಕಡಿತ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ಉದ್ಯೋಗ ಭದ್ರತೆ ಬಗ್ಗೆ ಕಳವಳ ಉಂಟುಮಾಡಿದೆ.
ಪುಣೆಯಲ್ಲೂ ಬೇಡಿಕೆ ಇಳಿಕೆ
ಪುಣೆಯ ರಿಯಲ್ ಎಸ್ಟೇಟ್ ವಲಯವು ಬೇಡಿಕೆಯಲ್ಲಿ ಇಳಿಕೆ ಕಾಣುತ್ತಿದೆ, ಉದ್ಯೋಗ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ಬಗ್ಗೆ ಕಳವಳಗಳಿಂದಾಗಿ ಐಟಿ ಉದ್ಯಮದ ಸಂಭಾವ್ಯ ಮನೆ ಖರೀದಿದಾರರು ಎಚ್ಚರಿಕೆಯ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ, ಎರಡೂ ನಗರಗಳಲ್ಲಿ ಆಸ್ತಿ ವಹಿವಾಟುಗಳು ಕಡಿಮೆಯಾಗಿದೆ ಎಂದು ಹೇಳಲಾಗಿದೆ.












Click it and Unblock the Notifications