BY Vijayendra: ಮುಳ್ಳಿನ ಹಾದಿ ಮೇಲೆಯೇ ಹೆಜ್ಜೆಹಾಕಬೇಕಿದೆ ‘ಮರಿ ಹುಲಿ’: ವಿಜಯೇಂದ್ರರ ಮುಂದೆ ಬೆಟ್ಟದಷ್ಟು ಸವಾಲುಗಳು!
ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಆದರೆ ಅಸಲಿ ಸವಾಲು ಇಲ್ಲಿಂದಲೇ ಶುರುವಾಗುತ್ತಿದೆ. ಅದು ಹೇಗೆ ಅಂದ್ರೆ, 2023ರ ವಿಧಾನಸಭೆ ಚುನಾವಣೆಯ ಹೀನಾಯ ಸೋಲಿನ ಬಳಿಕ ಕರ್ನಾಟಕ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಸ್ಫೋಟವಾಗಿದೆ. ಜಿಲ್ಲಾ ಮಟ್ಟದ ನಾಯಕರು ನಾನೊಂದು ತೀರ, ನೀನೊಂದು ತೀರ ಅಂತಿದ್ದಾರೆ. ರಾಜ್ಯಮಟ್ಟದ ನಾಯಕರಲ್ಲಿ ಕೂಡ ಈಗ ಒಗಟ್ಟು ಇಲ್ಲ. ಹೀಗಿದ್ದಾಗ ಮುಂದಿನ ಪರಿಸ್ಥಿತಿ ಏನು?
ಬಿ.ವೈ.ವಿಜಯೇಂದ್ರ ಅವರು ಕರ್ನಾಟಕದ ಮಾಜಿ ಸಿಎಂ ಪುತ್ರ, ಹೀಗಿದ್ದಾಗ ಅಪ್ಪನ ಬಲ & ರಾಜಕೀಯ ನೈಪುಣ್ಯತೆ ಸಹಾಯ ಸಿಗುತ್ತದೆ. ಆದರೂ, ರಾಜ್ಯಾಧ್ಯಕ್ಷರಾಗಿ ಕಲಿಯುವುದು ತುಂಬಾ ಇದೆ. ಅದ್ರಲ್ಲೂ ಬಿಜೆಪಿ ಒಳಗೆ ಎದ್ದಿರುವ ಅಸಮಾಧಾನದ ಹೊಗೆ ಆರಿಸಬೇಕಿದೆ. ಈ ಮೂಲಕ, 2024ರ ಲೋಕಸಭೆ ಚುನಾವಣೆಗಾಗಿ ಬಿಜೆಪಿಯನ್ನ ತಯಾರು ಮಾಡಬೇಕಿದೆ ಬಿ.ವೈ.ವಿಜಯೇಂದ್ರ. ಹೀಗಂತಾ ಇದೆಲ್ಲವೂ ರಾತ್ರೋ ರಾತ್ರಿ ನಡೆಯುವ ಕೆಲಸವಲ್ಲ.

ಸಾಲು ಸಾಲು ಸವಾಲು ಕಾದಿದೆ
ಕರ್ನಾಟಕ ಬಿಜೆಪಿಯ ನೂತನ ಅಧ್ಯಕ್ಷರು ಒಳ ಜಗಳ ಸರಿ ಮಾಡಲು ಹೊಸ ತಂತ್ರಗಳನ್ನ ಹೆಣೆಯಬೇಕಿದೆ. ತಮಗಿಂತಲೂ ಹಿರಿಯ ವಯಸ್ಸಿನ ನಾಯಕರನ್ನು ನಿಭಾಯಿಸುವುದೇ ಈ ವೇಳೆ ಮೊದಲ ಸವಾಲಾಗುವ ಸಾಧ್ಯತೆ ಇದೆ. ಜೊತೆಗೆ ಯಡಿಯೂರಪ್ಪ ಅವರಿಗೂ ಬಿಜೆಪಿ ಪಕ್ಷದ ಒಳಗೆ ಅಡ್ಡಿ ಮಾಡುತ್ತಿದ್ದ ನಾಯಕರು, ವಿಜಯೇಂದ್ರರಿಗೆ ಕೂಡ ಕಿರಿಕಿರಿ ಮಾಡುವ ಸಾಧ್ಯತೆ ಬಗ್ಗೆ ಚರ್ಚೆ ಕೂಡ ಶುರುವಾಗಿದೆ. ಇದೆಲ್ಲಾ ಎದುರಿಸಿ, ಪಕ್ಷವನ್ನ ಮುನ್ನಡೆಸುವ ಸವಾಲು ವಿಜಯೇಂದ್ರ ಅವರ ಎದುರು ಇದೆ.
ಮುನಿಸು ಮರೆತು ಒಂದಾಗುತ್ತಾರಾ?
ಬಿಜೆಪಿ ಪಕ್ಷದ ಒಳಗಡೆ, ಯಡಿಯೂರಪ್ಪ ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಹಲವು ನಾಯಕರಿದ್ದಾರೆ. ಅದರಲ್ಲೂ 2023ರ ವಿಧಾನಸಭೆ ಚುನಾವಣೆಗೆ ಮುನ್ನ, ಬಿಎಲ್ ಸಂತೋಷ್ ಬಣ ಮತ್ತು ಯಡಿಯೂರಪ್ಪ ಬಣವಾಗಿ BJP ಒದ್ದಾಡುತ್ತಿದೆ ಎಂಬ ಆರೋಪ ಮಾಡಿತ್ತು ಕರ್ನಾಟಕ ಕಾಂಗ್ರೆಸ್. ಇದನ್ನೇ ರಾಜಕೀಯ ದಾಳವಾಗಿಯೂ ಬಳಸಿಕೊಂಡಿದ್ದ ಕಾಂಗ್ರೆಸ್ ಬಿಜೆಪಿ ವಿರುದ್ಧ ಲಿಂಗಾಯತ ಅಸ್ತ್ರ ಪ್ರಯೋಗಿಸಿ ಯಶಸ್ವಿಯಾಗಿತ್ತು. ಹೀಗಿದ್ದಾಗ ಯಡಿಯೂರಪ್ಪ ಅವರ ಪುತ್ರ ಕರ್ನಾಟಕ ಬಿಜೆಪಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೇ ಹಿನ್ನೆಲೆ, ಅಕಸ್ಮಾತ್ ಬಿಜೆಪಿ ಒಳಗೆ ಬಣ ಇದ್ದರೆ ಆ ಮುನಿಸು ಈಗ ತಣ್ಣಗಾಗುತ್ತಾ? ಎಂಬ ಚರ್ಚೆ ಕೂಡ ಶುರುವಾಗಿದೆ.

ಬಿಎಸ್‌ವೈ ಪಕ್ಷ ಕಟ್ಟಿದ್ದು ಮಾದರಿ ಆಗಬೇಕು
ಕರ್ನಾಟಕದ ರಾಜಕೀಯದಲ್ಲಿ ಅಜಾತಶತ್ರು ಎಂದೇ ಕರೆಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಹಂತದಲ್ಲಿ ವಿಜಯೇಂದ್ರ ಅವರಿಗೆ ಮಾದರಿ ಆಗುತ್ತಾರೆ. ಅತ್ತ ತಂದೆಯಾಗಿ ಬಿ.ಎಸ್.ಯಡಿಯೂರಪ್ಪ ಅವರು, ಬಿ.ವೈ.ವಿಜಯೇಂದ್ರ ಅವರಿಗೆ ಮಾದರಿ. ಇದರ ಜೊತೆಗೆ ರಾಜಕೀಯವಾಗಿ ಕೂಡ ಯಡಿಯೂರಪ್ಪ ಅವರು ವಿಜಯೇಂದ್ರಗೆ ಮಾದರಿ ಆಗುತ್ತಾರೆ ಎಂಬ ನಿರೀಕ್ಷೆ ಇದೆ. ಯಾಕಂದ್ರೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದೇ ಯಡಿಯೂರಪ್ಪ. ಇದರ ಬಗ್ಗೆ ಅನುಮಾನ ಬೇಡ ಅನ್ನೋದು ಅವರ ಅಭಿಮಾನಿಗಳು & ಬೆಂಬಲಿಗರ ಮಾತಾಗಿದೆ. ಹೀಗಾಗಿ ತಂದೆ ಹಾದಿಯಲ್ಲಿ ನಡೆದು, ಕರ್ನಾಟಕದಲ್ಲಿ ಬಿಜೆಪಿಗೆ ಮತ್ತೆ ಅಂತಹದ್ದೇ ಶಕ್ತಿ ತುಂಬುವ ಜವಾಬ್ದಾರಿ ವಿಜಯೇಂದ್ರ ಅವರ ಹೆಗಲ ಮೇಲಿದೆ.
ಒಟ್ನಲ್ಲಿ ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿಗೆ ಸಾರಥಿಯಾಗಿ ಆಯ್ಕೆಯಾಗುವ ಮೂಲಕ, ಮತ್ತೆ ಕರ್ನಾಟಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಅದರಲ್ಲೂ ಲೋಕಸಭೆಯ ಚುನಾವಣೆಗೆ ಕೌಂಟ್‌ಡೌನ್ ಶುರುವಾದ ಸಮಯದಲ್ಲೇ, ಕಾಂಗ್ರೆಸ್‌ಗೆ ಬಲವಾದ ಎದುರಾಳಿ ಸಿಕ್ಕಂತಾಗಿದೆ. ಹೀಗಾಗಿ ಕರ್ನಾಟಕ ಲೋಕಸಭೆ ಅಖಾಡ ರಂಗೇರಿದೆ, ಗೆಲುವಿಗಾಗಿ ಎರಡೂ ಪಕ್ಷಗಳ ನಡುವೆ ತಿಕ್ಕಾಟ ಜೋರಾಗುವುದು ಪಕ್ಕಾ ಆಗಿದೆ. ಇದೇ ಕಾರಣಕ್ಕೆ ಅಸಲಿ ಆಟಕ್ಕೆ ಈಗ ರಣಕಹಳೆ ಮೊಳಗಿದೆ.












Click it and Unblock the Notifications