BY Vijayendra: ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಶಕ್ತಿ ಹಾಗೂ ದೌರ್ಬಲ್ಯಗಳೇನು?
ಬೆಂಗಳೂರು, ನವೆಂಬರ್10: ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಕಮಲ ಪಾಳಯದಲ್ಲಿ ಅಸಮಾಧಾನದ ಕಿಚ್ಚು ಹಾಗೂ ಬಹಿರಂಗ ಹೇಳಿಕೆಯೂ ಹೆಚ್ಚಾಗಿದ್ದು, ಇದೀಗ ಬಿಜೆಪಿ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ರಾಜ್ಯ ಬಿಜೆಪಿ ಆನೆ ಬಲ ಬಂದಂತಾಗಿದೆ.
ಹೌದು, ನೂತನ ರಾಜ್ಯಾಧ್ಯಕ್ಷರಾಗಿರುವ ಬಿ ವೈ ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಗಾದಿಯ ಪಯಣ ತಂದೆ ಬಿಎಸ್ ಯಡಿಯೂರಪ್ಪನವರು ತುಳಿದ ಹಾದಿಯಷ್ಟು ಕಠಿಣವಾಗಿಲ್ಲದೇ ಇರಬಹುದು. ಆದರೆ, ಪಕ್ಷದಲ್ಲಿನ ಹಿರಿಯ ನಾಯಕರನ್ನ ಒಟ್ಟಾಗಿ ತೆಗೆದುಕೊಂಡು ಹೋಗುವುದು ಅಪ್ಪನ ಮಾರ್ಗದರ್ಶನದಲ್ಲಿ ಸುಲಭವಾಗಬಹುದು. ಹಾಗಾದ್ರೆ, ನೂತನ ರಾಜ್ಯಾಧ್ಯಕ್ಷರಾಗಿರುವ ಬಿ ವೈ ವಿಜಯೇಂದ್ರ ಅವರ ಶಕ್ತಿಗಳೇನು ಹಾಗೂ ದೌರ್ಬಲ್ಯಗಳೇನು ಇಲ್ಲಿದೆ ನೋಡಿ.

ಸಂಘಟನಾ ಚತುರ
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರು ಪಕ್ಷದ ಕಾರ್ಯಕರ್ತರಾಗಿ ಪಕ್ಷದ ಉಪಾಧ್ಯಕ್ಷರಾಗಿ, ಹಲವು ಉಪ ಚುನಾವಣೆಯಲ್ಲಿ ಮತ್ತು ಚುನಾವಣೆಗಳು ಸೇರಿದಂತೆ ಮಹತ್ವದ ಟಾಸ್ಕ್ ನಿರ್ವಹಿಸುವಲ್ಲಿ ಬಿಜೆಪಿ ಹೈಕಮಾಂಡ್‌ನಿಂದಲೂ ಭೇಷ್ ಎನಿಸಿಕೊಂಡಿದ್ದಾರೆ.
ಅಲ್ಲದೇ, ಯುಡಿಯೂರಪ್ಪ ನಂತರ, ತಾನೊಬ್ಬ ಅವರಿಗೆ ಸಮರ್ಥ ಉತ್ತರಾಧಿಕಾರಿ ಎಂಬುದನ್ನು ನಿರೂಪಿಸಿದ್ದಾರೆ. ಅದರ ಪರಿಣಾಮವೇ ಈಗ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಯುವ ಸಮುದಾಯವನ್ನ ಒಗ್ಗೂಡಿಸುವ ನಿಟ್ಟಿ ಹಾಗೂ ಸಂಘಟನಾ ಚತುರಗೊಳಿಸುವ ವಿಜಯೇಂದ್ರ ಅವರಿಗೆ ದೊಡ್ಡ ಶಕ್ತಿ ಇದೆ.
ಯುವಕರನ್ನ ಸೆಳೆಯುವ ಚಾಣಕ್ಷತನ
ಯುವ ನಾಯಕತ್ವದ ಬಗ್ಗೆ ಬಿಜೆಪಿ ಹೈಕಮಾಂಡ್ ಒಲವು ವ್ಯಕ್ತಪಡಿಸಿದ್ದು, ವಿಜಯೇಂದ್ರ ಅವರಿಗೆ ಮಣೆ ಹಾಕಿದೆ. ಈ ಹಿಂದೆಯೂ ಬಿಜೆಪಿ ಯುವ ಮೋರ್ಚಾದಲ್ಲಿ ವಿಜಯೇಂದ್ರ ಅವರಿಗೆ ತಮ್ಮದೇ ವರ್ಚಸ್ಸು ಹೆಚ್ಚಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯುವ ಸಮುದಾಯವನ್ನ ಸೆಳೆಯುವ ನಿಟ್ಟಿನಲ್ಲಿ ವಿಜಯೇಂದ್ರ ಅವರು ಚಾಣಕ್ಷತನವನ್ನ ಹೊಂಡಿದ್ದಾರೆ.
ಹಿರಿಯರನ್ನ ಒಗ್ಗೂಡಿಸುವ ಶಕ್ತಿ
ಮಾಜಿ ಮುಖ್ಯಮಂತ್ರಿ ಹಾಗೂ ಲಿಂಗಾಯತ ಸಮುದಾಯದ ಹಿರಿಯ ನಾಯಕರಾದ ಬಿ ಎಸ್ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಹಿರಿಯರನ್ನ ಒಗ್ಗೂಡಿಸುವಂತ ಶಕ್ತಿಯನ್ನ ನೂತನ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೇ ಹಿರಿಯ ನಾಯಕರ ನಡುವಿನ ಅಸಮಾಧಾನವನ್ನ ಶಮನ ಮಾಡುವಲ್ಲಿ ವಿಜಯೇಂದ್ರ ಅವರಿಗೆ ಬಿಎಸ್ ಯಡಿಯೂರಪ್ಪ ಅವರ ಮಾತ್ರ ಬಹುಮುಖ್ಯವಾಗಿದೆ.
ಜಾತ್ಯಾತೀತ ನಾಯಕ
ನೂತನವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜಯೇಂದ್ರ ಅವರು ತಂದೆಯಂತೆ ಜಾತ್ಯಾತೀತ ನಾಯಕರಾಗಿದ್ದಾರೆ. ಎಲ್ಲಾ ಸಮುದಾಯದ ನಾಯಕರೊಂದಿಗೂ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಉತ್ತಮ ಸಂಬಂಧವನ್ನ ಹೊಂದಿದ್ದು, ಎಲ್ಲಾ ಸಮುದಾಯದ ನಾಯಕರನ್ನ ಒಗ್ಗೂಡಿಸಿಕೊಂಡು ಹೋಗುವ ಸಮರ್ಥ್ಯವನ್ನ ಬಿ ವೈ ವಿಜಯೇಂದ್ರ ಹೊಂದಿದ್ದಾರೆ.
ತಂದೆಯ ಮಾರ್ಗದರ್ಶನ
ಮಾಜಿ ಮುಖ್ಯಮಂತ್ರಿ ಲಿಂಗಾಯತ ಸಮುದಾಯದ ನಾಯಕರಾಗಿರುವ ಯಡಿಯೂರಪ್ಪ ಅವರ ಮಾರ್ಗದರ್ಶನವೇ ಬಿ ವೈ ವಿಜಯೇಂದ್ರ ಅವರಿಗೆ ದೊಡ್ಡ ಶಕ್ತಿಯಾಗಿದೆ. ತಂದೆಯಿಂದ ಬಂದ ಪಕ್ಷ ಸಂಘಟನೆ ಗುಣ, ಮಾರ್ಗದರ್ಶನ, ರಾಜಕೀಯ ಚಾಣಕ್ಷತನವೇ ಬಿ ವೈ ವಿಜಯೇಂದ್ರ ಅವರಿಗೆ ದೊಡ್ಡ ಶಕ್ತಿಯಾಗಲಿದೆ.
ಲಿಂಗಾಯತರನ್ನ ಒಗ್ಗೂಡಿಸುವ ಶಕ್ತಿ
2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಲಿಂಗಾಯತರನ್ನ ಕಡೆಗಣಿಸಲಾಗಿದೆ ಎಂಬ ಮಾತು ಕಮಲ ಪಾಳಯದಲ್ಲಿ ಜೋರಾಗಿ ಸದ್ದು ಮಾಡಿತ್ತು, ಇದೀಗ ಲಿಂಗಾಯತ ಸಮುದಾಯದ ನಾಯಕ ಬಿ ವೈ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷರನ್ನ ನೇಮಕ ಮಾಡಿದ್ದು, ಮತ್ತೆ ಲಿಂಗಾಯತ ಸಮುದಾಯವನ್ನ ಒಗ್ಗೂಡಿಸುವ ಶಕ್ತಿಯನ್ನ ಬಿ ವೈ ವಿಜಯೇಂದ್ರ ಹೊಂದಿದ್ದಾರೆ ಎನ್ನಲಾಗಿದೆ.
ಬಿ ವೈ ವಿಜಯೇಂದ್ರ ಅವರ ದೌರ್ಜಲ್ಯಗಳೇನು?
ನೂತನವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಹೈಕಮಾಂಡ್ ದೊಡ್ಡ ಜವಾಬ್ದಾರಿಯನ್ನ ನೀಡಿದ್ದು, ಹಿರಿಯ ನಾಯಕರ ಮುನಿಸಿಗೆ ಕಾರಣವಾಗಿದೆ. ಹೀಗಾಗಿ ಪಕ್ಷದಲ್ಲಿರುವ ಬಸವನಗೌಡ ಪಾಟೀಲ್ ಯತ್ನಾಳ್, ಸಿ ಟಿ ರವಿ, ಸುನೀಲ್ ಕುಮಾರ್, ವಿ ಸೋಮಣ್ಣ ಹಾಗೂ ಬಿ ಎಲ್ ಸಂತೋಷ್ ಅವರನ್ನ ಒಗ್ಗೂಡಿಸಿಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ. ಅಲ್ಲದೇ ರಾಜ್ಯಾಧ್ಯಕ್ಷರಾದರೂ ಬಿ ವೈ ವಿಜಯೇಂದ್ರ ಅವರಿಗೆ ಸ್ವತಂತ್ರವಾಗಿ ಯಾರ ಒತ್ತಡವೂ ಇಲ್ಲದೇ ಕೆಲಸ ಮಾಡುವ ಅವಕಾಶಗಳು ಸಿಗುತ್ತಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಏಕೆಂದರೆ ಹಲವು ಹಿರಿಯ ನಾಯಕರ ಮಾತನ್ನು ಸಹ ವಿಜಯೇಂದ್ರ ಅವರು ಕೇಳುವ ಪರಿಸ್ಥಿತಿ ಎದುರಾಗಲಿದೆ.












Click it and Unblock the Notifications