ಉತ್ತರ ಕರ್ನಾಟಕದಲ್ಲಿ ಯತ್ನಾಳ್ ನೇತೃತ್ವದಲ್ಲಿ ಪಾದಯಾತ್ರೆ, ಮೌನ ಮುರಿದ ವಿಜಯೇಂದ್ರ!
ಬೆಂಗಳೂರು, ಆಗಸ್ಟ್ 13: ಮುಡಾ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬೆಂಗಳೂರಿನಿಂದ ಮೈಸೂರಿಗೆ ಹಮ್ಮಿಕೊಂಡಿದ್ದ 'ಮೈಸೂರು ಚಲೋ' ಪಾದಯಾತ್ರೆ ಯಶಸ್ವಿಯಾಗಿದೆ. ಈಗ ಉತ್ತರ ಕರ್ನಾಟಕದಲ್ಲಿ ಭಾಗದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಈ ಕುರಿತು ಚರ್ಚೆಗಳು ಬಿಜೆಪಿ ಬಣವಾಗಿ ಭಾಗವಾಗಿದೆ ಎಂದು ಕಾಂಗ್ರೆಸ್ ಟೀಕೆ ಮಾಡುತ್ತಿದೆ.
ಮಂಗಳವಾರ ಹರ್ ಘರ್ ತಿರಂಗಾ ಅಭಿಯಾನಕ್ಕೆ ಬೆಂಗಳೂರಿನ ಶಿವಾಜಿನಗರದ ವಸಂತನಗರ ವಾರ್ಡ್‌ನ ಬೂತ್ ನಂ 44ರ ಅಧ್ಯಕ್ಷರಾದ ಎಂ. ಸಾಗರ್ ನಿವಾಸದಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಚಾಲನೆ ನೀಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಪಾದಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿದರು.

"ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಕೆಲವು ಬಿಜೆಪಿ ಶಾಸಕರು ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಯತ್ನಾಳ್ ಮತ್ತು ಇತರ ಶಾಸಕರು ಮಾಡಬೇಕೆಂದಿರುವ ಪಾದಯಾತ್ರೆಗೆ ನನ್ನ ತರಕಾರು ಇಲ್ಲ" ಎಂದು ಹೇಳಿದರು.
ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ: ಬಿ. ವೈ. ವಿಜಯೇಂದ್ರ ಮಾತನಾಡಿ, "ಪಕ್ಷದ ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಪ್ರಯತ್ನ ಮಾಡಿಕೊಂಡು ಬಂದಿದ್ದೇನೆ. ಯತ್ನಾಳ್ ಅವರ ಉದ್ದೇಶಿತ ಪಾದಯಾತ್ರೆಗೆ ತನ್ನದೇನು ತಕರಾರಿಲ್ಲ" ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
"ಯತ್ನಾಳ್ ಮತ್ತು ಇತರ ಶಾಸಕರ ಪಾದಯಾತ್ರೆ ಪಕ್ಷದ ಸಂಘಟನೆಗೆ ಪೂರಕವಾಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅವರು ವರಿಷ್ಠರ ಅನುಮಿತಿ ಪಡದೇ ಪಾದಯಾತ್ರೆ ನಡೆಸಬೇಕು" ಎಂದು ಬಿ. ವೈ. ವಿಜಯೇಂದ್ರ ತಿಳಿಸಿದರು.
ಸಚಿವರ ರಾಜೀನಾಮೆ, ತನಿಖೆ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಬಳಿಕ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಸುಮಾರು 94.73 ಕೋಟಿ ಹಣ ಅಕ್ರಮ ಹಣ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿತ್ತು.
ಈ ಹಗರಣದ ಸಂಬಂಧ ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಅವರನ್ನು ಈ ಪ್ರಕರಣದಲ್ಲಿ ಇಡಿ ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗ ಪ್ರತಿಪಕ್ಷವಾದ ಬಿಜೆಪಿ ಈ ಹಗರಣ ಮುಂದಿಟ್ಟುಕೊಂಡು ಬಳ್ಳಾರಿಯಲ್ಲಿ ಪಾದಯಾತ್ರೆ ನಡೆಸಲಿದೆ ಎಂಬುದು ಮಾಹಿತಿ. ಈ ಪಾದಯಾತ್ರೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆಯಲಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬೆಂಗಳೂರಿನಿಂದ ಮೈಸೂರಿಗೆ ಹಮ್ಮಿಕೊಂಡಿದ್ದ 'ಮೈಸೂರು ಚಲೋ' ಪಾದಯಾತ್ರೆಯಲ್ಲಿ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬುದು ಆರೋಪ. ಆದ್ದರಿಂದ ಕೆಲವು ಬಿಜೆಪಿ ನಾಯಕರು, ಶಾಸಕರು ಬೆಳಗಾವಿಯಲ್ಲಿ ಕಳೆದ ವಾರ ಸಭೆಯನ್ನು ನಡೆಸಿದ್ದರು. ಈ ಸಭೆಯಲ್ಲಿಯೇ ಬಳ್ಳಾರಿ ಪಾದಯಾತ್ರೆಯ ಯೋಜನೆ ರೂಪಿಸಲಾಗಿದೆ.
ವಾಲ್ಮೀಕಿ ಹಗರಣದಲ್ಲಿ ರಾಜೀನಾಮೆ ನೀಡಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಸಚಿವ ಬಿ. ನಾಗೇಂದ್ರ ಬಳ್ಳಾರಿಯವರು. ಆದ್ದರಿಂದ ಅವರ ತವರು ಜಿಲ್ಲೆಯಲ್ಲಿಯೇ ಪಾದಯಾತ್ರೆ ನಡೆಸುವುದು. ಈ ಮೂಲಕ ಉತ್ತರ ಕರ್ನಾಟಕ ಭಾಗದ ಬಿಜೆಪಿ ನಾಯಕರ ಶಕ್ತಿ ಪ್ರದರ್ಶನ ಮಾಡುವುದು ಬಿಜೆಪಿ ನಾಯಕರ ಆಲೋಚನೆಯಾಗಿದೆ. ಇದನ್ನು ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಸದಾ ಟೀಕೆ ಮಾಡುವ ಬಸನಗೌಡ ಯತ್ನಾಳ್ ನೇತೃತ್ವದಲ್ಲಿ ನಡೆಸುವುದು ಕೆಲವು ಶಾಸಕರು ಚಿಂತನೆಯಾಗಿದೆ.












Click it and Unblock the Notifications