ವಹಿಸಿರುವುದು ಅಧಿಕಾರವಲ್ಲ, ಹೊಣೆಗಾರಿಕೆ; ವಿಜಯೇಂದ್ರ
ಬೆಂಗಳೂರು, ನವೆಂಬರ್ 15; ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಶಿಕಾರಿಪುರದ ಶಾಸಕ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಅಧಿಕಾರ ಸ್ವೀಕಾರ ಮಾಡಿದರು. ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕಾರ ಹಸ್ತಾಂತರ ಮಾಡಿದರು.
ಮಲ್ಲೇಶ್ವರದ ಬಿಜೆಪಿ ಕಛೇರಿಯಲ್ಲಿ ಬುಧವಾರ ಬಿ. ವೈ. ವಿಜಯೇಂದ್ರ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಿತು. ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ. ವಿ. ಸದಾನಂದ ಗೌಡ ಸೇರಿದಂತೆ ಪಕ್ಷದ ಹಲವು ನಾಯಕರು ಉಪಸ್ಥಿತರಿದ್ದರು.

ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಯಜೇಂದ್ರ ಪೋಸ್ಟ್ ಹಾಕಿದ್ದಾರೆ. 'ವಹಿಸಿರುವುದು ಅಧಿಕಾರವಲ್ಲ ಹೊಣೆಗಾರಿಕೆ ಎಂದರಿತು ಕಾರ್ಯಕರ್ತನಾಗಿ ಹೆಜ್ಜೆ ಇಡಲಿದ್ದೇನೆ' ಎಂದು ಭರವಸೆ ನೀಡಿದ್ದಾರೆ.
ವಿಜಯೇಂದ್ರ ಪೋಸ್ಟ್ ವಿವರ
ಮಾನ್ಯ ನಳಿನ್ ಕುಮಾರ್ ಕಟೀಲ್ ಅವರಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ಸ್ವೀಕರಿಸಿದ ಈ ಅಮೃತ ಘಳಿಗೆಯಲ್ಲಿ 'ಜನ ಸಂಘದ ದಿನಗಳು ತ್ಯಾಗ ಮೆರೆದ ಹಿರಿಯರು,
ಪರಿಶ್ರಮದ ಕಾರ್ಯಕರ್ತರು ಕಣ್ಣ ಮುಂದೆ ಹಾದು ಹೋದರು'.
ದಿಗ್ಗಜರು, ಪುಣ್ಯವಂತರು ಸೇವೆ ಸಲ್ಲಿಸಿದ ಸಾಲಿನಲ್ಲಿ ನಾನೂ ಸೇರ್ಪಡೆಯಾಗುವ ಸುಯೋಗ ಕಲ್ಪಿಸಿದ ಪಕ್ಷದ ವರಿಷ್ಠರ ತೀರ್ಮಾನ ನೆನೆದು ಭಾವುಕನಾದೆನು, ಒಬ್ಬ ಕಾರ್ಯಕರ್ತನಾಗಿ ಹೆಮ್ಮೆ ಎನಿಸಿತು, ಜವಾಬ್ದಾರಿ ಎಚ್ಚರಿಸಿತು.
ವರಿಷ್ಠರ ನಿರೀಕ್ಷೆ, ಕಾರ್ಯಕರ್ತರ ಅಪೇಕ್ಷೆ ಗುರಿ ತಲುಪುವ ನಿಟ್ಟಿನಲ್ಲಿ 'ವಹಿಸಿರುವುದು ಅಧಿಕಾರವಲ್ಲ ಹೊಣೆಗಾರಿಕೆ' ಎಂದರಿತು ಕಾರ್ಯಕರ್ತನಾಗಿ ಹೆಜ್ಜೆ ಇಡಲಿದ್ದೇನೆ, ಪಕ್ಷ ಸದೃಢಗೊಳಿಸಲು ಪಕ್ಷದ ಪ್ರತಿಯೊಬ್ಬ ಪ್ರಮುಖರೂ ನನ್ನೊಂದಿಗೆ ಹೆಗಲು ಕೊಡಲು ಮುಂದಾಗಿರುವುದು ನನ್ನಲ್ಲಿ ಅಮಿತೋತ್ಸಾಹ ತುಂಬಿದೆ.
ಮಾನ್ಯ ಪ್ರಧಾನಿ ನರೇಂದ್ರ ಮೋದಿ ಜೀ, ರಾಷ್ಟ್ರೀಯ ಅಧ್ಯಕ್ಷರಾದ ಮಾನ್ಯ ಜೆಪಿ ನಡ್ಡಾಜೀ, ಗೃಹಸಚಿವರಾದ ಮಾನ್ಯ ಅಮಿತ್ ಶಾ ಜೀ ಹಾಗೂ ಪೂಜ್ಯ ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಾನ್ಯ ಬಿ. ಎಲ್. ಸಂತೋಷ್ ಜೀ, ಪಕ್ಷದ ಹಿರಿಯರೆಲ್ಲರ ಆಶೀರ್ವಾದ, ಮಾರ್ಗದರ್ಶನ, ಸಹಕಾರದೊಂದಿಗೆ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ನವ ಚೈತನ್ಯ ತುಂಬಿ 2024ರ ಲೋಕಸಭಾ ಚುನಾವಣೆಯಲ್ಲಿ 2019ರ ಚುನಾವಣೆಯ ಫಲಿತಾಂಶ ಮತ್ತೆ ಮರುಕಳಿಸಿ ಮಗದೊಮ್ಮೆ ಮೋದಿ ಜೀ ಪ್ರಧಾನಿಯಾಗಿ ಭಾರತ ಪ್ರಜ್ವಲಿಸಲು 'ಕರುನಾಡ ಜಯದ ಕಿರೀಟ' ಸಮರ್ಪಿಸಬೇಕೆಂದು ಛಲ ಹೊತ್ತ ಕಾರ್ಯಕರ್ತರ ಪಡೆಯೊಂದಿಗೆ ಸಂಕಲ್ಪ ತೊಟ್ಟಿರುವೆ. ಈ ನಿಟ್ಟಿನಲ್ಲಿ ರಾಜ್ಯದ ಸಮಸ್ತ ಜನತೆಯ ಕೃಪಾಶೀರ್ವಾದ ಬೇಡುವೆ.
ಪೊಲೀಸ್ ಎಸ್ಕಾರ್ಟ್; ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪೊಲೀಸ್ ಭದ್ರತೆ, ಎಸ್ಕಾರ್ಟ್ ಸೌಲಭ್ಯವನ್ನು ನೀಡಿ ಆದೇಶ ಹೊರಡಿಸಿದೆ. ಮೂವರು ಪೊಲೀಸ್ ಸಿಬ್ಬಂದಿ ಇರುವ ಬೆಂಗಾವಲು ವಾಹನ ಬಿ. ವೈ. ವಿಜಯೇಂದ್ರರ ಭದ್ರತೆಯನ್ನು ನೋಡಿಕೊಳ್ಳಲಿದೆ.
47 ವರ್ಷದ ಬಿ. ವೈ. ವಿಜಯೇಂದ್ರ 2023ರ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ 81,810 ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೂರು ವರ್ಷಗಳ ಹಿಂದೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದ ಬಿ. ವೈ. ವಿಜಯೇಂದ್ರರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿ ಶುಕ್ರವಾರ ಆದೇಶ ಹೊರಡಿಸಿದ್ದರು. ಇಂದು ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಕರ್ನಾಟಕ ಬಿಜೆಪಿಯ ಯುವ ನಾಯಕ ಬಿ. ವೈ. ವಿಜಯೇಂದ್ರ ಪಕ್ಷ ಸಂಘಟನೆಯಲ್ಲಿ ಚುರುಕಾಗಿದ್ದಾರೆ. ಎಬಿವಿಪಿಯಲ್ಲಿ ಗುರುತಿಸಿಕೊಂಡು ಬಳಿಕ ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಅವರು ಕೆಲಸ ಮಾಡಿದ್ದರು.
ಬಳಿಕ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಹಲವು ಉಪ ಚುನಾವಣೆ ಹಾಗೂ ಪಕ್ಷ ಸಂಘಟನೆ ಸಂಬಂಧ ಹೈಕಮಾಂಡ್ ನೀಡಿದ್ದ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಪಕ್ಷದ ಕಾರ್ಯಕರ್ತರ ನೆಚ್ಚಿನ ನಾಯಕನಿಗೆ ಈಗ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದೆ.












Click it and Unblock the Notifications