"ಮಹಾಂತೇಶ್ ಬೀಳಗಿ ಕುಟುಂಬಸ್ಥರಿಗೆ ಕ್ಲಾಸ್-1 ಅಧಿಕಾರಿ ಹುದ್ದೆ ನೀಡಿ"
ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ದಕ್ಷ ಹಾಗೂ ಪ್ರಾಮಾಣಿಕ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಇತ್ತೀಚೆಗೆ ಭೀಕರ ಕಾರು ಅಪಘಾತದಲ್ಲಿ ನಿಧನರಾದರು. ಅವರ ನಿಧನಕ್ಕೆ ಇಡೀ ಕರ್ನಾಟಕ ಕಂಬನಿ ಮಿಡಿದಿದೆ. ಇದೀಗ ಮಹಾಂತೇಶ್ ಬೀಳಗಿಯವರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಕ್ಲಾಸ್-1 ಸರ್ಕಾರಿ ಅಧಿಕಾರಿ ಹುದ್ದೆ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಹಿರಿಯ ಎಐಎಸ್ ಅಧಿಕಾರಿ ದಿವಂಗತ ಮಹಾಂತೇಶ್ ಬೀಳಗಿಯವರ ಅಕಾಲಿಕ ನಿಧನದಿಂದ ನೊಂದಿರುವ ಕುಟುಂಬದ ಕಣ್ಣೀರು ಒರೆಸಿ, ಸಾಂತ್ವನ ಹೇಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಈ ಹಿಂದೆ ಇಂತಹ ಸಂದರ್ಭಗಳಲ್ಲಿ ಅಗಲಿದ ಅಧಿಕಾರಿಗಳ ಕುಟುಂಬ ವರ್ಗದವರಿಗೆ ಅಧಿಕಾರಿ ಹುದ್ದೆಯನ್ನು ನೀಡಿದ ಹಲವು ನಿದರ್ಶನಗಳಿವೆ. ಅದಕ್ಕೆ ಅನುಗುಣವಾಗಿ ಶ್ರೀಯುತ ಬೀಳಗಿಯವರ ಕುಟುಂಬದ ಸದಸ್ಯರೊಬ್ಬರಿಗೆ ಕ್ಲಾಸ್-1 ಅಧಿಕಾರಿ ಹುದ್ದೆ ನೀಡುವಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದೇನೆ ಎಂದಿದ್ದಾರೆ.

ಮಹಾಂತೇಶ್ ಬೀಳಗಿಯವರು ಓರ್ವ ಸರ್ಕಾರಿ ಅಧಿಕಾರಿಯಾಗಷ್ಟೇ ಕೆಲಸ ನಿರ್ವಹಿಸದೆ ಬಡವರ, ಅಶಕ್ತರ ಅಭಿವೃದ್ಧಿಗಾಗಿ ಅಂತಃಕರಣದಿಂದ ಜನಸೇವೆಗೈದ ಆದರ್ಶ ಅಧಿಕಾರಿಯಾಗಿದ್ದರು. ಮಹಾಂತೇಶ್ ಬೀಳಗಿಯವರ ಆದರ್ಶಪ್ರಾಯ ಕಾರ್ಯನಿರ್ವಹಣೆ, ಸೇವೆಗಳ ಹಿನ್ನಲೆಯಲ್ಲಿ, ಇದನ್ನು ವಿಶೇಷ ಪ್ರಕರಣವೆಂದು ರಾಜ್ಯ ಸರ್ಕಾರ ಪರಿಗಣಿಸಬೇಕು. ರಾಜ್ಯ ಸರ್ಕಾರ ಶೀಘ್ರದಲ್ಲಿ ಪೂರಕವಾಗಿ ಮಾನವೀಯ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸುತ್ತೇನೆ ಎಂದು ವಿಜಯೇಂದ್ರ ಮನವಿ ಮಾಡಿದ್ದಾರೆ.
ರಾಮದುರ್ಗದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಭೀಕರ ಕಾರು ಅಪಘಾತ ಸಂಭವಿಸಿ ಮಹಾಂತೇಶ್ ಬೀಳಗಿ ಅವರು ಇಹಲೋಕ ತ್ಯಜಿಸಿದ್ದರು. ಅವರು ಬೆಸ್ಕಾಂ ಎಂಡಿ ಸಹ ಆಗಿದ್ದರು, ಜೊತೆಗೆ ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು. ಜನಪರ ಕಾರ್ಯಗಳ ಮೂಲಕ ಹೆಸರುವಾಸಿಯಾಗಿದ್ದ ದಕ್ಷ ಅಧಿಕಾರಿಯ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಪ್ರಮುಖರು ಕಂಬನಿ ಮಿಡಿದಿದ್ದರು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ 51 ವರ್ಷದ ಮಹಾಂತೇಶ್ ಬೀಳಗಿ ಕಡುಬಡತನದಲ್ಲಿ ಬೆಳೆದರು. ಬಾಲ್ಯದಲ್ಲಿ ಅವರ ಪೋಷಕರು ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಿಸುತ್ತಿದ್ದರು. ತಂದೆ ಮೃತಪಟ್ಟ ಬಳಿಕ ತಾಯಿ ರೊಟ್ಟಿ ವ್ಯಾಪಾರ ಮಾಡಿ ನಾಲ್ಕು ಜನ ಮಕ್ಕಳನ್ನ ತಾಯಿ ಸಾಕಿದ್ದರು. ಕಷ್ಟದ ಜೀವನದಲ್ಲಿ ಛಲ ಬಿಡದೇ ಓದಿ ಕೆಎಎಸ್‌ನಲ್ಲಿ ನಾಲ್ಕನೇ ರ್ಯಾಂಕ್ ಪಡೆದು ನಂತರ ಐಎಎಸ್‌ಗೆ ಬಡ್ತಿ ಹೊಂದಿದ್ದರು.
ಯಾವುದೇ ಮನುಷ್ಯ ಮನಸ್ಸು ಮಾಡಿದ್ರೆ ಏನು ಬೇಕಾದರೂ ಮಾಡಬಹುದು, ಕಷ್ಟಪಟ್ಟು ಓದಿದರೆ ಒಂದಲ್ಲ ಒಂದು ದಿನ ದೊಡ್ಡ ಯಶಸ್ಸು ಸಿಕ್ಕೇ ಸಿಗುತ್ತೆ ಎಂದು ವಿದ್ಯಾರ್ಥಿಗಳಿಗೆ ಯಶಸ್ಸಿನ ಪಾಠ ಹೇಳಿಕೊಡುತ್ತಿದ್ದರು. ತಮ್ಮ ಕಷ್ಟದ ಬದುಕಿನಲ್ಲೂ ಶ್ರಮದಿಂದ ಓದಿ ಉನ್ನತ ಹುದ್ದೆಗೆ ಏರಿದ್ದ ಅವರು ತಮ್ಮ ಕೆಲಸಗಳಿಂದಲೇ ಅಪಾರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ನಾವು ಈ ಸಮಾಜದಿಂದ ಅನೇಕವುಗಳನ್ನ ಪಡೆದಿದ್ದೇವೆ. ಹೀಗಾಗಿ ನಾವು ಸಮಾಜಕ್ಕೆ ನಮ್ಮ ಕೈಲಾದಷ್ಟು ವಾಪಸ್ ಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದರು.












Click it and Unblock the Notifications