ಪ್ರಧಾನಿ ಹೇಗೆ ನಡೆದುಕೊಳ್ಳಬೇಕು ಅಂತ ಉಗ್ರಪ್ಪ, ರಾಮಪ್ಪ ಸೋಮಪ್ಪ ಕೇಳಿ ನಿರ್ಧಾರ ಮಾಡಲ್ಲ: ವಿಜಯೇಂದ್ರ ಗರಂ
ಬೆಂಗಳೂರು,ಡಿಸೆಂಬರ್ 19: ಪ್ರಧಾನಿಗಳ ಬಗ್ಗೆ ದೇಶದ ಪ್ರತಿಯೊಬ್ಬ ಪ್ರಜೆಯೂ ಅವರ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ಉಗ್ರಪ್ಪ, ರಾಮಪ್ಪ, ಸೋಮಪ್ಪನನ್ನು ಕೇಳಿ ತೀರ್ಮಾನ ಮಾಡುವುದಲ್ಲ. ಪ್ರಧಾನಿ ನಡವಳಿಕೆ ಬಗ್ಗೆ ಇವರು ಹೇಳಬೇಕಿಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ಖಾರವಾಗಿ ನುಡಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದ ಹಣಕಾಸಿನ ಪರಿಸ್ಥಿತಿ ಏನಾಗಿದೆ? ಈ ಸರಕಾರ ಅಧಿಕಾರಕ್ಕೆ ಬಂದು 6 ತಿಂಗಳಿನಲ್ಲಿ ಏನಾದರೂ ಒಂದು ಹೊಸ ಯೋಜನೆಯನ್ನು ರಾಜ್ಯಕ್ಕೆ ಕೊಟ್ಟಿದೆಯೇ? ರಾಜ್ಯದ ವಿಪಕ್ಷ ಶಾಸಕರನ್ನು ಬಿಟ್ಟರೂ ಆಡಳಿತ ಪಕ್ಷದ ಶಾಸಕರ ಪರಿಸ್ಥಿತಿ ಏನಾಗಿದೆ? ಎಂದು ಕೇಳಿದ ಅವರು, ಒಂದು ಬಿಡಿಗಾಸು ಅನುದಾನ ಸಿಗದೆ ಶಾಸಕರು ಗೌರವಯುತವಾಗಿ ಓಡಾಡದೆ ಇರುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು.

5 ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಜನತೆ ಗಮನಿಸಿದ್ದಾರೆ. ಕರ್ನಾಟಕ ರಾಜ್ಯ ಗೆದ್ದಮೇಲೆ ಕಾಂಗ್ರೆಸ್ ಪಕ್ಷದವರಿಗೆ ಇಡೀ ದೇಶದಲ್ಲಿ ಕಾಂಗ್ರೆಸ್ ಅಲೆ ಬೀಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಅವರ ನೆಚ್ಚಿನ ನಾಯಕ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿ ಆಗುತ್ತಾರೆ ಎಂಬ ಭ್ರಮೆ ಇತ್ತು.
ಛತ್ತೀಸಗಡ, ಮಧ್ಯಪ್ರದೇಶ, ರಾಜಸ್ಥಾನದ ಫಲಿತಾಂಶದಿಂದ ಕಾಂಗ್ರೆಸ್ ಪಕ್ಷಕ್ಕೆ ಮರ್ಮಾಘಾತ ಉಂಟಾಗಿದೆ. ಹತಾಶೆಯಿಂದ ಕಾಂಗ್ರೆಸ್ ಪಕ್ಷ ವಿವಿಧ ಹೇಳಿಕೆ ಕೊಡುತ್ತಿದೆ. ಲೋಕಸಭಾ ಅಧಿವೇಶನ ನಡೆಸಲು ಬಿಡುತ್ತಿಲ್ಲ. ಜನರ ಹಣ ಪೋಲಾಗುತ್ತಿದೆ ಎಂದು ಇನ್ನೊಂದು ಪ್ರಶ್ನೆಗೆ ಅವರು ಉತ್ತರ ಕೊಟ್ಟರು.
ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ಸರಕಾರದ ಕಳೆದ 6 ತಿಂಗಳ ಬೆಳವಣಿಗೆಗಳಿಂದ ಆ ಪಕ್ಷದ ಕಾರ್ಯಕರ್ತರಲ್ಲಿ ಹತಾಶ ಮನೋಭಾವನೆ ಸೃಷ್ಟಿಗೆ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕರಾದ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ದಿನೇದಿನೇ ರಾಜ್ಯ ಸರಕಾರದ ವೈಫಲ್ಯಗಳು ಬೆಳಕಿಗೆ ಬರುತ್ತಿವೆ. ಬೆಳಗಾವಿಯಲ್ಲಿ ಪರಿಶಿಷ್ಟ ಮಹಿಳೆ ವಿವಸ್ತ್ರಗೊಳಿಸಿದ ಘಟನೆ, ಮಾಲೂರಿನ ಘಟನೆಗಳು ಕಪ್ಪು ಚುಕ್ಕಿಯಂತಿವೆ. ಜೊತೆಗೇ ನಮ್ಮ ಹಿರಿಯರು ಮತ್ತು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರ ಚಿತ್ರದುರ್ಗದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ನುಗ್ಗಿ ಗಲಾಟೆ ಮಾಡಿದ್ದಾರೆ; ಇದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ತಾಳ್ಮೆ ಕಳಕೊಳ್ಳುವುದರ ನಿದರ್ಶನ ಎಂದು ವಿಶ್ಲೇಷಿಸಿದರು.
136 ಶಾಸಕರ ಸ್ಥಾನದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಜನರ ವಿಶ್ವಾಸ ಕಳಕೊಳ್ಳುತ್ತಿರುವ ಅರಿವು ಇದೀಗ ಅವರಿಗೆ ಗೊತ್ತಾಗುತ್ತಿದೆ. ಹಾಗಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಮುಖ್ಯಮಂತ್ರಿಗಳು ಇವತ್ತು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಪಾಪ ಪ್ರಧಾನಮಂತ್ರಿಗಳ ಅಪಾಯಿಂಟ್‍ಮೆಂಟ್ ಕೊಡಿಸ್ರಿ ಎಂದು ಮೊನ್ನೆ ಅಧಿವೇಶನದಲ್ಲಿ ಬೊಬ್ಬೆ ಹೊಡೆಯುತ್ತಿದ್ದರು. ರಾಜ್ಯದ ಪರವಾಗಿ ಸಿಎಂ ಮನವಿಯನ್ನೂ ಕೊಟ್ಟುಬಂದಿದ್ದಾರೆ.
ಮತ್ತೊಂದೆಡೆ ಮುಖ್ಯಮಂತ್ರಿಗಳು ಮನವಿ ಕೊಟ್ಟು ಅರ್ಧ ಗಂಟೆ ಆಗುವುದಕ್ಕಿಂತ ಮೊದಲೇ ಕಾಂಗ್ರೆಸ್ ವಕ್ತಾರ ಉಗ್ರಪ್ಪನವರು ಕೇಂದ್ರ ಸರಕಾರವನ್ನು ಟೀಕೆ ಮಾಡುತ್ತಿದ್ದಾರೆ. ಅಂದರೆ ಕಾಂಗ್ರೆಸ್ ಸರಕಾರ, ಮುಖಂಡರ ಉದ್ದೇಶ ಕೇಂದ್ರದ ಪರಿಹಾರ ಪಡೆಯುವುದೇ ಅಥವಾ ರಾಜಕಾರಣ ಮಾಡುವುದೇ ಎಂಬುದನ್ನು ಅವರು ತೀರ್ಮಾನ ಮಾಡಬೇಕು ಎಂದರು.












Click it and Unblock the Notifications