ಕಾಂಗ್ರೆಸ್ ಸರ್ಕಾರ ಇನ್ನೂ ಹಳೆಯ ಚಾಳಿ ಬಿಟ್ಟಿಲ್ಲ; ಇದು ಭ್ರಷ್ಟ ಸರ್ಕಾರ: ಬಿ ವೈ ವಿಜಯೇಂದ್ರ ವಾಗ್ದಾಳಿ
ಶಿವಮೊಗ್ಗ, ಆಗಸ್ಟ್ 17: ಕಾಂಗ್ರೆಸ್ ಸರ್ಕಾರ ಇನ್ನೂ ಹಳೆಯ ಚಾಳಿ ಬಿಟ್ಟಿಲ್ಲ. ಭ್ರಷ್ಟಾಚಾರ ತುಂಬಿತುಳುಕುತ್ತಿದೆ. ಇಂತಹ ಭ್ರಷ್ಟಾಚಾರ ನಾನೆಂದೂ ನೋಡಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಅವರು ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇಂತಹ ಭ್ರಷ್ಟಾಚಾರ ನಾನೆಂದೂ ನೊಡಿಲ್ಲ, ವೋಟ್ ಯಾಕೆ ಹಾಕಿದ್ದೆವೋ ಎಂಬ ಅನಿಸಿಕೆ ಜನರಿಗೆ ಬರುತ್ತಿದೆ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ಅನೇಕ ಆರೋಪಗಳನ್ನ ಮಾಡಿದ್ದಾರೆ ಎಂದು ಹೇಳಿದರು.

ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಬಾಯಲ್ಲಿ ಭ್ರಷ್ಟಾಚಾರದ ಮಾತು ಹೇಗೆ ಎಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಇದ್ದ ಹಾಗೆ. ಈ ಸರ್ಕಾರ ಬಂದು ಕೇವಲ ಮೂರು ತಿಂಗಳು ಕಳೆದಿದೆ. ಈಗಾಗಲೇ ಜನರು ಮನೆಮನೆಯಲ್ಲೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ.
ಅನೇಕ ಮಂತ್ರಿಗಳ ಹೆಸರು ಕೂಡ ತಳುಕು ಹಾಕಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಅವರ ಮೊದಲ ಅವಧಿ ಕೂಡ ಭ್ರಷ್ಟಾಚಾರದಿಂದ ಕೂಡಿತ್ತು. ಅಂದು ಕೂಡ ಭ್ರಷ್ಟಾಚಾರವನ್ನು ಸಮರ್ಥನೆ ಮಾಡಿಕೊಂಡಿದ್ದರು. ಇಂದು ಕೂಡ ಸಮರ್ಥನೆ ಮಾಡಿಕೊಂಡಿದ್ದಾರೆ. ಹೊಸ ಸರ್ಕಾರ ತನ್ನ ಜನಪ್ರಿಯತೆಯನ್ನು ಇಷ್ಟು ಬೇಗ ಕಳೆದುಕೊಂಡಿದೆ ಎಂಬುದನ್ನು ನೋಡಿದರೆ ನನಗೂ ಕೂಡ ಆಶ್ಚರ್ಯ ಆಗುತ್ತದೆ. ಅದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರದ ಸ್ವಯಂಕೃತ ಅಪರಾಧಗಳು ಎಂದು ಹೇಳಿದರು.
ಚುನಾವಣಾ ಪ್ರಚಾರದ ವೇಳೆ ಕೊಟ್ಟ ಭರವಸೆ ನೀಡಿದ್ದು ಅದನ್ನು ಈಡೇರಿಸಲು ಈಗ ಹರಸಾಹಸ ಪಡುತ್ತಿದೆ. 40 ರಿಂದ 50 ಸಾವಿರ ಕೋಟಿ ಹೆಚ್ಚುವರಿ ಸಾಲ ಮಾಡುವ ಪರಿಸ್ಥಿತಿ ಬಂದಿದೆ. ಆರ್ಥಿಕ ತಜ್ಞರ ಪ್ರಕಾರ 80,000 ಕೋಟಿಗೂ ಹೆಚ್ಚು ಸಾಲ ಮಾಡಲಿದ್ದಾರೆ. ಆರ್ಥಿಕ ಶಿಸ್ತು ಉಲ್ಲಂಘನೆ ಮಾಡಿ ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಜನ ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಮ್ಮ ಸರ್ಕಾರ ಇದ್ದಾಗ ಆರೋಪ ಮಾಡುತ್ತಿದ್ದರು. ಈಗ ಅವರು ಮಾತನಾಡುತ್ತಿಲ್ಲ. ಡಿಕೆ ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿದರು.
ಪುನಃ ವಾಪಾಸ್ ಪಡೆದುಕೊಂಡಿದ್ದಾರೆ. ಏನೇನು ನಡೆಯುತ್ತಿದೆಯೋ ನನಗಂತೂ ಅರ್ಥ ಆಗ್ತಿಲ್ಲ. ಸರ್ಕಾರಕ್ಕೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಮೊದಲು ಉಚಿತ ವಿದ್ಯುತ್ ಎಂದರು, ಮಳೆಯ ಅಭಾವದಿಂದ ವಿದ್ಯುತ್ ಕಡಿತ ಎನ್ನುತ್ತಿದ್ದಾರೆ. ಮಳೆಯಿಂದ ಜನ ಪರಿತಪಿಸುತ್ತಿದ್ದಾರೆ. ಲೋಡ್ ಶೆಡ್ಡಿಂಗ್ ಪುನಃ ಜನರಿಗೆ ಸಮಸ್ಯೆ ಉಂಟು ಮಾಡಿದೆ. ಶಿಕಾರಿಪುರದಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ತುಂಗಭದ್ರಾ ನದಿಯಿಂದ ನೀರು ತರುವ ಕೆಲಸವನ್ನು ಮಾಡಿದ್ದರು. ಆದರೆ ಈಗ ರೈತರಿಗೆ ನೀರು ಕೊಡಲು ಆಗುತ್ತಿಲ್ಲ. ಕಾರಣ ಲೋಡ್ ಶೆಡ್ಡಿಂಗ್. ಹೀಗಾಗಿ ಅನೇಕ ಯೋಜನೆಗಳು ವಿದ್ಯುತ್ ಅಭಾವದಿಂದ ನಿಲ್ಲಲಿವೆ.ಜನರೇ ಅವರಿಗೆ ಶಾಪ ಹಾಕ್ತಿದ್ದಾರೆ ಎಂದರು.
ಸಂಸದ ಬಿ ವೈ ರಾಘವೇಂದ್ರ ಅಪಾರ ಜನ್ನಮನ್ನಣೆ ಪಡೆದಿದ್ದಾರೆ. ವಿರೋಧ ಪಕ್ಷದವರೂ ಹಾಡಿ ಹೊಗಳ್ತಿದ್ದಾರೆ, ಕೈಂಕರ್ಯ ತೊಟ್ಟು ಶಿವಮೊಗ್ಗ ಅಭಿವೃದ್ಧಿಗೆ ಶ್ರಮಿಸ್ತಿದ್ದಾರೆ. ರಾಘಣ್ಣ ನಾಯಕತ್ವವನ್ನು ಎಲ್ಲರೂ ಒಪ್ಪಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ರಾಘಣ್ಣ ಸಂಸದರಾಗಬೇಕೆಂಬ ಅಪೇಕ್ಷೆ ಜನರದ್ದು ಎಂದು ಹೇಳಿದರು.











Click it and Unblock the Notifications