BY Vijayendra: ಲಿಂಗಾಯತ ವೋಟ್ ಬ್ಯಾಂಕ್ ಭದ್ರಪಡಿಸಲು ಬಿಜೆಪಿ ವರಿಷ್ಠರ ತಂತ್ರ? ಗೆದ್ದೇ ಬಿಟ್ಟರು ವಿಜಯೇಂದ್ರ!
ಕರ್ನಾಟಕ ಬಿಜೆಪಿಗೆ ಅಂತೂ ಹೊಸ ಅಧ್ಯಕ್ಷರ ಆಗಮನವಾಗಿದೆ, ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದ ಬಿ.ಎಸ್.ಯಡಿಯೂರಪ್ಪ ಈ ಮೂಲಕ ಗೆದ್ದು ಬೀಗಿದ್ದಾರೆ. ಅರೆರೆ ಕರ್ನಾಟಕದ ಬಿಜೆಪಿಗೆ ವಿಜಯೇಂದ್ರ ಅಧ್ಯಕ್ಷರಾಗಿ ಆಯ್ಕೆ ಆಗುವುದಕ್ಕೂ ಹಾಗೂ ಬಿಎಸ್‌ವೈ ಗೆಲುವಿಗೂ ಏನಪ್ಪಾ ಸಂಬಂಧ ಅಂದ್ರಾ? ಅದಕ್ಕೆ ಉತ್ತರ ಇಲ್ಲಿದೆ. ಇದರ ಜೊತೆಗೆ ಬಿಜೆಪಿ ಲಿಂಗಾಯತ ವೋಟ್ ಬ್ಯಾಂಕ್ ಭದ್ರಪಡಿಸೋದಕ್ಕೆ ಮಾಡಿರುವ ಮಾಸ್ಟರ್ ಪ್ಲ್ಯಾನ್ ಬಗ್ಗೆಯೂ ಮಾಹಿತಿ ತಿಳಿಯೋಣ.
ಕರ್ನಾಟಕ ಬಿಜೆಪಿ ಪಾಲಿಗೆ 2023ರ ವಿಧಾನಸಭೆ ಚುನಾವಣೆ ಅತ್ಯಂತ ಕರಾಳ. ಯಾಕಂದ್ರೆ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿ ಇದ್ದ ಪಕ್ಷವೊಂದು, ಅಷ್ಟು ಹೀನಾಯ ಸೋಲು ಕಂಡು ಬೆಚ್ಚಿಬಿದ್ದಿತ್ತು. ಕನಿಷ್ಠ 100 ಸ್ಥಾನಗಳನ್ನೂ ತಲುಪಲು ಆಗದೆ, ಭೀಕರ ಸೋಲನ್ನ ಪಡೆದು ಕಾಂಗ್ರೆಸ್‌ಗೆ ಅಧಿಕಾರ ಬಿಟ್ಟುಕೊಟ್ಟಿತ್ತು. ಪರಿಸ್ಥಿತಿ ಹೀಗಿದ್ದಾಗಲೇ, ಬಿಜೆಪಿ ಇಂತಹ ಹೀನಾಯ ಸೋಲು ಕಾಣಲು ಕಾರಣವೇನು? ಎನ್ನುವ ಬಗ್ಗೆ ಚರ್ಚೆ ಶುರುವಾಗಿತ್ತು. ಇದೇ ವೇಳೆ ಮುನ್ನೆಲೆಗೆ ಬಂದ ಹೆಸರು ಲಿಂಗಾಯತರು!

ಲಿಂಗಾಯತ ಮತಗಳೇ ಬಿಜೆಪಿಗೆ ಗಟ್ಟಿ!
ಕರ್ನಾಟಕದಲ್ಲಿ ಬಿಜೆಪಿ ಗೆದ್ದು ಬೀಗಲು ಲಿಂಗಾಯತ ಮತಗಳೇ ಗಟ್ಟಿ ಎಂಬ ಮಾತು ಈಗ ರಹಸ್ಯವಾಗಿ ಉಳಿದಿಲ್ಲ ಬಿಡಿ. ಯಾಕಂದ್ರೆ ಈ ವಿಚಾರ ಪದೇ ಪದೆ ಪ್ರೂವ್ ಆಗಿ, ಜಗತ್ತಿಗೇ ಗೊತ್ತಾಗಿದೆ. ಕರ್ನಾಟಕದಲ್ಲಿ ಬಲಶಾಲಿ ಸಮುದಾಯವಾಗಿ ಗುರುತಿಸಿಕೊಂಡ ಲಿಂಗಾಯತ ಸಮುದಾಯ, ರಾಜ್ಯದಲ್ಲಿ ಅಧಿಕಾರ ಹಿಡಿಯುವ ಪಕ್ಷವನ್ನು ನಿರ್ಧಾರ ಮಾಡುವಷ್ಟು ಶಕ್ತಿ ಹೊಂದಿದೆ. 2013ರಲ್ಲಿ ಸ್ಯಾಂಪಲ್ ನೋಡಿದ್ದ ಬಿಜೆಪಿ ವರಿಷ್ಠರಿಗೆ, 2023ರ ಚುನಾವಣೆಯ ವೇಳೆ ನಿಜವಾದ ಶಕ್ತಿ ಕಂಡಿತ್ತು. ಹೇಗೆ ಅಂದ್ರೆ, ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿ ಬೆಳೆದಿದ್ದ ಯಡಿಯೂರಪ್ಪ ಅವರನ್ನು. ಅಧಿಕಾರ ಬಿಟ್ಟು ಕೆಳಗಿಳಿಸಿದ್ದ ಬಿಸಿ ರಾಜ್ಯ ಬಿಜೆಪಿ ತಾಗಿತ್ತು.
ಬಿಜೆಪಿ ಅಖಾಡದಲ್ಲಿ ಬಿಎಸ್‌ವೈ ಕಿಂಗ್!
ಕರ್ನಾಟಕ ಬಿಜೆಪಿ ವಿಧಾನಸಭೆ ಚುಣಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ, ಒಳ ಜಗಳವೂ ಶುರುವಾಗಿತ್ತು. ಆದರೆ ಇವರನ್ನ ಕಂಟ್ರೋಲ್ ಮಾಡಿ ಕೂರಿಸಲು ಒಬ್ಬ ಹಿರಿಯ ನಾಯಕ ಇರಲಿಲ್ಲ. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಅವರು, ನಿವೃತ್ತರಾದ ನಂತರ ಲೋಕಸಭೆ ಚುಣಾವಣೆ ಭವಿಷ್ಯದ ಬಗ್ಗೆ ಭಯ ಆವರಿಸಿತ್ತು. ಈಗ ಅದನ್ನ ಸರಿ ಮಾಡುವ ಉದ್ದೇಶದಿಂದ, ವರಿಷ್ಠರು ತೆಗೆದುಕೊಂಡಿದ್ದ ಎಲ್ಲಾ ತಪ್ಪು ನಿರ್ಧಾರಗಳಿಗೆ ಒಂದೇ ಮದ್ದು ಎನ್ನವಂತೆ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರಗೆ ಅಧಿಕಾರ ನೀಡಲಾಗಿದೆ. BJP ರಾಜ್ಯಧ್ಯಕ್ಷ ಸ್ಥಾನ ಇದೀಗ ವಿಜಯೇಂದ್ರ ಅವರಿಗೆ ಒಲಿದು ಬಂದಿದ್ದು, ಈ ಮೂಲಕ ಕರ್ನಾಟಕ ಬಿಜೆಪಿಯಲ್ಲಿ ಬಿಎಸ್‌ವೈ ಮತ್ತೆ ಕಿಂಗ್ ಆಗಿದ್ದಾರೆ.

ಹಲವು ದಿನಗಳಿಂದ ಮೂಡಿದ್ದ ಗೊಂದಲ
ಭೀಕರ ಸೋಲಿನ ಬಳಿಕ ಒಂದ್ಕಡೆ ಕರ್ನಾಟಕ ಬಿಜೆಪಿಯಲ್ಲಿ ಹಾಲಿ ಅಧ್ಯಕ್ಷರ ಬದಲಾವಣೆ ಬಗ್ಗೆ ಕೂಗು ಎದ್ದಿತ್ತು. ಹಾಗೇ ಬಿಜೆಪಿ ಪಕ್ಷದ ನಾಯಕರೇ ಒಳಗೊಳಗೆ ಜಗಳವನ್ನೂ ಶುರು ಮಾಡಿದ್ದರು. ಕೆಲವರು ಬಹಿರಂಗ ಹೇಳಿಕೆ ನೀಡಿ ಅಸಮಾಧಾನ ಹೊರಹಾಕಿ ಗೊಂದಲಕ್ಕೆ ಕೂಡ ಕಾರಣರಾಗಿದ್ದರು. ಇದನ್ನೆಲ್ಲ ನೋಡಿ ನೋಡಿ ಸುಸ್ತಾಗಿ ಹೋಗಿದ್ದ ಕೇಂದ್ರ ಬಿಜೆಪಿ ನಾಯಕರು ಈಗ ಅಂತಿಮವಾಗಿ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಅದೂ ಮಾಜಿ ಸಿಎಂ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಸೊನ್ನೆಯಿಂದ ನೂರರ ಗಡಿ ದಾಟಿಸಿದ್ದ BSY ಅವರ ಪುತ್ರನಿಗೆ ಕರ್ನಾಟಕ ಬಿಜೆಪಿ ಅಧ್ಯಕ್ಷರ ಸ್ಥಾನ ನೀಡಿದ್ದಾರೆ.
ಒಟ್ನಲ್ಲಿ ಕರ್ನಾಟಕದ ಬಿಜೆಪಿಗೆ ಹೊಸ ಸಾರಥಿ ಸಿಕ್ಕಾಗಿದೆ. ಹೀಗಾಗಿ, ಮುಂಬರುವ 2024ರ ಲೋಕಸಭೆ ಚುನಾವಣೆಗೆ ಕಮಲ ಪಾಳಯ ಮೈಕೊಡವಿ ನಿಲ್ಲಬೇಕಿದೆ. ಇದೆಲ್ಲವನ್ನ ಹೊಸ ಅಧ್ಯಕ್ಷರು ಎದುರಿಸಬೇಕಿದೆ. ವಿಜಯೇಂದ್ರರ ತಂದೆ ಯಡಿಯೂರಪ್ಪ ಅವರ ಅನುಭವ ಈ ಸಮಯದಲ್ಲಿ ಬಿಜೆಪಿ ನೂತನ ಅಧ್ಯಕ್ಷರಿಗೆ ಸಹಾಯಕವಾಗುವ ನಿರೀಕ್ಷೆ ಇದೆ. ಹೀಗೆ ರಾಜ್ಯ ಬಿಜೆಪಿಯಲ್ಲಿ ಈಗಿನ ಬೆಳವಣಿಗೆಗಳು ಹೊಸ ಮನ್ವಂತರಕ್ಕೆ ಕಾರಣವಾಗಿದೆ ಎನ್ನಬಹುದು.












Click it and Unblock the Notifications