Vijayendra vs Siddarmaiah: ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡುವ ಸಿದ್ದರಾಮಯ್ಯರ ಕೊಡುಗೆಗಳೇನು?

ಬೆಂಗಳೂರು, ನವೆಂಬರ್ 02: ಕರ್ನಾಟಕದಲ್ಲಿ ಅಧಿಕಾರಕ್ಕೆ ಕಾಂಗ್ರೆಸ್ ಬಂದ ಬಳಿಕ ಅಭಿವೃದ್ಧಿ ಎಂಬ ಪದ ಸಂಪೂರ್ಣವಾಗಿ ಮಾಸಿ ಹೋಗಿದೆ. ಅಭಿವೃದ್ಧಿಯ ವಿಚಾರ ಬಂದಾಗಲೆಲ್ಲ ರಾಜ್ಯದ ಸಂಪನ್ಮೂಲವನ್ನು ಬರಿದು ಮಾಡಿ ಸರ್ಕಾರದ ಖಜಾನೆಯನ್ನು ಖಾಲಿ ಮಾಡಿಕೊಂಡು ಕೂತಿದೆ. ಇದೀಗ ಕೇಂದ್ರದ ಅನುದಾನಗಳು ಬರುತ್ತಿಲ್ಲವೆಂದು ಸುಳ್ಳು ಆರೋಪ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.

ವಿವಿಧ ವಿಚಾರಗಳ ಸಂಬಂಧ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.

BY Vijayendra Criticizes CM Siddaramaiah Over State Development Issues

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದರೂ ದುರಾಡಳಿತ ನಡೆಯುತ್ತಿದ್ದರೂ ಸಹಿತ ಕೇಂದ್ರ ಸರ್ಕಾರದತ್ತ ಸಿಎಂ ಸಿದ್ದರಾಮಯ್ಯ ಪದೇ ಪದೆ ಉಲ್ಲೇಖಿಸಿತ್ತಿದ್ದಾರೆ. ಈ ನೆಲದ ಕಾನೂನು ಸುವ್ಯವಸ್ಥೆಗೆ ಭಂಗ ತಂದದವರನ್ನು ಬಂಧಿಸಿದ್ದರೆ, ಅವರನ್ನು ಬಂಧ ಮುಕ್ತಗೊಳಿಸಿ, ಕೇಸ್ ಪಾಪಾಸ್ ಪಡೆಯುವ ನಿರ್ಧಾರ ಸಿಎಂ ಆಗಿ ನೀವು ಮಾಡಿದ್ದೀರಿ.

ಈ ಬಾರಿ ಕಾಂಗ್ರೆಸ್ ಸರ್ಕಾರದ ಕೊಡುಗೆಗಳು ಏನು?

ನಿಮ್ಮ ಒಂದೂವರೆ ವರ್ಷದ ಆಡಳಿತದಲ್ಲಿ ನಿಮ್ಮ ಕೊಡುಗೆಗಳು ಏನೇನೂ ಇಲ್ಲ. ಅಭಿವೃದ್ಧಿಯ ಹಾದಿಯಲ್ಲಿ ಬರೀ ಶೂನ್ಯ, ಭ್ರಷ್ಟತೆಯ ಸಾಲು, ಸಾಲು ಹಗರಣಗಳು, ಸಾಮಾಜಿಕ ಶೋಷಣೆಗಳು, ಸ್ತ್ರೀ ಕುಲದ ಮೇಲಿನ ದೌರ್ಜನ್ಯಗಳು ಹತ್ತು ಹಲವು ಎಂದು ಹೇಳಿದರು.

BY Vijayendra Criticizes CM Siddaramaiah Over State Development Issues

ಕರ್ನಾಟಕದಲ್ಲಿ ಲಕ್ಷಾಂತರ ಜನ ಗುಡಿಸಲಲ್ಲಿದ್ದಾರೆ. ಸ್ವಂತ ಸೂರಿಲ್ಲದೇ ವಸತಿ ಹೀನರಾಗಿದ್ದಾರೆ. ಇವರಿಗಾಗಿ ನೀವು ಒಂದೇ ಒಂದು ನಿವೇಶವ ನೀಡಿಲ್ಲ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 5 ಸಾವಿರಕ್ಕೂ ಹೆಚ್ಚು ನಿವೇಶನಗಳ ದರೋಡೆ ನಿಮ್ಮ ಬಲಗೈ ಬಂಟ ಸಚಿವ ಭೈರತಿ ಸುರೇಶ್ ರವರ ನೇತೃತ್ವದಲ್ಲಿ ಹಾಗೂ ನಿಮ್ಮ ಮಾರ್ಗದರ್ಶನದಲ್ಲಿ ನಡೆದಿದೆ ಎಂಬುದಕ್ಕೆ ನೀವೊಬ್ಬರೇ ಉಚಿತವಾಗಿ ಪಡೆದ 14 ನಿವೇಶನಗಳು ಸಾಕ್ಷಿ ಎಂದು ಕಾಲೆಳೆದರು.

ಮುಡಾ ತನಿಖೆಗೆ ಹೆದರುತ್ತಿರುವುದು ಏಕೆ?

ಸಿದ್ದರಾಮಯ್ಯ ಅವರು ಪ್ರಾಮಾಣಿಕರಾಗಿದ್ದರೆ ಈಗಲೂ ಇಡಿ, ಸಿಬಿಐ ತನಿಖೆಗೆ ಏಕೆ ಹೆದರುತ್ತಿದ್ದೀರಿ? ನಿಮ್ಮ ಕೈ ಕೆಳಗಿನ ಅಧಿಕಾರಿಗಳಿರುವ ಲೋಕಾಯುಕ್ತದಿಂದಲೇ ತನಿಖೆ ಆಗುವಂತೆ ನೋಡಿಕೊಳ್ಳುತ್ತಿದ್ದೀರಿ. ನನ್ನ ನಿವೇಶನದ ಬೆಲೆ 62 ಕೋಟಿ ಎಂದು ಘೋಷಿಸಿದ ನೀವು ಬೇಷರತ್ತಾಗಿ ಮುಡಾಗೆ ನಿವೇಶನಗಳನ್ನು ಹಿಂದಿರುಗಿಸಿದ್ದು ಏಕೆ ? ಎಂಬುದನ್ನು ಕರ್ನಾಟಕದ ಜನತೆ ಅರಿಯದಿರುವಷ್ಟು ಮುಗ್ಧರಲ್ಲ ಎಂದರು.

ಅಹಿಂದ ಹೆಸರು ಹೇಳಿಕೊಂಡು ಬಂದ ನೀವು ಮಾತು ಮಾತಿಗೂ ಅಹಿಂದ, ಅಹಿಂದ ಎನ್ನುವ ನೀವು 'ಹಿಂದ'ವರ್ಗಗಳಿಗೆ ನೀಡಿದ ಕಲ್ಯಾಣ ಕಾರ್ಯಕ್ರಮಗಳೇನು? ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ, ದೇವರಾಜ ಅರಸು ಅಭಿವೃದ್ಧಿ ನಿಗಮ ಹಾಗೂ ಇತರ ಹಿಂದುಳಿದ ಹಾಗೂ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ನೀವು ನೀಡಿರುವ ಅನುದಾನದ ದಾಖಲೆ ಬಿಡುಗಡೆ ಮಾಡಿ ? ಎಂದು ಸವಾಲೆಸೆದರು.

ಅಕ್ರಮ, ಹಣ ಲೂಟಿ ಬಗ್ಗೆ ವಿಜಯೇಂದ್ರ ಮಾತು

ಶೋಷಿತ ವರ್ಗಗಳಿಗೆ ಅನುದಾನ ಬಿಡುಗಡೆ ಮಾಡುವ ಮಾತು ಹಾಗಿರಲಿ, ವಿಶ್ವಕವಿ ಎಂದು ಮಾನ್ಯತೆ ಪಡೆದ ಪೂಜ್ಯ ವಾಲ್ಮೀಕಿ ಅವರ ಹೆಸರಿರುವ ನಿಗಮದಲ್ಲಿ ಪರಿಶಿಷ್ಟ ಪಂಗಡದ, ಆದಿವಾಸಿ ಜನರ ಕಲ್ಯಾಣದ ಕಾರ್ಯಗಳಿಗೆ ಮೀಸಲಾಗಿ ಠೇವಣಿ ಇರಿಸಿದ್ದ ಬ್ಯಾಂಕ್ ಖಾತೆಗೆ ನಿಮ್ಮ ಸಚಿವರ ಮೂಲಕ ಕನ್ನ ಹಾಕಿಸಿದವರು ನೀವಲ್ಲ ಎಂಬುದನ್ನು ನೀವು ಸಾಬೀತು ಮಾಡಲು ಸಾಧ್ಯವೇ?

ಕೆಐಡಿಬಿಯಲ್ಲಿ ಮಂಜೂರಾಗಿರುವ ಸಿ.ಎ ನಿವೇಶನವನ್ನು ನಿಮ್ಮ ರಾಷ್ಟ್ರೀಯ ಅಧ್ಯಕ್ಷರ ಕುಟುಂಬಕ್ಕೆ ಅಕ್ರಮವಾಗಿ ಮಂಜೂರಾತಿ ಮಾಡಿರುವ ಕಾರಣ ಅವರೂ ತಮ್ಮ ನಿವೇಶನ ಹಿಂದಿರುಗಿಸುವ ಘೋಷಣೆ ಮಾಡಲಾಗಿದೆ. ಅಂದ ಮೇಲೆ ಕೆಐಡಿಬಿಯಿಂದ ಮಂಜೂರಾದ ನಿವೇಶನಗಳೂ ಅಕ್ರಮ ಎಂಬುದು ಸಾಬೀತಾಗಿವೆ ಎಂದು ದೂರಿದರು.

ವಕ್ಫ್ ಹೆಸರಿನಲ್ಲಿ ಜಮೀನು, ಮನೆ, ಮಠ ಭೂಮಿ ಕಬಳಿಕೆ

ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಪ್ರಧಾನಿಯವರನ್ನು ಉಲ್ಲೇಖಿಸಿ ಕುವೆಂಪುರವರ 'ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆʼ ಎಂಬ ನಾಡಗೀತೆಯನ್ನು ನೆನಪಿಸಿದ್ದೀರಿ, ಆದರೆ ಕುವೆಂಪು ಅವರು ಬಣ್ಣಿಸಿದʼ ಸರ್ವಜನಾಂಗದ ಶಾಂತಿಯ ತೋಟಾ..ಕದಡಿ ವಕ್ಫ್ ಹೆಸರಿನಲ್ಲಿ ಈ ನೆಲದ ಮಣ್ಣಿನ ಮಕ್ಕಳ ಹಾಗೂ ಶರಣ ಪರಂಪರೆಯ ಮಠ,ದೇವಸ್ಥಾನಗಳ ಭೂಮಿಯನ್ನು ಕಬಳಿಸಲು ಪ್ರಯತ್ನಿಸುತ್ತಿದ್ದೀರಿ.

ಮೊಘಲ್ ಆಕ್ರಮಣಕಾರರ ರೀತಿಯಲ್ಲಿ ಭೂದಾಖಲೆಗಳಿಗೆ ಕನ್ನ ಹಾಕಿ ವಕ್ಫ್ ಹೆಸರಿನ ಕಪ್ಪು ಚುಕ್ಕೆಗಳನ್ನು ಅಚ್ಚೊತ್ತಿಸುತ್ತಿದ್ದೀರಿ. ಕುವೆಂಪು ಅವರ ಶಾಂತಿಯ ತೋಟ ಕರುನಾಡಿನಲ್ಲಿ ಅಶಾಂತಿ ಹಾಗೂ ಅರಾಜಕತೆಯ ಬೀಜಗಳನ್ನು ಬಿತ್ತಿ, ಅರಾಜಕತೆ ಸೃಷ್ಟಿಸಲು ಹೊರಟಿದ್ದೀರಿ. ಆ ಮೂಲಕ ನಿಮ್ಮ ಭ್ರಷ್ಟ ಮುಖವಾಡ ಮುಚ್ಚಿಕೊಳ್ಳುವ ಷಡ್ಯಂತ್ರ ರೂಪಿಸಿದ್ದೀರಿ. ಇದು ನೀವು ಕರ್ನಾಟಕಕ್ಕೆ ಕೊಡುತ್ತಿರುವ ಕೊಡುಗೆಯೇ? ಎಂದು ದೂರಿದರು.

80% ಕಮಿಷನ್ ಮಾಲೆ ಸಿಎಂ ಗೆ ತೊಡಿಸಿದ್ದರು

ಹಿಂದಿದ್ದ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಹೆಸರಿನಲ್ಲಿ ವ್ಯವಸ್ಥಿತ ಅಪಪ್ರಚಾರ ನಡೆಸಿದ್ದೀರಿ. ಆದರೆ 80% ಕಮಿಷನ್ ವಸೂಲಾತಿಯ ಕುಖ್ಯಾತಿಯ ಮಾಲೆ ನಿಮಗೆ ತೊಡಿಸಿದವರು 80% ಕಮಿಷನ್ ನೀಡಿದ ಗುತ್ತಿಗೆದಾರರೇ ಅಲ್ಲವೇ? ಪ್ರಧಾನಿಗಳನ್ನು ಟೀಕಿಸುವ ಭರದಲ್ಲಿ ಈ ಅಂಶವನ್ನು ನೀವು ಮರೆತಿರೇನೋ? ಎಂದು ಲೇವಡಿ ಮಾಡಿದರು.

ಬೆಳಗಾವಿಯಲ್ಲಿ ಹಾಡು ಹಗಲಲ್ಲೇ ನೀವಿದ್ದ ಕೂಗಳತೆಯ ದೂರದಲ್ಲೇ ಅಮಾಯಕ ಹೆಣ್ಣುಮಗಳನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಿದಾಗ ನಿಮ್ಮ ಸರ್ಕಾರ ಕನಿಷ್ಟ ಸ್ಪಂದನೆಯನ್ನೂ ಮಾಡಲಿಲ್ಲ. ಹುಬ್ಬಳ್ಳಿಯಲ್ಲಿ ನಿಮ್ಮ ಪಕ್ಷದ ಮುಖಂಡರ ಪುತ್ರಿಯನ್ನು ಹಾಡು ಹಗಲಲ್ಲೇ ಕಾಲೇಜು ಆವರಣದಲ್ಲಿ ಇರಿದು ಕೊಲ್ಲಲಾಯಿತು ಎಂದು ನಾಡಿನ ಮಹಿಳೆಯ ಮೇಲಾದ ದೌರ್ಜನ್ಯ ವಿವರಿಸಿದರು.

ಶಾಸಕರ ಕ್ಷೇತ್ರಗಳಿಗೆ ಎಷ್ಟು ಅನುದಾನ ನೀಡಿದ್ದೀರಿ?

ಕಾಂಗ್ರೆಸ್‌ ಶಾಸಕರೇ ನಿಮ್ಮ ಮುಗಿಬೀಳಲಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ರೂ. 52,903 ಕೋಟಿ ಅನುದಾನ ಬಳಸಲಾಗುತ್ತಿದೆ ಎಂದು ಹೇಳಿಕೊಂಡಿದ್ದೀರಿ ಅದು ನಿಜವೇ ಆಗಿದ್ದರೆ, ಕರ್ನಾಟಕದ 224 ಶಾಸಕರ ಕ್ಷೇತ್ರಗಳಿಗೆ ನೀವು ಬಿಡುಗಡೆ ಮಾಡಿರುವ ಅನುದಾನಗಳ ಮಾಹಿತಿ ಬಹಿರಂಗಗೊಳಿಸಿ ಎಂದು ಸವಾಲೆಸೆದರು.

ಸರ್ಕಾರ ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆಗಳು ಯಾವುವು? ಅದಕ್ಕೆ ಖರ್ಚು ಮಾಡಿರುವ ಅನುದಾನ ವಿವರ ನೀಡಿ. ಉದ್ಯೋಗ ಸೃಷ್ಟಿಸಲು ರೂಪಿಸಿರುವ ಕಾರ್ಯಕ್ರಮ ಯಾವುವು? ನೀವು ಬಿಡುಗಡೆ ಮಾಡಿರುವ ಅನುದಾನವೆಷ್ಟು? ಸಣ್ಣ ಕೈಗಾರಿಕೆ, ಅತಿಸಣ್ಣ, ಕೈಗಾರಿಕೆ, ಗುಡಿ ಕೈಗಾರಿಕೆ, ಗೃಹ ಕೈಗಾರಿಕೆ, ಗ್ರಾಮೀಣ ಕೈಗಾರಿಕೆಗಳಿಗೆ ನೀವು ಬಿಡುಗಡೆ ಮಾಡಿರುವ ಅನುದಾನ, ರೂಪಿಸಿರುವ ಯೋಜನೆಗಳ ವಿವರ ಕೊಡಿ ಎಂದು ಸಾಲು ಸಾಲು ಪ್ರಶ್ನೆಗಳನ್ನು ಸಿಎಂ ಮುಂದಿಟ್ಟರು.

ಸೂರಿಲ್ಲದವರಿಗೆ ಮನೆ ಮಂಜೂರು ಮಾಡಿಲ್ಲ

ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸೂರಿಲ್ಲದವರಿಗೆ ಸೂರು ನೀಡಲಾಗಿಲ್ಲ. ನೀವು ಎಷ್ಟು ಮನೆ ಕಟ್ಟಿಕೊಟ್ಟಿದ್ದೀರಿ? ಪಟ್ಟಿ ಬಿಡುಗಡೆ ಮಾಡಲು ಸಾಧ್ಯವೇ?ಶಿಕ್ಷಣಕ್ಕಾಗಿ ನೀವು ಹಾಕಿಕೊಂಡು ಯೋಜನೆಗಳೇನು? ಅತಿವೃಷ್ಟಿ, ಅನಾವೃಷ್ಟಿ ಎರಡೂ ಸಂದರ್ಭವನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಿದ್ದರೂ ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತಿದ್ದೀರಿ ಎಂದು ಅವರು ದೂರಿದ್ದಾರೆ.

ಗ್ಯಾರೆಂಟಿ ಯೋಜನೆಗಳನ್ನು ಟೀಕಿಸಿದ್ದ ಪ್ರಧಾನಿ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ಕೊಟ್ಟಿದ್ದರು. ಇಂದು ಅವರುಗೆ ಬಿಜೆಪಿ ರಾಜ್ಯಾಧ್ಯಕ್ಷರು ತಿರುಗೇಟು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+