ಹಲವು ನಾಯಕರ ಗೈರು ಹಾಜರಿಯೊಂದಿಗೆ ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ
ಬೆಂಗಳೂರು, ನವೆಂಬರ್ 15: ಹಲವಾರು ಬಿಜೆಪಿ ಘಟನುಘಟಿ ನಾಯಕರ ಗೈರು ಹಾಜರಿಯೊಂದಿಗೆ ಬಿಜೆಪಿಯ ನೂತನ ರಾಜಾಧ್ಯಾಕ್ಷರಾಗಿ ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ಅಧಿಕಾರ ಸ್ವೀಕರಿಸಿದರು.
ಅವರಿಗೆ ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಅಧಿಕಾರ ಹಸ್ತಾಂತರಿಸಿದರು. ಇದಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಾಕ್ಷಿಯಾದರು. ಇದಕ್ಕೂ ಮುನ್ನ ಬಿಜೆಪಿಯ ಜಗನ್ನಾಥ ಭವನದಲ್ಲಿ ಪೂರ್ಣಾಹುತಿ ಹೋಮ ನಡೆಸಲಾಯಿತು. ಬಿವೈ ವಿಜಯೇಂದ್ರ ಅವರು ಅಧಿಕಾರ ಸ್ವೀಕರಿಸುವ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಈಶ್ವರಪ್ಪ, ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವ ಸದಾನಂದ ಗೌಡ, ಮುರುಗೇಶ್ ನಿರಾಣಿ, ಎನ್ ಮಹೇಶ್, ರಾಮಚಂದ್ರಗೌಡ, ಶ್ರೀರಾಮುಲು ಮತ್ತಿತರರು ಉಪಸ್ಥಿತರಿದ್ದರು.

ಆದರೆ, ನೂತನ ಅಧ್ಯಕ್ಷರಾದ ಬಿವೈ ವಿಜಯೇಂದ್ರರ ಪದಗ್ರಹಣ ಕಾರ್ಯಕ್ರಮಕ್ಕೆ ಹಿರಿಯ ಬಿಜೆಪಿ ನಾಯಕರಾದ ಆರ್. ಅಶೋಕ್, ಅಶ್ವಥ್ ನಾರಾಯಣ, ಸಿಟಿ ರವಿ, ವಿ. ಸೋಮಣ್ಣ, ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾಳಿ, ಎಸ್‌ಟಿ ಸೋಮಶೇಖರ್, ಡಾ.ಕೆ. ಸುಧಾಕರ್ ಮುಂತಾದ ಹಿರಿಯ ನಾಯಕರು ಗೈರಾಗಿದ್ದರು.
ವಿಜಯೇಂದ್ರ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಬಿಎಸ್ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಬಿವೈ ವಿಜಯೇಂದ್ರರ ಹೆಗಲಿಗೆ ಪಕ್ಷ ಸಂಘಟಿಸುವ ಹೊಣೆಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರಾದ ನಡ್ಡಾ, ಮೋದಿ, ಅಮಿತ್ ಶಾ ಹೊರಿಸಿದ್ದಾರೆ. ಅವರೆಲ್ಲರ ನಿರೀಕ್ಷೆಯಂತೆ ನಾವೆಲ್ಲರೂ ಪಕ್ಷ ಸಂಘಟಿಸುವ ಕೆಲಸ ಮಾಡೋಣ ಎಂದು ತಿಳಿಸಿದರು.
ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಇಷ್ಟು ದಿನ ನಾನು ಅಧ್ಯಕ್ಷನಾಗಿ ಪಕ್ಷ ಸಂಘಟಿಸುವ ಕೆಲಸ ಮಾಡಿದ್ದೇನೆ. ಬಿಎಸ್ ಯಡಿಯೂರಪ್ಪನವರ ಮಾರ್ಗದರ್ಶನ ನನಗೆ ಸಿಕ್ಕದೆ. ನಾವು ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಿ ಕರ್ನಾಟಕದ 28 ಲೋಕಸಭಾ ಸ್ಥಾನಗಳನ್ನು ಗೆಲ್ಲಿಸುವ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡೋಣ ಎಂದು ಅವರು ಹೇಳಿದರು.
ಬಳಿಕ ಮಾತನಾಡಿದ ಮಾಜಿ ಕೇಂದ್ರ ಸಚಿವ ಸದಾನಂದ ಗೌಡ, ನಾವು ಎಲ್ಲ ಅಧಿಕಾರ ಕಳೆದುಕೊಂಡೆವೊ ಅಲ್ಲಿಂದಲೇ ಅಧಿಕಾರ ಪಡೆಯಬೇಕು. ನಾವು ಬಿಎಸ್ ಯಡಿಯೂರಪ್ಪ ಅವರ ಮಾರ್ಗದರ್ಶನದಿಂದ ಎಲ್ಲವನ್ನು ಜಯಿಸಿದ್ದೇವೆ. ಈಗ ವಿಜಯೇಂದ್ರರನ್ನು ಪಕ್ಷ ಅಧ್ಯಕ್ಷರನ್ನಾಗಿ ಮಾಡಿದೆ. ಮುಂದೆ ನಾವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಬೇಕಿದೆ ಎಂದರು.
ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ, ರಾಜ್ಯದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ಹಿನ್ನಡೆಯನ್ನು ಸರಿಪಡಿಸಿಕೊಳ್ಳೋಣ. ಮಾಜಿ ಸಿಎಂ ಯಡಿಯೂರಪ್ಪ ಅವರ ತ್ಯಾಗ ಪಕ್ಷ ಸಂಘಟನೆಗೆ ಎಲ್ಲ ಕಾರ್ಯಕರ್ತರ ಶ್ರಮಕ್ಕೆ ಬೆಲೆ ತರುತ್ತೇವೆ. ನಾವು ಈಗ ಅಧಿಕಾರಕ್ಕೆ ಬಂದಿರುವ ಸರ್ಕಾರವು ವಿಫಲವಾಗುತ್ತಿದೆ. ಸರ್ಕಾರ ದರೋಡೆ ಮಾಡಲಾಗುತ್ತಿದೆ. ಹೂಡಿಕೆಗಳು ವಾಪಸ್ಸಾಗುತ್ತಿವೆ. ಬರ ಪರಿಸ್ಥಿತಿ ಇದ್ದರೂ ಐಷರಾಮಿ ಜೀವನಕ್ಕೆ ಮಣೆ ಹಾಕಲಾಗುತ್ತಿದೆ ಎಂದರು.
ರಾಜ್ಯದ ಸಚಿವರು ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ, ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲೂ ನಾವು ಅಧಿಕಾರ ಹಿಡಿಯಬೇಕಾಗಿದೆ. ಅನೇಕ ಹಿರಿಯ ನಾಯಕರು, ಕಾರ್ಯಕರ್ತರ ಶ್ರಮದಿಂದ ಮೋದಿ ಅವರ ಈ ದೇಶದ ಭವಿಷ್ಯಕ್ಕಾಗಿ ಮತ್ತೆ ಪ್ರಧಾನಿ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿ ಮಾಡಬೇಕು ಎಂದರು.
ನಾನು ರಾಜ್ಯಾಧ್ಯಕ್ಷನಾಗುವ ಮುಂಚೆ ನಾನು ಬಿಜೆಪಿ ಕಾರ್ಯಕರ್ತ. ಆದರೆ ಬಿಜೆಪಿ ರಾಜ್ಯಾಧ್ಯಕ್ಷನಾದ ಮೇಲೆ ನಾನು ಲಿಂಗಾಯತ, ಒಕ್ಕಲಿಗ ಎಂಬ ಜಾತಿ ಭೇದ ಮಾಡದೆ ಬಿಜೆಪಿಯ ಅಧಿಕಾರಕ್ಕೆ ತರಲು ಶ್ರಮ ಹಾಕಬೇಕಿದೆ. ಈ ನಾಡಿನ ಅಭಿವೃದ್ದಿಗೆ ಒತ್ತು ಕೊಡಬೇಕಿದೆ. ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ನನ್ನ ಮೇಲೆ ವಿಶ್ವಾಸ ಇಟ್ಟು ನೇಮಕ ಮಾಡಿದ ಎಲ್ಲ ನಾಯಕರಿಗೆ ಈ ಸಂದರ್ಭದಲ್ಲಿ ನಾನು ಅಭಾರಿಯಾಗಿದ್ದೇನೆ ಎಂದರು.












Click it and Unblock the Notifications