BY Vijayendra: ಉತ್ತರ ಕರ್ನಾಟಕ ಕಡೆಗಣಿಸಿದ ಸರ್ಕಾರ ಇದ್ದು ಸತ್ತಂತೆ: ಬಜೆಟ್ ಬಗ್ಗೆ ಆರೋಪವೇನು?
ಬೆಂಗಳೂರು, ಫೆಬ್ರವರಿ 16: ಕರ್ನಾಟಕವನ್ನು ಎರಡು ದಶಕಗಳಷ್ಟು ಹಿಂದೆ ತೆಗೆದುಕೊಂಡು ಹೋದ ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕಕ್ಕೆ ಒಂದೇ ಒಂದು ರೂಪಾಯಿ ನೀಡಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆಗಣಿಸಿದ ಸರ್ಕಾರ ಬಹುಶಃ ರಾಜ್ಯದ ಜನರ ಪಾಲಿಗೆ ಬದುಕಿದ್ದೂ ಸತ್ತಂತೆ. ಬಜೆಟ್ ಪಾವಿತ್ರ್ಯತೆ ಹಾಳು ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದರು.
ಕರ್ನಾಟಕ ಬಜೆಟ್ 2024 ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ರೈತರ ವಿರೋಧಿ ಆಯವ್ಯಯ ಮಂಡಿಸಿದ್ದಾರೆ. ಇದೊಂದು ಶೂನ್ಯ ಪ್ರಗತಿಯ ಬಜೆಟ್ ಆಗಿದ್ದು, ಇದರಲ್ಲಿ ರಾಜ್ಯದ ಅಭಿವೃದ್ಧಿ ದೃಷ್ಟಿಯೇ ಕಾಣುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರದ ವೈಫಲ್ಯ ಮುಚ್ಚಿಡುವ ಯತ್ನ
ರಾಜ್ಯವನ್ನು ಮುನ್ನಡೆಸದ ಬಜೆಟ್ ಇದಾಗಿದೆ. ಯುವ ಸಮೂಹದಕ್ಕೆ ಪೂರಕವಾಗಿ ಯೋಜನೆ, ಕಾರ್ಯಕ್ರಮಗಳು ಇದರಲ್ಲಿ ಘೋಷಣೆ ಆಗಿಲ್ಲ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು, ಸರ್ಕಾರದ ವೈಫಲ್ಯ ಮುಚ್ಚಿಡಲು ಸಿದ್ದರಾಮಯ್ಯನವರು ತಮ್ಮ ಸಮಯ ವ್ಯರ್ಥ ಮಾಡಿದ್ದಾರೆ ಎಂದು ದೂರಿದರು.
ಈ ಬಜೆಟ್‍ನ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ ಎಂದು ಆಕ್ಷೇಪಿಸಿದ ವಿಜಯೇಂದ್ರ, ಕರ್ನಾಟಕ ಕಾಂಗ್ರೆಸ್ ಇತ್ತೀಚೆಗೆ ದೆಹಲಿ ಚಲೋ ಮಾಡು ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯ ಸರ್ಕಾರದ ಗೌರವ ಹರಾಜು ಹಾಕಿತ್ತು. ಇಂದಿನ ಬಜೆಟ್‌ನಲ್ಲೂ ಸಹ ಸಿದ್ದರಾಮಯ್ಯ ಅವರು ಬರೀ ಕೇಂದ್ರ ಸರ್ಕಾರವನ್ನೇ ದೂರಿದ್ದಾರೆ ಬಿಟ್ಟರೆ. ಇದರಲ್ಲಿ ರಾಜ್ಯದ ಪ್ರಗತಿಯ ಘೋಷಣೆಗಳು ಇಲ್ಲ ಎಂದು ಆರೋಪಿಸಿದರು.

ರೈತರ ಪರಿಹಾರ ನಿರೀಕ್ಷೆ ನಿರಾಸೆ
ಬರಗಾಲ ಸೇರಿದಂತೆ ವಿವಿಧ ರೀತಿಯ ಸಂಕಷ್ಟ ಎದುರಿಸುತ್ತಿರುವ ಕರ್ನಾಟಕದ ರೈತರಿಗೆ ಈ ಬಜೆಟ್‌ನಲ್ಲಿ ಯಾವ ಪರಿಹಾರಗಳು ಘೋಷಣೆ ಆಗಿಲ್ಲ. ಪರಿಹಾರ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಮಹಿಳೆಯರಿಗೂ ಅನುಕೂಲ ಆಗುವುದಿಲ್ಲ. ಇವರು ತಮ್ಮ ಪ್ರಣಾಳಿಕೆಯಲ್ಲಿ ನೇಕಾರರ ಬಗ್ಗೆ ಮಾತನಾಡಿದ್ದರು. ನೇಕಾರರ ಪರವಾಗಿ ಯಾವುದೇ ಒಂದು ಯೋಜನೆಯನ್ನು ಘೋಷಣೆ ಮಾಡಿಲ್ಲ. ನೇಕಾರರ ಹೆಸರನ್ನೂ ಉಲ್ಲೇಖಿಸಿಲ್ಲ ಎಂದರು.
ಈ ಎಲ್ಲ ವರ್ಗದವರಿಗೂ ನಿರಾಸೆ: ಆರೋಪ
ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಭರವಸೆ ನೀಡಿದ್ದರು. ಅದರ ಬಗ್ಗೆಯೂ ಉಲ್ಲೇಖ ಮಾಡಿಲ್ಲ. 'ನುಡಿದಂತೆ ನಡೆದ ಸರಕಾರ' ಎಂದು ಕೊಚ್ಚಿಕೊಳ್ಳುತ್ತಾರೆ. 'ನುಡಿದಂತೆ ನಡೆದ ಸರಕಾರ' ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದು, ರಾಜ್ಯದ ರೈತರು, ಬಡವರು, ದೀನದಲಿತರು, ನೇಕಾರರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿ ಎಲ್ಲ ವರ್ಗಕ್ಕೂ ನಿರಾಸೆ ಮೂಡಿಸಿದೆ ಎಂದು ವಿವರಿಸಿದರು.
ಕೃಷಿ ಮತ್ತು ಬೆಳೆ ಸಾಲದ ಮನ್ನಾ ಕುರಿತು ಉಲ್ಲೇಖ ಮಾಡಿಲ್ಲ. ಸರಕಾರಿ ನೌಕರರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಲಾಗಿದೆ. ಬರಗಾಲದಲ್ಲೂ ಅನುಕೂಲವಾಗದ ಬಜೆಟ್ ಇದಾಗಿದೆ. ಈ ದಿನವನ್ನು (ಫೆ.16) ಕರಾಳ ದಿನ ಎಂದರೂ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯ ಅವರು ತಮ್ಮ 15ನೇ ಬಜೆಟ್ ನಲ್ಲಿ ರೈತರನ್ನು, ಮಹಿಳೆಯರನ್ನು ಕಡೆಗಣಿಸುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ವಿವಿಧ ವರ್ಗದವರನ್ನು ಬಜೆಟ್‌ನಲ್ಲಿ ಸರ್ಕಾರ ಕಡೆಗಣಿಸಿದೆ ಎಂದು ದೂರಿದರು.












Click it and Unblock the Notifications