ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ಗಿಂತ ನೋಟಾಕ್ಕೇ ಹೆಚ್ಚು ಮತ
ಬೆಂಗಳೂರು, ಡಿಸೆಂಬರ್ 10: ಹದಿನೈದು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಶೂನ್ಯ ಸಾಧನೆ ಮಾಡಿದೆ. 2018ರಲ್ಲಿ ನಡೆದ ಚುನಾವಣೆಯಲ್ಲಿ 37 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್, ಮೂರು ಸ್ಥಾನಗಳನ್ನು ಕಳೆದುಕೊಂಡಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿನ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿದ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಒಟ್ಟು 17 ಶಾಸಕರ ಪೈಕಿ ಜೆಡಿಎಸ್‌ನ ಮೂವರು ಶಾಸಕರಿದ್ದರು. ರಾಜೀನಾಮೆ ಮತ್ತು ಅನರ್ಹತೆಯ ಬೆನ್ನಲ್ಲೇ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.
ಈಗ ಜೆಡಿಎಸ್ ಆ ಮೂರೂ ಸ್ಥಾನಗಳನ್ನು ಮರಳಿ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಮಹಾಲಕ್ಷ್ಮಿ ಲೇ ಔಟ್‌ನ ಕೆ. ಗೋಪಾಲಯ್ಯ, ಹುಣಸೂರಿನ ಎಚ್ ವಿಶ್ವನಾಥ್ ಮತ್ತು ಕೆಆರ್ ಪೇಟೆಯ ಕೆ.ಸಿ. ನಾರಾಯಣ ಗೌಡ ಸಮ್ಮಿಶ್ರ ಸರ್ಕಾರ ಮತ್ತು ಜೆಡಿಎಸ್ ವರಿಷ್ಠರಿಗೆ ಸೆಡ್ಡು ಹೊಡೆದಿದ್ದರು.
ಈ ಮೂವರೂ ಶಾಸಕರು ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಅವರಲ್ಲಿ ಹಿರಿಯ ರಾಜಕಾರಣಿ, ಹುಣಸೂರು ಕ್ಷೇತ್ರದ ಅಭ್ಯರ್ಥಿ ಎಚ್. ವಿಶ್ವನಾಥ್ ಮಾತ್ರ ಸೋಲು ಅನುಭವಿಸಿದ್ದಾರೆ. ಜೆಡಿಎಸ್‌ಗೆ ಸಮಾಧಾನ ನೀಡಿರುವ ಸಂಗತಿ ಇದೊಂದೇ. ಆದರೆ ತಮ್ಮ ಭದ್ರಕೋಟೆ ಎಂದೇ ಜೆಡಿಎಸ್ ಭಾವಿಸಿದ್ದ ಮಂಡ್ಯದ ಕೃಷ್ಣರಾಜ ಪೇಟೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಿರುವುದು ದೊಡ್ಡ ಆಘಾತ ನೀಡಿದೆ. 15 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಿಂತಲೂ 'ನೋಟಾ'ಕ್ಕೇ ಹೆಚ್ಚು ಮತ ಬಿದ್ದಿದೆ.

ಯಲ್ಲಾಪುರ ವಿಧಾನಸಭೆ ಕ್ಷೇತ್ರ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಶಿವರಾಂ ಹೆಬ್ಬಾರ್ 31,000ಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಚೈತ್ರಾ ಗೌಡ ಸೇರಿದಂತೆ ಐದು ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಚೈತ್ರಾ ಗೌಡ 1,235 ಮತಗಳನ್ನು ಪಡೆದಿದ್ದರು. ಅವರು ಪಡೆದ ಮತಗಳಿಗಿಂತಲೂ ಹೆಚ್ಚಿನ ಮತವನ್ನು ಜನರು 'ನೋಟಾ'ಕ್ಕೆ ನೀಡಿದ್ದಾರೆ. ಇಲ್ಲಿ 1,444 ನೋಟಾ ಮತಗಳು ಚಲಾವಣೆಯಾಗಿವೆ.

ರಾಣೆಬೆನ್ನೂರು ವಿಧಾನಸಭೆ ಕ್ಷೇತ್ರ
ರಾಣೆಬೆನ್ನೂರಿನಲ್ಲಿ ಕೂಡ ಜೆಡಿಎಸ್ ಮುಖಭಂಗ ಅನುಭವಿಸಿದೆ. ಬಿಜೆಪಿಯ ಅರುಣ್ ಕುಮಾರ್ ಗುತ್ತೂರು 95,408 ಮತಗಳನ್ನು ಪಡೆದಿದ್ದರೆ, ಅವರ ಎದುರಾಳಿ, ಕಾಂಗ್ರೆಸ್‌ನ ಕೆ.ಬಿ. ಕೋಳಿವಾಡ 72,187 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಜೆಡಿಎಸ್‌ನ ಮಲ್ಲಿಕಾರ್ಜುನಪ್ಪ ರುದ್ರಪ್ಪ ಹಲಗೇರಿ 979 ಮತಗಳನ್ನು ಪಡೆದರೆ, ಅದಕ್ಕಿಂತಲೂ ಹೆಚ್ಚು ನೋಟಾ (1,608) ಮತಗಳು ಚಲಾವಣೆಯಾಗಿವೆ.

ಕೆಆರ್ ಪುರದಲ್ಲಿ ನೋಟಾವೇ ಬಲ
ಕೆಆರ್ ಪುರದಲ್ಲಿ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು 1,39,833 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಎಂ. ನಾರಾಯಣಸ್ವಾಮಿ 76,428 ಮತಗಳನ್ನು ಗಳಿಸಿದ್ದರು. ನಂತರದ ಸ್ಥಾನ ನೋಟಾದ್ದು. 5,181 ಮತಗಳನ್ನು ಮತದಾರರು ನೋಟಾಕ್ಕೆ ಹಾಕಿದ್ದಾರೆ. 2,048 ಮಂದಿ ಮಾತ್ರ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರ ಪರ ಒಲವು ತೋರಿಸಿದ್ದಾರೆ.

ಶಿವಾಜಿನಗರದಲ್ಲಿ ಅಲ್ಪ ಮುನ್ನಡೆ!
ಶಿವಾಜಿನಗರದ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನೋಟಾಕ್ಕಿಂತಲೂ ಕಡಿಮೆ ಮತ ಗಳಿಸುವ ಮುಖಭಂಗದಿಂದ ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡಿದ್ದಾರೆ. ಆದರೆ ಅವರಿಗೆ ನೋಟಾಕ್ಕಿಂತ ನೂರು ಮತಗಳನ್ನಷ್ಟೇ ಹೆಚ್ಚು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹಮ್ಮದ್ ಉಲ್ಲಾ 1,098 ಮತಗಳನ್ನು ಪಡೆದರೆ, 986 ಮತಗಳು ನೋಟಾಗೆ ಚಲಾವಣೆಯಾಗಿದೆ.

ಶರತ್ ಬೆಂಬಲವೇ ದೊಡ್ಡ ಸಾಧನೆ
ಇನ್ನು ಕೆಆರ್ ಪೇಟೆ ಮತ್ತು ಯಶವಂತ ಪುರ ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಎರಡನೆಯ ಸ್ಥಾನ ಪಡೆದುಕೊಳ್ಳುವಲ್ಲಿ ಸಫಲವಾಗಿದೆ. ಹೊಸಕೋಟೆ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಇಳಿಸದೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಬೆಂಬಲ ನೀಡಿದ್ದ ಜೆಡಿಎಸ್, ಅದನ್ನೇ ದೊಡ್ಡ ಗೆಲುವು ಎಂದು ಸಮಾಧಾನಪಟ್ಟುಕೊಳ್ಳಬೇಕಿದೆ. ಇನ್ನು ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್ ಠೇವಣಿ ನಷ್ಟ ಅನುಭವಿಸಿದೆ.
-
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
Karnataka Election: ಪಂಚರಾಜ್ಯಗಳ ಜೊತೆ ಕರ್ನಾಟಕದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ ದಿನಾಂಕ ಘೋಷಣೆ -
HPCL Recruitment 2026: HPCL ನಿಂದ 731 ಹುದ್ದೆಗಳಿಗೆ ಬೃಹತ್ ನೇಮಕಾತಿ, ವಾರ್ಷಿಕ 60 ಲಕ್ಷ ರೂ. ವರೆಗೆ ಸಂಬಳ -
ಮಾರ್ಚ್ 16ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಂಗಳೂರಿಗೆ ಬರಲಿದೆ 26,000 ಟನ್ LPG ತೈಲ ಹೊತ್ತ 'ಶಿವಾಲಿಕ್' ಹಡಗು -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
ಎಲ್ಪಿಜಿ ಪೂರೈಕೆಯಲ್ಲಿ ತೊಂದರೆ ಇಲ್ಲ, ಕೇಂದ್ರ ಸಚಿವರಿಂದ ಭರವಸೆ ಸಿಕ್ಕಿದೆ: ಸಿಎಂ ಸಿದ್ದರಾಮಯ್ಯ -
KAS ಅಭ್ಯರ್ಥಿಗಳಿಗೆ ಬಿಗ್ ಶಾಕ್ ನೀಡಿದ KPSC: 384 ಗೆಜೆಟೆಡ್ ಪ್ರೊಬೇಷನರ್ಸ್ ಸಂದರ್ಶನ ಮುಂದೂಡಿಕೆ -
ಮಾರ್ಚ್ 15ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ












Click it and Unblock the Notifications