ಉಪಚುನಾವಣೆ 2018 ಮತದಾನ ಅಂತ್ಯ: ಇಲ್ಲಿದೆ ಹೈಲೈಟ್ಸ್
ಬೆಂಗಳೂರು, ನವೆಂಬರ್ 03: ಪಂಚ ಕ್ಷೇತ್ರಗಳ ಉಪಚುನಾವಣೆ ಶಾಂತಿಯುತವಾಗಿ ಅಂತ್ಯವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.
ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭೆ ಕ್ಷೇತ್ರಗಳಿಗೆ ಹಾಗೂ ಜಮಖಂಡಿ, ರಾಮನಗರ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯಿತು. ಮೈತ್ರಿ ಸರ್ಕಾರದ ಅಭ್ಯರ್ಥಿಗಳು ಮತ್ತು ಬಿಜೆಪಿ ನಡುವೆ ಏರ್ಪಟ್ಟಿದ್ದ ಚುನಾವಣೆ ಇದು.
ಬಹುತೇಕ ಶಾಂತಿಯುತವಾಗಿ ಚುನಾವಣೆ ಮುಗಿದಿದೆ, ಎಲ್ಲಿಯೂ ಗಲಾಟೆ ಆದ ವರದಿ ಆಗಿಲ್ಲ. ಮತಯಂತ್ರ ಕೈಕೊಟ್ಟ ಪ್ರಸಂಗ ಸಹ ವರದಿ ಆಗದೇ ಇರುವುದು ಪೊಲೀಸ್ ಇಲಾಖೆ ಮತ್ತು ಚುನಾವಣಾ ಆಯೋಗ ತೆಗೆದುಕೊಂಡಿದ್ದ ಮುನ್ನೆಚ್ಚರಿಕಾ ಕ್ರಮಗಳನ್ನು ತೋರುತ್ತದೆ.
ಶೇಕಡಾವಾರು ಮತದಾನವನ್ನು ಗಮನಿಸಿದಲ್ಲಿ ಜಮಖಂಡಿಯಲ್ಲಿ ವಿಧಾನಸಭೆ ಉಪಚುನಾವಣೆಗೆ ಬಿರುಸಿನಿಂದ ಮತದಾನ ನಡೆದಿದೆ. ಮಂಡ್ಯದ ಲೋಕಸಭಾ ಉಪಚುನಾವಣೆಗೆ ನೀರಸವಾಗಿ ಮತದಾನ ನಡೆದಿದ್ದು ಅಲ್ಲಿ ಶೇ 50 ಸಹ ಮತದಾನ ಆಗಿಲ್ಲ.
ಬಳ್ಳಾರಿಯ ಹಗರಿನಡೋಣಿ ಹಳ್ಳಿಯ ಜನ ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಚುನಾವಣೆಯನ್ನು ಬಹಿಷ್ಕರಿಸಿದ್ದವು. ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರುಗಳ ಮನವೊಲಿಕೆ ನಂತರ ಮಧ್ಯಾಹ್ನದ ನಂತರ ಅಲ್ಲಿ ಚುನಾವಣೆ ನಡೆದಿದೆ.

ಮತಗಟ್ಟೆಗೆ ಹಾವು
ರಾಮನಗರದಲ್ಲಿ ಮತಗಟ್ಟೆಯೊಂದಕ್ಕೆ ಹಾವೊಂದು ಏಕಾ-ಏಕಿ ಪ್ರವೇಶಿಸಿ ಆತಂಕ ಸೃಷ್ಠಿಸಿತು. ಬಿಟ್ಟಂತೆ ಬಳ್ಳಾರಿಯಲ್ಲಿ ಚುನಾವಣಾ ಕರ್ತವ್ಯಕ್ಕೆಂದು ಬಂದಿದ್ದ ಅಧಿಕಾರಿ ಒಬ್ಬರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ತೆರಳಿ ಅಲ್ಲಿ ಪ್ರಾಣ ಬಿಟ್ಟಿರುವ ಘಟನೆ ಸಹ ನಡೆಯಿತು.

ಮತಚಲಾಯಿಸಿದ ಗಣ್ಯರು
ಚುನಾವಣೆಯಲ್ಲಿ ಅಂಬರೀಶ್, ಶ್ರೀರಾಮುಲು, ಯಡಿಯೂರಪ್ಪ ಕುಟುಂಬ, ಈಶ್ವರಪ್ಪ ಮತ್ತು ಕುಟುಂಬ, ಶಾಮನೂರು ಶೀವಶಂಕರಪ್ಪ ಮತ್ತು ಕುಟುಂಬ, ಮಧು ಬಂಗಾರಪ್ಪ, ಕುಮಾರ ಬಂಗಾರಪ್ಪ ಸೇರಿ ಇನ್ನೂ ಹಲವು ಪ್ರಮುಖ ರಾಜಕಾರಣಿಗಳು ತಮ್ಮಿಷ್ಟದ ಪಕ್ಷಕ್ಕೆ ಮತಚಲಾಯಿಸಿದರು.

ಖಾಸಗಿ ವಾಹನದಲ್ಲಿ ಇವಿಎಂ
ಜಮಖಂಡಿ ಕ್ಷೇತ್ರದ ಚುನಾವಣೆಗೆ ಇವಿಎಂ ಯಂತ್ರಗಳನ್ನು ಎಂಬಿ ಪಾಟೀಲ್ ಅವರಿಗೆ ಸೇರಿದ ಖಾಸಗಿ ವಾಹನದಲ್ಲಿ ತರಲಾಗಿದೆ ಎಂಬ ಆರೋಪ ಕೇಳಿಬಂದಿತು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಬಿಜೆಪಿ ಹೇಳಿದೆ.

ರಾಮನಗರದಲ್ಲಿ ಬಿಜೆಪಿಗೆ ಬೇಸರ
ರಾಮನಗರದ ಬಿಜೆಪಿಗೆ ಈ ಉಪಚುನಾವಣೆ ಬಹು ಬೇಸರ ತರಿಸಿದ ಚುನಾವಣೆ. ತಮ್ಮ ಅಭ್ಯರ್ಥಿಯೇ ಕೈಕೊಟ್ಟ ನಂತರ ಪಕ್ಷಕ್ಕಾಗಿ ಪ್ರಚಾರ ಮಾಡಿದ್ದರು. ಆದರೆ ಇಂದು ಮತ್ತೆ ಏಟು ಕೊಟ್ಟ ಬಿಜೆಪಿ ಪಲಾಯನ ಅಭ್ಯರ್ಥಿ ಬಿಜೆಪಿಯ ಬೂತ್ ಏಜೆಂಟ್‌ಗಳ ಮಾನ್ಯತೆ ರದ್ದು ಮಾಡಿದರು. ಬಿಜೆಪಿ ಏಜೆಂಟ್ ಸಹ ಇಲ್ಲದೆ ರಾಮನಗರದಲ್ಲಿ ಚುನಾವಣೆ ನಡೆದಿದೆ.












Click it and Unblock the Notifications