Bus Fare: ಏನ್ ಗುರೂ ಬಸ್ ರೇಟ್.. ವಾರಂತ್ಯದಲ್ಲಿ ಡಬಲ್ ಚಾರ್ಜ್!
ಇನ್ನೇನು ಸ್ವಾತಂತ್ರ್ಯ ದಿನಾಚರಣೆ ಬಂತು ಹೇಗೋ ಸೋಮವಾರ ಒಂದು ರಜೆ ತಗೋಂಡು ಊರಿಗೆ ಹೋದ್ರೆ 3-4 ದಿನ ಊರಲ್ಲೇ ಹಾಯಾಗಿ ಇರಬಹುದು. ಅಪ್ಪ-ಅಮ್ಮ & ಕುಟುಂಬ ಸದಸ್ಯರ ಜೊತೆ ಕಾಲ ಕಳೆಯಬಹುದು ಅಂತಾ ಲೆಕ್ಕ ಹಾಕಿ, ಊರಿಗೆ ಹೋಗಲು ಬಟ್ಟೆ & ಬ್ಯಾಗ್ ರೆಡಿ ಮಾಡಿಕೊಂಡ ಕನ್ನಡಿಗರಿಗೆ ಬಸ್ ದರ ಆಘಾತ ನೀಡಿದೆ. ಸೋಮವಾರದಿಂದ ಗುರುವಾರದ ತನಕ ಅರ್ಧಕರ್ಧ ರೇಟ್ ಕಡಿಮೆ ಇದ್ದರೆ, ವಾರದ ಅಂತ್ಯಕ್ಕೆ ಡಬಲ್ ರೇಟ್ ಮಾಡಿವೆ ಖಾಸಗಿ ಬಸ್‌ಗಳು!
ಹೌದು, ಬಹುತೇಕರಿಗೆ ವರ್ಕ್ ಫ್ರಂ ಹೋಂ ಈಗ ಮುಗಿದ ಅಧ್ಯಾಯ. ಬಹುತೇಕ ಕಂಪನಿ ಆಡಳಿತಗಳು ತಮ್ಮ ನೌಕರರಿಗೆ ಕಚೇರಿಗೆ ಬರಲು ಆದೇಶ ನೀಡಿವೆ. ಹೀಗಾಗಿ ಬೆಂಗಳೂರಲ್ಲಿ ಮತ್ತೆ ಬಾಡಿಗೆ ದರ ಮತ್ತು ಸಂಚಾರ ದಟ್ಟಣೆ ಹೆಚ್ಚಾಗಿದೆ. ಇದೇ ಹೊತ್ತಲ್ಲಿ ಬಸ್ ರೇಟ್‌ಗೆ ಕೂಡ ಕಡಿವಾಣ ಬೀಳ್ತಿಲ್ಲ. ವರ್ಕ್ ಫ್ರಂ ಹೋಂ ಇಲ್ಲದ ಕಾರಣ ರಜೆಯಲ್ಲೇ ಊರುಗಳಿಗೆ ಹೋಗುವವರಿಗೆ ಶಾಕ್ ಎದುರಾಗಿದೆ. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಇಡೀ ದೇಶ ಸಜ್ಜಾಗಿದೆ. ಆಗಸ್ಟ್ 15 ಈ ಬಾರಿ ಮಂಗಳವಾರ ಬಂದಿದ್ದು, ಹೀಗಾಗಿ ಸಾರ್ವಜನಿಕ ರಜೆ ಸಿಗುತ್ತಿರುವ ಕಾರಣ ಬಹುತೇಕರು ಶುಕ್ರವಾರ ಊರಿಗೆ ತೆರಳಲು ಪ್ಲ್ಯಾನ್ ಮಾಡಿದ್ದರು. ಆದರೆ ಖಾಸಗಿ ಬಸ್ ದರ ಆಕಾಶ ಮುಟ್ಟಿದೆ.

ಡಬಲ್ ರೇಟ್ ಕಟ್ಟಬೇಕು ಪ್ರಯಾಣಿಕರು!
ಬಸ್ ರೇಟ್ ಹೇಗೆ ಹೆಚ್ಚಾಗಿದೆ ಅನ್ನೋದನ್ನ ನೋಡೋದಾದ್ರೆ, ಉದಾಹರಣೆಗೆ ರಾಜಧಾನಿ ಬೆಂಗಳೂರಿಂದ ಉಡುಪಿಗೆ ತೆರಳಲು ವಾರದ ದಿನದಲ್ಲಿ ಸುಮಾರು 700 ರೂಪಾಯಿ ಟಿಕೆಟ್ ರೇಟ್ ಫಿಕ್ಸ್ ಆಗಿದೆ. ಆದರೆ ಅದೇ ಟಿಕೆಟ್ ರೇಟ್ ವಾರಾಂತ್ಯದಲ್ಲಿ ಅಂದರೆ ಶುಕ್ರವಾರಕ್ಕೆಲ್ಲ ಡಬಲ್ ಆಗಿದೆ. ಆಗಸ್ಟ್ 9ಕ್ಕೆ ನೀವು ಖಾಸಗಿ ಬಸ್‌ನಲ್ಲಿ ಬೆಂಗಳೂರಿಂದ ಉಡುಪಿಗೆ ತೆರಳಲು ಸುಮಾರು 700 ರೂಪಾಯಿ ಕೊಡಬೇಕು. ಅದೇ ಆಗಸ್ಟ್ 11ಕ್ಕೆ ಅಂದರೆ ಶುಕ್ರವಾರದಂದು ಬರೋಬ್ಬರಿ 1400 ರೂಪಾಯಿ ರೇಟ್ ಫಿಕ್ಸ್ ಆಗಿದೆ. ಹೀಗೆ ಪರಿಸ್ಥಿತಿಯ ಲಾಭ ಪಡೆಯುವ ಖಾಸಗಿ ಸಾರಿಗೆ ಸಂಸ್ಥೆಗಳ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಕೆಎಸ್‌ಆರ್‌ಟಿಸಿ ದರದಲ್ಲೂ ರೇಟ್ ಜಾಸ್ತಿ!
ಹೌದು, ಖಾಸಗಿ ಸಾರಿಗೆ ಸಂಸ್ಥೆಗಳ ರೀತಿಯಲ್ಲೇ ಕೆಎಸ್‌ಆರ್‌ಟಿಸಿ ಕೂಡ ಬಸ್ ರೇಟ್‌ನಲ್ಲಿ ಏರಿಕೆ ಮಾಡಿದೆ. ಲಾಂಗ್ ವೀಕೆಂಡ್ ಅಂತಾ ಪ್ಲ್ಯಾನ್ ಮಾಡಿರುವ ಪ್ರಯಾಣಿಕರಿಗೆ ಶಾಕ್ ನೀಡುತ್ತಿದೆ. ಆದರೆ ಖಾಸಗಿ ಸಾರಿಗೆಗಳ ರೀತಿ ಡಬಲ್ ಚಾರ್ಜ್ ಮಾಡದೇ ಇದ್ದರೂ, ಇದೇ ಶುಕ್ರವಾರಕ್ಕೆ ರೇಟ್ ಸುಮಾರು ನೂರು ರೂಪಾಯಿಯಷ್ಟು ಹೆಚ್ಚಾಗಿದೆ. ಆಗಸ್ಟ್ 9ಕ್ಕೆ ನೀವು ಸರ್ಕಾರಿ ಬಸ್‌ನಲ್ಲಿ ಅಂದ್ರೆ ಕೆಎಸ್‌ಆರ್‌ಟಿಸಿ ಮೂಲಕ ಬೆಂಗಳೂರಿಂದ ಉಡುಪಿಗೆ ತೆರಳಲು ನಾನ್ ಎಸಿ ಸ್ಲೀಪರ್ ಕೋಚ್‌ನಲ್ಲಿ 830 ರೂಪಾಯಿ ಇದೆ. ಅದೇ ಆಗಸ್ಟ್ 11ಕ್ಕೆ ಅಂದರೆ ಶುಕ್ರವಾರಕ್ಕೆ 909 ರೂಪಾಯಿ ರೇಟ್ ಫಿಕ್ಸ್ ಆಗಿದೆ.

ಊರಿಗೆ ಹೋಗಲು ಪರದಾಡುತ್ತಿರುವ ಜನ!
ಇದು ಬಸ್‌ಗಳ ಪರಿಸ್ಥಿತಿಯಾದರೆ, ಇನ್ನು ರೈಲಿನಲ್ಲಿ ಹೋಗೋಣ ಅಂದರೆ ಮುಂಗಡವಾಗಿ ಬುಕ್ ಮಾಡಲು ಆಗೋದಿಲ್ಲ ಅಂತಹ ಪರಿಸ್ಥಿತಿ ಇದೆ. ಇನ್ನು ಟಿಕೆಟ್ ಪಡೆದು ನೇರವಾಗಿ ಹೋಗೋಣ ಅಂದ್ರೆ ಅಲ್ಲೂ ಜನಜಂಗುಳಿ. ಹೀಗಾಗಿ ಲಾಂಗ್ ವೀಕೆಂಡ್ ಬಂದಾಗ ಅಂದ್ರೆ ಸಾಲು ಸಾಲು ರಜೆಗಳು ಸಿಕ್ಕಾಗ ಸರ್ಕಾರಿ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂಬ ಒತ್ತಾಯ ಪ್ರಯಾಣಿಕರದ್ದು. ಅಲ್ಲದೆ ಖಾಸಗಿ ಸಾರಿಗೆ ಸಂಸ್ಥೆಗಳು ವಾರಾಂತ್ಯದಲ್ಲಿ ಡಬಲ್ ಹಣವನ್ನ ಕೀಳುತ್ತಿರುವ ಬಗ್ಗೆ ಕ್ರಮಕ್ಕೂ ಪ್ರಯಾಣಿಕರು ಆಗ್ರಹಿಸಿದ್ದಾರೆ. ರೈಲುಗಳು ಇದ್ದರೂ ನಮ್ಮ ರಾಜ್ಯದ ಜನಕ್ಕಿಂತ ಬೇರೆ ರಾಜ್ಯದವರಿಗೆ ಇದರಿಂದ ಹೆಚ್ಚು ಅನುಕೂಲ ಆಗುತ್ತಿದೆ.

ಒಟ್ನಲ್ಲಿ ವಾರಾಂತ್ಯದಲ್ಲಿ ಊರಿಗೆ ಹೋಗೋಣ ಅಂತಾ ಬ್ಯಾಗ್ ರೆಡಿ ಮಾಡಿದ್ದವರಿಗೆ ಅತ್ತ ರೇಟ್ ಶಾಕ್ ಸಿಕ್ಕಿದೆ. ಇತ್ತ ಬಸ್‌ಗಳ ಸೀಟ್ ಕೂಡ ಸೋಲ್ಡ್ ಔಟ್ ಆಗುತ್ತಿದೆ. KSRTCಯ ಬಸ್‌ಗಳಲ್ಲೂ ಇದೇ ಪರಿಸ್ಥಿತಿ ಇದೆ. ಹೀಗಾಗಿ ಹೆಚ್ಚು ಹಣ ಪಡೆಯುತ್ತಿರುವ ಖಾಸಗಿ ಬಸ್ ಮಾಲೀಕರು ಮತ್ತು ಸಂಸ್ಥೆಗಳಿಗೆ ಸರ್ಕಾರ ಸೂಚನೆ ನೀಡಬೇಕು ಎಂಬುದು ಜನರ ಆಗ್ರಹ. ಆದರೆ ಇದು ನೆರವೇರುತ್ತಾ? ಇಲ್ಲ ಹಿಂಗೆ ಖಾಸಗಿ ಬಸ್‌ಗಳಲ್ಲಿ ಡಬಲ್ ಹಣ ಸುಲಿಗೆಯು ಮುಂದುವರೆಯುತ್ತಾ? ಕಾದು ನೋಡಬೇಕು.












Click it and Unblock the Notifications