2022-23 ಕೇಂದ್ರ ಬಜೆಟ್ ಬಗ್ಗೆ ಸಚಿವ ಸುಧಾಕರ್ ಶ್ಲಾಘನೆಗೆ ಕಾರಣವೇನು?
ಬೆಂಗಳೂರು, ಫೆಬ್ರವರಿ 1: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2022-23ನೇ ಸಾಲಿನ ಬಜೆಟ್ ಕೊವಿಡ್-19 ನಂತರದ ಕಾಲದಲ್ಲಿ ಸಮಗ್ರ ಆರ್ಥಿಕ ಸುಧಾರಣೆಗೆ ಪೂರಕವಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.
"ಕೇಂದ್ರ ಬಜೆಟ್ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತವು ಸದೃಢವಾಗಿ ಬೆಳೆಯಲು ವೇಗ ದೊರೆತಂತೆ ಆಗಿದೆ. ಇದರ ಜೊತೆಗೆ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಆದ್ಯತೆ ದೊರೆತಿದೆ. ದೇಶವು ಸ್ವಾತಂತ್ರ್ಯದ 100ನೇ ವರ್ಷದತ್ತ ಸಾಗುತ್ತಿರುವ ಈ ಅಮೃತ ಕಾಲದಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ತರಲು ಭದ್ರ ಅಡಿಪಾಯ ಹಾಕುವ ನಿಟ್ಟಿನಲ್ಲಿ ಕೇಂದ್ರ ಬಜೆಟ್ ಅನ್ನು ರೂಪಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಹೊಸ ಯೋಜನೆ, ಕ್ರಮಗಳನ್ನು ತಂದು ಜನರ ಜೀವನ ಗುಣಮಟ್ಟ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗಿದೆ," ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಈವರೆಗೆ 166 ಕೋಟಿಗೂ ಅಧಿಕ ಲಸಿಕೆಗಳನ್ನು ನೀಡುವ ಮೂಲಕ ಜನರ ಜೀವ, ಜೀವನೋಪಾಯ ಎರಡನ್ನೂ ರಕ್ಷಿಸಲಾಗಿದೆ. ಲಸಿಕೆ ವಿತರಣೆಯು ಕೊವಿಡ್-19 ನಂತರದ ಆರ್ಥಿಕ ಪುನಶ್ಚೇತನಕ್ಕೆ ವೇಗ ನೀಡಿದೆ. ಇಂತಹ ಬಜೆಟ್ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಬೆಂಬಲ ಬೆಲೆ:
ಭಾರತದ ಕೃಷಿ ಕ್ಷೇತ್ರದಲ್ಲಿ ಬೆಂಬಲ ಬೆಲೆ ಯೋಜನೆಯಡಿ, 2.37 ಲಕ್ಷ ಕೋಟಿ ರೂಪಾಯಿಯಲ್ಲಿ ಬೆಳೆ ಖರೀದಿ ನಡೆಯಲಿದೆ. ಸಹಕಾರಿ ಸಂಘಗಳ ತೆರಿಗೆ ದರವನ್ನು ಶೇ.15ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಕಾವೇರಿ ಸೇರಿದಂತೆ 5 ನದಿಗಳ ಜೋಡಣೆಗೆ ಅನುಮತಿ ನೀಡಲಾಗಿದೆ. ಈ ಎಲ್ಲಾ ಕಾರ್ಯಗಳಿಂದಾಗಿ ಕೃಷಿಯ ಸಮಗ್ರ ಸುಧಾರಣೆ ಸಾಧ್ಯವಾಗಲಿದೆ.
ಮಾನಸಿಕ ಆರೋಗ್ಯಕ್ಕೆ ಒತ್ತು:
ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ನಂತರ ಜನರು ಮಾನಸಿಕ ಒತ್ತಡಕ್ಕೆ ಒಳಗಾಗಿರುವುದನ್ನು ಕೇಂದ್ರ ಸರ್ಕಾರ ಗಮನಿಸಿದೆ. ಈ ಹಿನ್ನೆಲೆ ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಆಸ್ಪತ್ರೆಯನ್ನು ಆರಿಸಿಕೊಂಡು ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮ ನೀಡುವುದಾಗಿ ತಿಳಿಸಿದೆ. ಇದು ಸಕಾಲಿಕವಾಗಿದ್ದು, ಇಂದಿನ ಯುವ ಜನತೆಗೆ ಬಹಳ ಉಪಯೋಗವಾಗಲಿದೆ ಎಂದು ಸಚಿವರು ಶ್ಲಾಘಿಸಿದ್ದಾರೆ.
Recommended Video
ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ ಚಿಕಿತ್ಸೆ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಂತರದಲ್ಲಿ ಅನೇಕರು ಮಾನಸಿಕ ಸಮಸ್ಯೆಗೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಆರಂಭದಿಂದ ಮಾನಸಿಕ ಒತ್ತಡಕ್ಕೆ ಒಳಗಾದವರನ್ನು ಪತ್ತೆ ಮಾಡಿ ಆಪ್ತ ಸಮಾಲೋಚನೆ ನಡೆಸಲಾಗುತ್ತಿದೆ. ಈವರೆಗೆ 26.08 ಲಕ್ಷ ಜನರೊಂದಿಗೆ ಆಪ್ತ ಸಮಾಲೋಚನೆ ನಡೆಸಲಾಗಿದೆ.
ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮ:
ಕೇಂದ್ರ ಸರ್ಕಾರದ 2022-23ನೇ ಸಾಲಿನ ಬಜೆಟ್ ನಲ್ಲಿ ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮ ನೀಡಿಲಾಗಿದ್ದು, ಇದಕ್ಕಾಗಿ ನ್ಯಾಷನಲ್ ಟೆಲಿ ಮೆಂಟಲ್ ಹೆಲ್ತ್ ಸೆಂಟರ್ ಫಾರ್ ಎಕ್ಸ್ ಲೆನ್ಸ್ ಎಂಬ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಈ ಕಾರ್ಯಕ್ರಮವು 23 ಕೇಂದ್ರಗಳನ್ನು ಒಳಗೊಂಡಿರುತ್ತದೆ. ಇದನ್ನು ಬೆಂಗಳೂರಿನ ನಿಮ್ಹಾನ್ಸ್ ನಿರ್ವಹಣೆ ಮಾಡಲಿದೆ. ಬೆಂಗಳೂರಿನ ಐಐಐಟಿ ಸಂಸ್ಥೆ ತಾಂತ್ರಿಕ ನೆರವು ನೀಡಲಿದೆ. ಇದರಿಂದಾಗಿ ಮಾನಸಿಕ ಆರೋಗ್ಯದ ನಿರ್ವಹಣೆ ಭವಿಷ್ಯದಲ್ಲಿ ಕರ್ನಾಟಕ ಮುಂದಾಳತ್ವ ವಹಿಸಿ ಮಾದರಿಯಾಗಿ ನಿಲ್ಲಲಿದೆ. ಇಂತಹ ಅವಕಾಶವನ್ನು ರಾಜ್ಯಕ್ಕೆ ನೀಡಿರುವ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಚಿವ ಡಾ ಸುಧಾಕರ್ ತಿಳಿಸಿದ್ದಾರೆ.
ಪಿಎಂ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳ ನಿರ್ಮಾಣ:
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳ ನಿರ್ಮಾಣ, 400 ವಂದೇ ಭಾರತ್ ರೈಲುಗಳು, ಆಧುನಿಕ ತಂತ್ರಜ್ಞಾನ ಇ-ಪಾಸ್ ಪೋರ್ಟ್ ವ್ಯವಸ್ಥೆ, 2 ಲಕ್ಷ ಅಂಗನವಾಡಿಗಳ ಉನ್ನತೀಕರಣ, ಹೊಸದಾಗಿ 3.8 ಕೋಟಿ ಮನೆಗಳಿಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕ, ಸೌರ ವಿದ್ಯುತ್ ವ್ಯವಸ್ಥೆಗಾಗಿ 19,500 ಕೋಟಿ ರೂಪಾಯಿ ಸೇರಿದಂತೆ ಮೊದಲಾದ ಯೋಜನೆಗಳು ದೇಶವನ್ನು ಎಲ್ಲಾ ಆಯಾಮಗಳಿಂದ ಸುಧಾರಣೆ ಮಾಡಲು ಪೂರಕವಾಗಿದೆ ಎಂದು ಸಚಿವ ಡಾ ಸುಧಾಕರ್ ಶ್ಲಾಘಿಸಿದ್ದಾರೆ.












Click it and Unblock the Notifications